ಶಿವಮೊಗ್ಗ; ತೂದೂರು-ಮುಂಡುವಳ್ಳಿ ಹೊಸ ಸೇತುವೆಗೆ ಸಿಎಂ ಒಪ್ಪಿಗೆ
ಶಿವಮೊಗ್ಗ, ಫೆಬ್ರವರಿ 09; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತೂದೂರು-ಮುಂಡುವಳ್ಳಿ ನೂತನ ಸೇತುವೆ ಕಾಮಗಾರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ನೀಡಿದ್ದಾರೆ.
ತೀರ್ಥಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ತಮ್ಮ ಕ್ಷೇತ್ರದ ನಾಯಕರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ನೂತನ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.
ತೀರ್ಥಹಳ್ಳಿ ತಾಲೂಕಿನ ಧೀರ್ಘ ಕಾಲದ ಬೇಡಿಕೆಯಾದ ತೂದೂರು-ಮುಂಡುವಳ್ಳಿ ನಡುವೆ ತುಂಗಾ ನದಿಗೆ ಅಡ್ಡಲಾಗಿ ಸುಮಾರು 20 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣವಾಗಲಿದೆ.

ನೂತನ ಸೇತುವೆ ಕಾಮಗಾರಿಯನ್ನು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತ ಗಳಿಸಲು ಮನವಿಪತ್ರ ಸಲ್ಲಿಸಿದ್ದರು. ನಿಯೋಗದಲ್ಲಿ ನವೀನ್ ಹೆದ್ದೂರು, ಸತೀಶ್ ಬೇಗುವಳ್ಳಿ, ಕವಿರಾಜ್, ಕಾನುಕೊಪ್ಪ ಶಿವ ಕುಮಾರ್, ಮಧು ತೂದೂರು ಮುಂತಾದವರಿದ್ದರು.
ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸೇತುವೆ ನಿರ್ಮಾಣ ಕಾಮಗಾರಿಯ ಯೋಜನೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಲು, ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ತೂದೂರು-ಮುಂಡುವಳ್ಳಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಅನುಷ್ಟಾನಗೊಂಡರೆ, ಸುಮಾರು 7-8 ಗ್ರಾಮ ಪಂಚಾಯತಿಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗಲಿದೆ.
ಹೊಸ ಸೇತುವೆಯಿಂದಾಗಿ ಪ್ರವಾಸಿ ಮತ್ತು ಯಾತ್ರಾ ಸ್ಥಳಗಳಾದ ಕುಪ್ಪಳ್ಳಿ, ಮೃಗವಧೆ, ಚಿಬ್ಬಲಗುಡ್ಡೆ, ಶೃಂಗೇರಿ, ಹೊರನಾಡು ಹಾಗೂ ಎನ್. ಆರ್. ಪುರ ಮುಂತಾದ ಪ್ರದೇಶಗಳಿಗೆ ಸಂಚಾರ ನಡೆಸಲು ಸಮೀಪದ ಮಾರ್ಗ ಸಿಗಲಿದೆ.
ಅಲ್ಲದೇ ವಿವಿಧ ಗ್ರಾಮಗಳಿಂದ ಮಾಳೂರು ಶಾಲೆ, ಕಾಲೇಜುಗೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಪತ್ರದ ಜೊತೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ಸಂಪರ್ಕ ಸೇತುವಾದ ಕಾಲುಸಂಕ; ಮಲೆನಾಡಿನ ಗ್ರಾಮಗಳಲ್ಲಿ ಹಳ್ಳ, ಕಾಲುವೆ ಮತ್ತಿತರೆ ನೀರಿನ ಮೂಲಗಳನ್ನು ದಾಟಲು ಸೂಕ್ತ ವ್ಯವಸ್ಥೆ ಇರುದೇ ಜನರು ಸುತ್ತುಬಳಸಿ ದೂರದ ಹಾದಿಯಲ್ಲಿ ಪ್ರಯಾಣ ಮಾಡಬೇಕಿದೆ. ಜನರ ಈ ಸಂಕಷ್ಟವನ್ನು ನೀಗಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಲುಸಂಕ ನಿರ್ಮಿಸಲಾಗುತ್ತಿದೆ.
ಅವಶ್ಯಕತೆ ಇರುವ ಕಡೆ ಗ್ರಾಮ ಪಂಚಾಯಿತಿ ಮೂಲಕ ಕಾಲುಸಂಕ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆದವಳ್ಳಿ ಮತ್ತು ಕೊಳಗಿ ಊರಿನ ಗ್ರಾಮಸ್ಥರು ಸೊನಲೆಗೆ ಹೋಗಲು ಹಳ್ಳ ದಾಟಬೇಕಿತ್ತು. ಈ ಹಳ್ಳಕ್ಕೆ ಕಾಲು ಸಂಕ ಅಥವಾ ಸೇತುವೆ ಇಲ್ಲದ ಕಾರಣ ಜನರು ಸಂಚಾರ ನಡೆಸುವುದು ಕಷ್ಟವಾಗಿತ್ತು.
ಆದವಳ್ಳಿ ಗ್ರಾಮ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟಿದೆ. ಹೊಸನಗರ ತಾಲ್ಲೂಕು ಕೇಂದ್ರದಿಂದ 14 ಕಿ. ಮೀ. ದೂರದಲ್ಲಿದೆ. ಗ್ರಾಮ ಪಂಚಾಯತಿಯಿಂದ ಸುಮಾರು 2 ಕಿ. ಮೀ ದೂರದಲ್ಲಿದೆ. ಈ ಗ್ರಾಮವು ಆರ್ಥಿಕವಾಗಿ ಹಿಂದುಳಿದ ಗ್ರಾಮವಾಗಿದ್ದು, ಕೂಲಿ ಕೆಲಸವನ್ನು ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ. ಜನರು ತಮ್ಮ ದೈನಂದಿನ ವ್ಯವಹಾರಕ್ಕೆ ಸೊನಲೆ ಗ್ರಾಮಕ್ಕೆ ಬರುವುದು ತೀರಾ ಅಗತ್ಯವಾಗಿತ್ತು.
ಆದವಳ್ಳಿ ಮತ್ತು ಕೊಳಗಿ ಗ್ರಾಮದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸೊನಲೆ ಗ್ರಾಮ ಪಂಚಾಯಿತಿ 2019-20ನೇ ಸಾಲಿನಲ್ಲಿ ಅಂದಾಜು ಮೊತ್ತ ರೂ. 17,42,000 ಮೊತ್ತದಲ್ಲಿ ಆದವಳ್ಳಿ ಮತ್ತು ಕೊಳಗಿ ಗ್ರಾಮದಿಂದ ಸೊನಲೆಗೆ ಹಸೆಕೊಡಿಗೆ ಹಳ್ಳದ ಮೂಲಕ ಸಾಗಲು ಕಾಲುಸಂಕ ಕಾಮಗಾರಿಗೆ ಅನುಮೋದನೆ ನೀಡಿತು.
ಆದವಳ್ಳಿ ಗ್ರಾಮದಿಂದ ಸೊನಲೆಗೆ ಹೋಗುವ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆದು ನಂತರ ತಾಲ್ಲೂಕು ಪಂಚಾಯತಿ ಮುಖಾಂತರ ಕ್ರಿಯಾಯೋಜನೆ ಅನುಮೋದನೆ ಪಡೆದು ಅನುಷ್ಟಾನ ಮಾಡಲಾಗಿದೆ. ಕಿರು ಸೇತುವೆ ನಿರ್ಮಾಣದಿಂದಾಗಿ ಆದವಳ್ಳಿ ಗ್ರಾಮದ ಸುಮಾರು 100 ಕುಟುಂಬಗಳಿಗೆ ಅನುಕೂಲವಾಗಿದೆ.
ಸಿಇಓ ಸಂತಸ; ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಎಂ. ಎಲ್. ವೈಶಾಲಿ ಮಾತನಾಡಿದ್ದು, "ಒಟ್ಟು 2422 ಮಾನವ ದಿನಗಳನ್ನು ಸೃಷ್ಠಿಸಲಾಗಿದ್ದು, ಕುಶಲ ಕೂಲಿ ಮೊತ್ತ ರೂ. 99294 ಪಾವತಿಸಲಾಗಿದೆ. ಜನರ ದೈನಂದಿನ ವ್ಯವಹಾರಕ್ಕೆ ಹಸೆಕೊಡಿಗೆ ಹಳ್ಳಕ್ಕೆ ಕಿರು ಸೇತುವೆ ಅವಶ್ಯಕವಾದ್ದರಿಂದ ಜನರ ಆಶೋತ್ತರಗಳಿಗೆ ಸ್ಪಂದಿಸಿ ಈ ಕಾಮಗಾರಿಯ ನಿರ್ಮಾಣ ಮಾಡಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications