ಖಾಸಗಿ ಶಾಲೆಗಳ ಬಂದ್ ಕರೆ: ಮಹತ್ವದ ಸಭೆ ಕರೆದ ಶಿಕ್ಷಣ ಸಚಿವರು
ಶಿವಮೊಗ್ಗ, ಆಗಸ್ಟ್ 07: ಕರ್ನಾಟಕದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಆಗಸ್ಟ್ 21ರಿಂದ ರಾಜ್ಯಾದ್ಯಂತ ಶಾಲೆಗಳನ್ನು ಬಂದ್ ಮಾಡುವುದಾಗಿ ಹೇಳಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದೆ. ಆದ್ದರಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಮಹತ್ವದ ಸಭೆಯನ್ನು ಕರೆದಿದ್ದಾರೆ.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬುಧವಾರ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕವನ್ನು ಉದ್ಘಾಟಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಆಗಸ್ಟ್ 15ರಂದು ಕರಾಳ ದಿನಾಚರಣೆಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಅವರು ಆಚರಣೆ ಮಾಡಲಿ, ಆ ಹಕ್ಕು ಅವರಿಗಿದೆ. ಅವರ ಎಲ್ಲಾ ಮನವಿಗೆ ಸ್ಪಂದಿಸಿದ್ದೇವೆ, ಸಮಸ್ಯೆಗೆ ಪರಿಹರಿಸಿದ್ದೇವೆ" ಎಂದರು.
ಬೆಂಗಳೂರಿನಲ್ಲಿ ಸಭೆ: ಸಚಿವ ಮಧು ಬಂಗಾರಪ್ಪ ಮಾತನಾಡಿ, "ರಾಜ್ಯದ ಖಾಸಗಿ ಶಾಲೆಗಳ ಬೇಕು-ಬೇಡಗಳನ್ನು ಸರ್ಕಾರದ ವತಿಯಿಂದ ಚರ್ಚಿಸಲು ನಾಳೆ (ಗುರುವಾರ) ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿದೆ" ಎಂದು ಹೇಳಿದರು.
"ಈಗಾಗಲೇ ಅವರು ನೀಡಿರುವ ಮನವಿಯನ್ನು ಗಮನಿಸಲಾಗಿದ್ದು, ಅವರ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಿರ್ಣಯ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ರುಪ್ಸಾ ಅನುದಾನ ರಹಿತ ಖಾಸಗಿ ಶಾಲೆಗಳ ನವೀಕರಣಕ್ಕೆ ವಿಧಿಸಿರುವ ಷರತ್ತುಗಳ ಗೊಂದಲ ಸರಿಪಡಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ. ಅಲ್ಲದೇ ಇದಕ್ಕಾಗಿ 15 ದಿನಗಳ ಗಡುವು ನೀಡಿದೆ. ಸರ್ಕಾರ ಸ್ಪಂದಿಸದಿದ್ದರೆ ಆಗಸ್ಟ್ 21ರಿಂದ ರಾಜ್ಯಾದ್ಯಂತ ಖಾಸಗಿ ಶಾಲೆಗಳನ್ನು ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದೆ.
ಈ ಕುರಿತು ರುಪ್ಸಾದ ರಾಜ್ಯಾಧ್ಯಕ್ಷ ಡಾ. ಹಾಲನೂರು ಲೇಪಾಕ್ಷಿ ಮಾತನಾಡಿದ್ದು, "ಶಾಲಾ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಖಾಸಗಿ ಶಾಲೆಗಳ ನವೀಕರಣಕ್ಕೆ ಇಲಾಖೆ ನಿಗದಿ ಮಾಡಿರುವ 64 ಅಂಶಗಳು ಅವೈಜ್ಞಾನಿಕವಾಗಿವೆ" ಎಂದು ಆರೋಪಿಸಿದರು.
"ಈಗ ವಿಧಿಸಿರುವ 64 ಅಂಶಗಳ ಅನ್ವಯ ದಾಖಲೆ ಪಡೆಯಲಾಗುತ್ತಿದೆ. ಇದರಿಂದ ಶಾಲೆಗಳ ನವೀಕರಣ ಪಡೆಯುವುದು ಕಷ್ಟವಾಗುತ್ತಿದೆ. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿ ಕೈ ಬಿಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ" ಎಂದರು.
"ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮಹಾನಗರ ಪಾಲಿಕೆ, ನಗರಸಭೆಗಳು ಸೇವಾ ತೆರಿಗೆ ಹಾಗೂ ಇತರೆ ತೆರಿಗೆಗಳನ್ನು ಖಾಸಗಿ ಶಾಲೆಗಳಿಂದ ಸಂಗ್ರಹ ಮಾಡುತ್ತಿವೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದರೂ ಸಹ ಯಾವುದೇ ಉಪಯೋಗವಾಗಿಲ್ಲ" ಎಂದು ದೂರಿದರು.
ಸರ್ಕಾರ ಕೂಡಲೇ ರುಪ್ಸಾ ಸೇರಿದಂತೆ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸಭೆಯನ್ನು ನಡೆಸಬೇಕು. ಇಲಾಖೆಯಿಂದ ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಸರ್ಕಾರ ಸ್ಪಂದಿಸದಿದ್ದರೆ ಶಾಲೆ ಬಂದ್ ಮಾಡಿ ಬೆಂಗಳೂರು ಚಲೋ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಲಾಗಿತ್ತು.












Click it and Unblock the Notifications