ಸಾಮೂಹಿಕ ವಿವಾಹದಲ್ಲಿ ಆಯನೂರು ಮಂಜುನಾಥ್ ಪುತ್ರಿ ವಿವಾಹ
ಶಿವಮೊಗ್ಗ, ಡಿಸೆಂಬರ್ 10 : ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪುತ್ರಿಯ ವಿವಾಹವನ್ನು ಮಾಡಲಿದ್ದಾರೆ. ಜನವರಿ 30ರಂದು ಸಾಮೂಹಿಕ ವಿವಾಹ ನಡೆಯಲಿದೆ.
ಮಾಜಿ ಶಾಸಕ ಕೆ. ಜಿ. ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದರು. "ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಜನವರಿ 30 ರಂದು ಧರ್ಮಶ್ರೀ ಸೇವಾ ಟ್ರಸ್ಟ್ ಸಾಮೂಹಿಕ ವಿವಾಹವನ್ನು ಆಯೋಜಿಸಿದೆ" ಎಂದರು.
ಆಯನೂರು ಮಂಜುನಾಥ್ ದಂಪತಿ ಸಾಮೂಹಿಕ ವಿವಾಹದಲ್ಲಿ ತಮ್ಮ ಪುತ್ರಿಯ ವಿವಾಹವನ್ನು ಮಾಡಲಿದ್ದಾರೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಇತರ 100 ಜೋಡಿಗಳ ಎಲ್ಲಾ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದಾರೆ.

ವರನಿಗೆ ಪಂಚೆ, ಶರ್ಟ್, ವಧುವಿಗೆ ತಾಳಿ, ಕಾಲುಂಗುರ ಮತ್ತು ವಧು-ವರರ ತಂದೆ-ತಾಯಿಗಳಿಗೆ ಬಟ್ಟೆಯನ್ನು ನೀಡಲಾಗುತ್ತದೆ. 5 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸಾಮೂಹಿಕ ವಿವಾಹದದಲ್ಲಿ ಪಾಲ್ಗೊಳ್ಳಲು ಬಯಸುವ ಜೋಡಿಗಳು ಡಿಸೆಂಬರ್ 30ರೊಳಗೆ ಹೆಸರು ನೋಂದಾವಣಿ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9448105059 ನಂಬರ್‌ಗೆ ಕರೆ ಮಾಡಬಹುದು.
ಸಿದ್ದರಾಮಯ್ಯ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ತಮ್ಮ ಪುತ್ರಿಯ ವಿವಾಹವನ್ನು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.












Click it and Unblock the Notifications