ಮಾಂಸ ಮಾರಾಟಗಾರರೇ ಗಮನಿಸಿ: ಶಿವರಾತ್ರಿಯಂದು ಇಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ...
ಶಿವಮೊಗ್ಗ ಮಾರ್ಚ್ 6: ಮಾರ್ಚ್ 8ರಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ ಮಾಂಸ ಮಾರಾಟಗಾರರು ಹಾಗೂ ವ್ಯಾಪಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಸಭೆ ನಡೆಸಿದ ಬಳಿಕ ಶಿವಮೊಗ್ಗ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮಾರ್ಚ್ 8ರಂದು ದೇಶಾದ್ಯಂತ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ವೇಳೆ ಕಟ್ಟುನಿಟ್ಟಿನ ಆಹಾರ ಕ್ರಮವನ್ನು ಪಾಲಿಸಲಾಗುತ್ತದೆ. ಜೊತೆಗೆ ಸಾತ್ವಿಕ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಇದರ ಬೆನ್ನಲ್ಲೆ ಮಾಂಸ ಮಾರಾಟಕ್ಕೆ ಈ ದಿನ ಬ್ರೇಕ್ ಹಾಕಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡದಿರಲು ಹಾಗೂ ಪ್ರಾಣಿ ವಧೆ ಮಾಡದೇ ಇರಲು ಸಾರ್ವಜನಿಕರಲ್ಲಿ ಕೋರಲಾಗಿದೆ. ಜೊತೆಗೆ ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.
ಶಿವರಾತ್ರಿಯು ಶಿವನಿಗೆ ಅರ್ಪಿತವಾದ ಹಬ್ಬವಾಗಿದೆ. ಈ ದಿನ ಶಿವನ ಭಕ್ತರು ಉಪವಾಸ ಮಾಡುವ ಮೂಲಕ ರಾತ್ರಿ ಇಡೀ ಜಾಗರಣೆ ಮಾಡುತ್ತಾರೆ. ಶಿವ ಆರಾಧನೆ ಮಾಡಿ ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗುತ್ತಾರೆ. ಜೊತೆಗೆ ಶಿವನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ಈ ದಿನ ನಡೆಯುತ್ತವೆ. ಶಿವರಾತ್ರಿಯಂದು ಕಠಿಣ ಉಪವಾಸ ಮಾಡಿದರೆ ಶಿವನ ಆಶೀರ್ವಾದ ಸಿಗಲಿದೆ ಎಂದು ನಂಬಲಾಗುತ್ತದೆ.












Click it and Unblock the Notifications