KS Eshwarappa: ವಿಜಯೇಂದ್ರನನ್ನು ಬದಲಾಯಿಸಿ, ನಾಳೆಯೇ ಕಣದಿಂದ ಹಿಂದೆ ಸರಿಯುವೆ: ಹಠ ಬಿಡದ ಈಶ್ವರಪ್ಪ
ಶಿವಮೊಗ್ಗ, ಏಪ್ರಿಲ್.02: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಷ್ಟೇ ಕುತೂಹಲ ಕೆರಳಿಸಿರುವ ಕ್ಷೇತ್ರವೆಂದರೆ ಅದು ಶಿವಮೊಗ್ಗ ಲೋಕಸಭಾ ಕ್ಷೇತ್ರ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಬಂಡಾಯದಿಂದ ದಿನೇ ದಿನೇ ಸುದ್ದಿಯಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಈಶ್ವರಪ್ಪ ಬಂಡಾಯ ಎದ್ದಿದ್ದಾರೆ.
ಬಂಡಾಯ ಶಮನಕ್ಕೆ ರಾಜ್ಯ ನಾಯಕರು ಪ್ರಯತ್ನ ಪಟ್ಟು ಸುಸ್ತಾದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈಶ್ವರಪ್ಪ ಅವರಿಗೆ ಕರೆ ಮಾಡಿದ್ದಾರೆ. ಅಮಿತ್ ಶಾ ಅವರು ತಮಗೆ ಕರೆ ಮಾಡಿ ಈ ಲೋಕಸಭಾ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ. ಆದರೆ ತಾವು ಸ್ಪರ್ಧಿಸುವ ನಿರ್ಧಾರದಲ್ಲಿ ದೃಢವಾಗಿ ನಿಂತಿದ್ದೇನೆ ಎಂದು ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಮಂಗಳವಾರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರನನ್ನು ಬದಲಾಯಿಸಲಿ!
ಪಕ್ಕದ ಹಾವೇರಿಯಿಂದ ಸ್ಪರ್ಧಿಸಲು ತಮ್ಮ ಪುತ್ರ ಕೆ ಇ ಕಾಂತೇಶ್‌ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ. ಬಿಜೆಪಿ ಮತ್ತೆ ಪಕ್ಷದ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಸಂಸದ ಬಿ ವೈ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದೆ.
ಪಕ್ಷದ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯ ಯಡಿಯೂರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಭರವಸೆ ನೀಡಿ ದ್ರೋಹ ಮಾಡಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿರುವ ಈಶ್ವರಪ್ಪ ಆರೋಪಿಸಿದ್ದಾರೆ. ಹೀಗಾಗಿ ಕುಟುಂಬದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಈ ಬೆನ್ನಲ್ಲೇ, ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಭೇಟಿ ನೀಡಿರುವ ಅಮಿತ್ ಶಾ ಅವರು ಈಶ್ವರಪ್ಪಗೆ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುಂತೆ ಸೂಚಿಸಿದ್ದಾರೆ. ಆದರೆ, ಈಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಬದಲಾಯಿಸಲಿ. ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಅವರಿಗೆ ತಿಳಿಸಿದ್ದೇನೆ ಎಂದಿದ್ದಾರೆ.

"ಇಂದು ಬೆಳಗ್ಗೆ ಅಮಿತ್ ಶಾ ನನಗೆ ಕರೆ ಮಾಡಿದ್ದರು. ನೀವು ಅಂತಹ ಹಿರಿಯ ನಾಯಕರಾಗಿದ್ದು, ಚುನಾವಣೆಗೆ ಸ್ಪರ್ಧಿಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು. ನಾನು ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂದು ಅವರು ನನ್ನನ್ನು ಕೇಳಿದರು. ಚುನಾವಣೆಯಲ್ಲಿ ಸ್ಪರ್ಧಿಸಬೇಡಿ ಮತ್ತು ನಾಮಪತ್ರ ಹಿಂಪಡೆಯಬೇಡಿ ಎಂದು ಅಮಿತ್ ಶಾ ಕೇಳಿಕೊಂಡರು. ಮುಂದಿನ ದಿನಗಳಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು. ಮೂರು ತಿಂಗಳ ಹಿಂದೆ ನಾನು ದೆಹಲಿಗೆ ಹೋಗಿದ್ದೆ. ಆಗ ಅವರಿಗೆ ಪಕ್ಷದಲ್ಲಿ ಪರಿಸ್ಥಿತಿ ವಿವರಿಸಿದ್ದೆ. ಆದರೆ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ" ಎಂದು ಈಶ್ವರಪ್ಪ ಹೇಳಿದ್ದಾರೆ.
ಏಪ್ರಿಲ್ 3 ರಂದು (ಬುಧವಾರ) ದೆಹಲಿಯಲ್ಲಿ ತಮ್ಮನ್ನು ಭೇಟಿಯಾಗುವಂತೆ ಅಮಿತ್ ಶಾ ಹೇಳಿದ್ದಾರೆ. ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯಿರಿ ಎಂದು ಒತ್ತಡ ಹೇರಬೇಡಿ ಎಂದು ಹೇಳಿದ್ದೇನೆ. ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸುತ್ತಿದ್ದೇನೆ ಎಂಬ ನನ್ನ ಭಾವನೆಗಳನ್ನು ಅವರು ಅರ್ಥಮಾಡಿಕೊಂಡಿರಬೇಕು. ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದಿದ್ದಾರೆ.
"ಅಮಿತ್ ಶಾ ಜೊತೆಯಲ್ಲಿ ನಾನು ನನ್ನ ಮಗನ ಬಗ್ಗೆ ಮಾತನಾಡಿದ್ದೇನೆ. ಅವನ ಭವಿಷ್ಯದ ಬಗ್ಗೆ ಚಿಂತಿಸಬೇಡಿ ಮತ್ತು ರಾಜ್ಯ ಬಿಜೆಪಿ ಘಟಕಕ್ಕೆ ಸಹಾಯ ಮಾಡಿದರೆ ಸಾಕು ಎಂದು ಹೇಳಿದ್ದಾರೆ. ನಾನು ನಾಳೆ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದೇನೆ. ತನ್ನ ಮಗನ ರಾಜಕೀಯ ಭವಿಷ್ಯವನ್ನು ನೋಡಿಕೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
"ವಂಶಾಡಳಿತ ರಾಜಕಾರಣವನ್ನು ಕೊನೆಗಾಣಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವುದನ್ನು ಬಿಜೆಪಿ ಕರ್ನಾಟಕ ಘಟಕ ಅನುಸರಿಸಬೇಕು. ನರೇಂದ್ರ ಮೋದಿಯವರು ರಾಜಕೀಯ ಪಕ್ಷವನ್ನು ಕುಟುಂಬದಿಂದ ಮುಕ್ತಗೊಳಿಸುವಂತೆ ಕರೆ ನೀಡಿದ್ದಾರೆ. ಆದರೆ ಬಿಜೆಪಿ ಕರ್ನಾಟಕ ಘಟಕದಲ್ಲಿ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿದೆ"
ಯಡಿಯೂರಪ್ಪ ಮತ್ತು ಅವರ ಪುತ್ರರಾದ ಶಿವಮೊಗ್ಗ ಸಂಸದ ರಾಘವೇಂದ್ರ, ರಾಜ್ಯ ಘಟಕದ ಅಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಅವರನ್ನು ಉದ್ದೇಶಿಸಿ ಬಿಜೆಪಿಯನ್ನು ತಂದೆ-ಮಕ್ಕಳ ಹಿಡಿತದಿಂದ ಮುಕ್ತಗೊಳಿಸಲು ನಾನು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.












Click it and Unblock the Notifications