ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ: 18 ರಿಂದ 21 ಸುತ್ತು ಎಣಿಕೆ
ಶಿವಮೊಗ್ಗ, ಜೂನ್ 01: ಶಿವಮೊಗ್ಗ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಜೂನ್ 4ರಂದು ನಡೆಯಲಿದೆ. ಚುನಾವಣಾ ಆಯೋಗದ ನಿಯಮಾನುಸಾರ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮತ ಎಣಿಕೆಗೆ ಒಟ್ಟು 523 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಪತ್ರಿಕಾಗೊಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಲೋಕಸಭಾ ಕ್ಷೇತ್ರದ ಮತ ಎಣಿಕೆ ಜೂನ್ 4ರ ಮಂಗಳವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ.

ಲೋಕಸಭಾ ಚುನಾವಣೆಗೆ ಮತದಾನ ಮಾಡಲು ಒಟ್ಟು 17,52,885 ಮತದಾರರು ಮತ ಚಲಾವಣೆ ಮಾಡಲು ಅರ್ಹರಿದ್ದರು. ಒಟ್ಟು 13,72,949 ಮತಗಳು ಚಲಾವಣೆಯಾಗಿದೆ. ಮತ ಎಣಿಕೆ ಕುರಿತು ಅಭ್ಯರ್ಥಿಗಳಿಗೆ ಅಥವಾ ಚುನಾವಣಾ ಏಜೆಂಟರಿಗೆ ಜೂನ್ 4ರಂದು ಬೆಳಗ್ಗೆ 7 ಗಂಟೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯ ಆವರಣಕ್ಕೆ ಆಗಮಿಸಲು ತಿಳಿಸಲಾಗಿದೆ.
14 ಟೇಬಲ್‌ಗಳಲ್ಲಿ ಎಣಿಕೆ: ಮಂಗಳವಾರ ಬೆಳಗ್ಗೆ 7 ಗಂಟೆಗೆ ಭದ್ರತಾ ಕೊಠಡಿಯ ಬಾಗಿಲನ್ನು ತೆರೆಯಲಾಗುತ್ತದೆ. ಈ ಕುರಿತು ಅಭ್ಯರ್ಥಿಗಳ ಗಮನಕ್ಕೆ ತರಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಮತ ಎಣಿಕೆ ಟೇಬಲ್‌ಗಳು ಇರುತ್ತದೆ. ಮತ ಎಣಿಕೆ ಟೇಬಲ್ ಕೌಂಟರ್‌ಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಪ್ರವೇಶಿಸಲು ಅವಕಾಶವಿರುತ್ತದೆ.
ಅಂಚೆ ಮತಪತ್ರಗಳ ಎಣಿಕೆಯನ್ನು ಬೆಳಗ್ಗೆ 8 ಗಂಟೆಗೆ ಚುನಾವಣಾಧಿಕಾರಿಗಳ ಮೇಜಿನಲ್ಲಿ ಆರಂಭಿಸಲಾಗುವುದು. ಅಂಚೆ ಮತಪತ್ರಗಳ ಎಣಿಕೆ ಆರಂಭವಾದ 30 ನಿಮಿಷಗಳ ನಂತರ ಕಂಟ್ರೋಲ್ ಯೂನಿಟ್ ಮೂಲಕ ಮತ ಎಣಿಕೆಯನ್ನು ಆರಂಭಿಸಲಾಗುತ್ತದೆ. ಪ್ರತಿ ಮತ ಎಣಿಕೆ ಟೇಬಲ್‌ಗೆ ಒಬ್ಬರು ಮೇಲ್ವಿಚಾರಕರು, ಒಬ್ಬರು ಸಹಾಯಕರು ಮತ್ತು ಒಬ್ಬರು ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕಗೊಳಿಸಿ ತರಬೇತಿ ನೀಡಲಾಗಿದೆ.
ಇವಿಎಂ ಮತ ಎಣಿಕೆಗಳು ಪೂರ್ಣಗೊಂಡ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐದು ವಿವಿಪ್ಯಾಟ್‍ಗಳ ಎಣಿಕೆಯನ್ನು ಒಂದಾದ ಮೇಲೆ ಒಂದರಂತೆ ಎಣಿಕೆ ಕಾರ್ಯ ಮಾಡಲಾಗುತ್ತದೆ. ಮತ ಎಣಿಕೆ ಹಾಲ್‌ನಲ್ಲಿ ಮೊಬೈಲ್‌ಗಳಿಗೆ ಅವಕಾಶವಿರುವುದಿಲ್ಲ.
ಮತ ಎಣಿಕೆ ಕೇಂದ್ರ ಆವರಣದ ಸುತ್ತಮುತ್ತ ಸೆಕ್ಷನ್ 144 ಅನ್ನು ಜಾರಿ ಮಾಡಲಾಗಿದೆ. ಮಾಧ್ಯಮ ಕೇಂದ್ರವನ್ನು ಮತ ಎಣಿಕೆ ಆವರಣದಲ್ಲಿ ಪ್ರತ್ಯೇಕ ಕೊಠಡಿಯನ್ನು ತೆರೆಯಲಾಗಿದೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 18 ರಿಂದ 21 ಸುತ್ತಿನ ಎಣಿಕೆ ನಡೆಯಲಿದ್ದು ಪ್ರತಿಯೊಂದು ಸುತ್ತಿನ ಫಲಿತಾಂಶವನ್ನು ಚುನಾವಣಾ ವೀಕ್ಷಕರ ಸಹಿ ಹಾಕಿದ ನಂತರ ಮಾಧ್ಯಮ ಹಾಗೂ ಮೈಕ್ ಮೂಲಕ ತಿಳಿಸಲಾಗುತ್ತದೆ.
ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಮಾತನಾಡಿ ಲೋಕಸಭಾ ಚುನಾವಣೆ ಮತ ಏಣಿಕೆ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸಹ್ಯಾದ್ರಿ ಕಾಲೇಜು ಮುಖ್ಯರಸ್ತೆ, ಎಂಆರ್ ಎಸ್ ವೃತ್ತದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ವಾಹನ ಸವಾರರಿಗೆ ಬದಲಿ ಮಾರ್ಗ ಕಲ್ಪಿಸಲಾಗಿದೆ ಎಂದರು.
1000ಕ್ಕೂ ಅಧಿಕ ಪೋಲಿಸ್ ಸಿಬ್ಬಂದಿ, ಹೋಂ ಗಾರ್ಡ್, ಕೆಎಸ್‍ಆರ್‌ಪಿ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಭೆಗಳನ್ನು ನಡೆಸಿ ಮಾಹಿತಿಯನ್ನು ನೀಡಿಲಾಗಿದೆ.
ಶಿವಮೊಗ್ಗ ಲೋಕಸಭಾ ಚುನಾವಣೆ 2024ರ ಫಲಿತಾಂಶ ಕುತೂಹಲ ಮೂಡಿಸಿದೆ. ಮೇ 7ರಂದು ಕ್ಷೇತ್ರದಲ್ಲಿ ಶೇ 78.33ರಷ್ಟು ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಹಾಲಿ ಸಂಸದ ಬಿ. ವೈ. ರಾಘವೇಂದ್ರ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ. ಪಕ್ಷೇತರ ಅಭ್ಯರ್ಥಿಯಾಗಿ ಕೆ. ಎಸ್. ಈಶ್ವರಪ್ಪ ಕಣದಲ್ಲಿದ್ದಾರೆ.












Click it and Unblock the Notifications