ಶಿವಮೊಗ್ಗ ಮಹಾನಗರ ಪಾಲಿಕೆ ವಿಸ್ತರಣೆ, 19 ಹಳ್ಳಿಗಳು ಸೇರ್ಪಡೆ
ಶಿವಮೊಗ್ಗ, ಮೇ 28: ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿ ಇನ್ನಷ್ಟು ವಿಸ್ತರಣೆಯಾಗಲಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡುಗಳಿದ್ದು, 2011ರ ಜನಗಣತಿ ಪ್ರಕಾರ 3.22 ಲಕ್ಷ ಜನಸಂಖ್ಯೆ ಇದೆ. ಪ್ರಸ್ತಾವನೆಯಂತೆ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಇನ್ನೂ 19 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗುತ್ತದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಮ್ಮ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಆಯೋಜಿಸಲಾಗಿದ್ದ ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

"ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ಸಂಬಂಧ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಪ್ರದೇಶ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೊಳಪಡುವ 9 ಗ್ರಾಮ ಪಂಚಾಯಿತಿಗಳ 19 ಹಳ್ಳಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸೇರ್ಪಡೆಗೊಳಿಸುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಆಯಾ ಕ್ಷೇತ್ರಗಳ ಶಾಸಕರು ಹಾಗೂ ಆಯಾ ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ 15 ದಿನದಲ್ಲಿ ವರದಿ ಸಲ್ಲಿಸುವಂತೆ" ಅಧಿಕಾರಿಗಳಿಗೆ ಸೂಚಿಸಿದರು.
"ರಾಜ್ಯ ಆಡಳಿತ ಸುಧಾರಣಾ ಆಯೋಗವು ಬೆಳೆಯುತ್ತಿರುವ ನಗರ, ಪಟ್ಟಣ ಪ್ರದೇಶಗಳನ್ನು ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ" ಎಂದು ಗುರುದತ್ತ ಹೆಗಡೆ ಹೇಳಿದರು.
"ಕಳೆದ 20 ವರ್ಷಗಳಿಂದ ಮಹಾನಗರ ಪಾಲಿಕೆಯ ವ್ಯಾಪ್ತಿ ವಿಸ್ತರಿಸುವ ಕಾರ್ಯ ಆಗಿರುವುದಿಲ್ಲ. 1993ರಲ್ಲಿ ಪಾಲಿಕೆಯ ವ್ಯಾಪ್ತಿಯನ್ನು ಗುರುತಿಸುವ ಕಾರ್ಯ ನಡೆದಿತ್ತು. ಆದರೆ, ಇತ್ತೀಚಿನ ಒಂದು ದಶಕದಿಂದೀಚೆಗೆ ಕೃಷಿ ಪ್ರದೇಶದ ವ್ಯಾಪ್ತಿ ಕಡಿಮೆಯಾಗಿರುವ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಿರುವ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರವು ಮಾರ್ಗದರ್ಶನ ನೀಡಿತ್ತು" ಎಂದರು.
"ಈಗಾಗಲೇ ಪಾಲಿಕೆ ವ್ಯಾಪ್ತಿಯನ್ನೂ ಮೀರಿ ಅನೇಕ ಬಡಾವಣೆಗಳು ನಿರ್ಮಾಣಗೊಂಡಿವೆ. ಇವುಗಳ ವ್ಯವಸ್ಥಿತ ನಿರ್ವಹಣೆ ಗ್ರಾಮ ಪಂಚಾಯಿತಿಗಳಿಂದ ಕಷ್ಟಸಾಧ್ಯ. ಅಲ್ಲದೇ ಅದಕ್ಕೆ ಪೂರಕವಾದ ಪರಿಕರಗಳು ಸಹ ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲದಿರುವುದು ಕಾರಣವಾಗಿದೆ. ಅಲ್ಲದೇ ಪ್ರದೇಶ ಅಭಿವೃದ್ಧಿ ಹೊಂದಿದಂತೆ ಅಲ್ಲಿನ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡ ಸರ್ಕಾರದ ಕರ್ತವ್ಯವಾಗಿದೆ" ಎಂದು ಹೇಳಿದರು.
2011ರ ಜನಗಣತಿಯಂತೆ ಪಾಲಿಕೆ ವ್ಯಾಪ್ತಿಯಲ್ಲಿ ಕನಿಷ್ಟ 3 ಲಕ್ಷ ಜನಸಂಖ್ಯೆ ಇತ್ತು. ಒಂದು ಅಂದಾಜಿನ ಪ್ರಕಾರ 2021ರ ಹೊತ್ತಿಗೆ 4.22 ಲಕ್ಷ ಜನಸಂಖ್ಯೆ ಹಾಗೂ ಪಾಲಿಕೆ ಪ್ರದೇಶದ ವ್ಯಾಪ್ತಿಯಿಂದ ಕನಿಷ್ಟ 35000 ಜನಸಂಖ್ಯೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಪರ-ವಿರೋಧದ ಅಭಿಪ್ರಾಯಗಳನ್ನು ಆಧರಿಸಿ, ಮುಂದಿನ 15 ದಿನಗಳೊಳಗಾಗಿ ಮತ್ತೊಮ್ಮೆ ಸಭೆ ಕರೆದು ಅಂತಿಮ ಹಂತದ ಸಮಾಲೋಚನೆಯ ನಂತರ ಗಡಿ ಪ್ರದೇಶದ ನಕ್ಷೆಯನ್ನು ಗುರುತಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಪ್ರಸ್ತುತ ಮಹಾನಗರ ಪಾಲಿಕೆ ಆಯುಕ್ತರ ಮೂಲಕ 35 ವಾರ್ಡ್‌ಗಳ ಆಡಳಿತವನ್ನು ನಿರ್ವಹಿಸಲಾಗುತ್ತಿದೆ.
ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತರಣೆಗೊಂಡರೆ ಅಬ್ಬಲಗೆರೆ, ಕೋಟೆಗಂಗೂರು, ಮುದ್ದಿನಕೊಪ್ಪ, ಮೇಲಿನಹನಸವಾಡಿ, ಗೋಂದಿಚಟ್ನಳ್ಳಿ, ನಿಧಿಗೆ, ಮಾಚೇನಹಳ್ಳಿ, ಸಂತೇಕಡೂರು, ಪುರದಾಳು, ಗುಡ್ಡದಅರೆಕೆರೆ, ತ್ಯಾವರೆಕೊಪ್ಪ. ಅಗಸವಳ್ಳಿ ಮುಂತಾದ ಗ್ರಾಮ ಪಂಚಾಯಿತಿಗಳ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಗ್ರಾಮಗಳು ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.












Click it and Unblock the Notifications