ಆಗುಂಬೆ ಘಾಟ್ ಸುರಂಗ ಮಾರ್ಗದ ರಸ್ತೆ ಯೋಜನೆ; ಅಪ್‌ಡೇಟ್
ಶಿವಮೊಗ್ಗ, ಜುಲೈ 01: ಮಲ್ಪೆ- ತೀರ್ಥಹಳ್ಳಿಯ ರಾಷ್ಟ್ರೀಯ ಹೆದ್ದಾರಿ-169ಎ ಚತುಷ್ಪಥ ಯೋಜನೆಯಲ್ಲಿ ಆಗುಂಬೆ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಈ ಯೋಜನೆ ಕುರಿತು ಡಿಪಿಆರ್ ಸಿದ್ಧಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಪ್ಪಿಗೆ ನೀಡಿದೆ.
ಸೋಮವಾರ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಕೇಂದ್ರ ಭೂಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿದರು. ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿವೃದ್ಧಿಯಾಗಬೇಕಾದ ಹೆದ್ದಾರಿ ಕಾಮಗಾರಿಗಳ ಅಗತ್ಯತೆಗಳ ಬಗ್ಗೆ ಚರ್ಚಿಸಿದರು.

ಈ ಸಮಯದಲ್ಲಿ ಅವರು ಆಗುಂಬೆ ಘಾಟ್ ಸುರಂಗ ಮಾರ್ಗ ನಿರ್ಮಾಣ ಯೋಜನೆ ಕುರಿತು ಸಹ ಚರ್ಚೆ ನಡೆಸಿದರು. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಉಳಿದಂತೆ ಯಾವ-ಯಾವ ಯೋಜನೆ ಕುರಿತು ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆಗುಂಬೆ ಘಾಟ್ ರಸ್ತೆ ಯೋಜನೆ: ಸಂಸದ ಬಿ. ವೈ. ರಾಘವೇಂದ್ರ ಅವರು ಆಗುಂಬೆ ಘಾಟ್ ರಸ್ತೆಗೆ ಪರ್ಯಾಯವಾಗಿ ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಎಂದು ಮಾಹಿತಿ ನೀಡಿದ್ದಾರೆ.
ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ. ಮೀ. ಉದ್ದದ ರಸ್ತೆ ಹಾಗೂ ಭಾರಿ ಸೇತುವೆ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ 766-ಸಿ ಬೈಂದೂರಿನಿಂದ ವಿವಿದೊದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ ವಿಸ್ತರಣೆ ಮಾಡಿ 3.80 ಕಿ. ಮೀ. ಉದ್ದದ ರಸ್ತೆ ಹಾಗೂ ಸೇತುವೆಗಳ ನಿರ್ಮಾಣ.
ರಾಷ್ಟ್ರಿಯ ಹೆದ್ದಾರಿ 766ಸಿ ಬೈಂದೂರಿನಿಂದ ರಾಣೆಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ. ರಾಷ್ಟ್ರೀಯ ಹೆದ್ದಾರಿ 369ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಪಟ್ಟಣದ ಬೈಪಾಸ್ ರಸ್ತೆ ಸೇರಿ) ನಿರ್ಮಾಣ ಮಾಡಲಾಗುತ್ತದೆ.
ಸಂಸದರು ತಮ್ಮ ಪೋಸ್ಟ್‌ನಲ್ಲಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಿಸಿದ ಕೇಂದ್ರ ಭೂಸಾರಿಗೆ ಮಂತ್ರಾಲಯದ ಅಧಿಕಾರಿಗಳಿಗೆ ಸದರಿ ಕಾಮಗಾರಿಗಳ ಯೋಜನಾ ವರದಿ ತಯಾರಿಸಲು ಸಮಾಲೋಚಕರನ್ನು ತಕ್ಷಣ ನಿಯೋಜಿಸಲು ಸೂಚಿಸಿದ್ದು ಯೋಜನಾ ವರದಿ ಪಡೆದು ಮಂಜೂರಾತಿ ನೀಡಲು ಸಹ ಕ್ರಮವಹಿಸಲು ಸೂಚಿಸಿದರು ಎಂದು ಹೇಳಿದ್ದಾರೆ.
ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಕುರಿತು ಡಿಪಿಆರ್ ಸಿದ್ಧಪಡಿಸಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಎನ್‌ಹೆಚ್‌ಎಐ 2 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣದ ಕುರಿತು ಡಿಪಿಆರ್ ಸಿದ್ಧಪಡಿಸಲಿದೆ. ಈಗಾಗಲೇ ಮಲ್ಪೆ-ತೀರ್ಥಹಳ್ಳಿ ನಡುವೆ (ರಾಷ್ಟ್ರೀಯ ಹೆದ್ದಾರಿ 169ಎ) ಚತುಷ್ಪಥ ಯೋಜನೆ ಕಾರ್ಯ ಪ್ರಗತಿಯಲ್ಲಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಸೋಮೇಶ್ವರದಿಂದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಗೆ ಸಂಪರ್ಕಿಸುವ 12 ಕಿ. ಮೀ. ದೂರಕ್ಕೆ 3,500 ಕೋಟಿ ವೆಚ್ಚವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಆಗುಂಬೆ ಘಾಟ್ ಪಶ್ಚಿಮ ಘಟ್ಟ ಪ್ರದೇಶದಲ್ಲಿದೆ. ಸುರಂಗ ಮಾರ್ಗ ನಿರ್ಮಾಣದಿಂದ ಪರಿಸರ, ಜೀವವೈವಿಧ್ಯಕ್ಕೆ ಧಕ್ಕೆ ಆಗಲಿದೆ ಎಂಬ ವಾದವಿದೆ. ಡಿಪಿಆರ್‌ನಲ್ಲಿ ಈ ಕುರಿತು ಉಲ್ಲೇಖಿಸುವ ನಿರೀಕ್ಷೆ ಇದೆ.
ಈ ಹಿಂದೆ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಲಾಗಿತ್ತು. ಆದರೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ಈ ಯೋಜನೆ ಕುರಿತು ಪರಾಮರ್ಶೆ ನಡೆಸಲಾಗಿದೆ. ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ಸಾಧ್ಯವಿಲ್ಲ. 26 ಕಿ. ಮೀ. ಸುರಂಗ ಮಾರ್ಗದ ಬದಲು ಈಗಿರುವ ಶಿರಾಡಿ ಘಾಟ್ ರಸ್ತೆ ವಿಸ್ತರಣೆಯೇ ಸೂಕ್ತ ಎಂದು ಮಾಹಿತಿ ನೀಡಿದ್ದರು.
ಬಳಿಕ ಆಗುಂಬೆ ಘಾಟ್ ರಸ್ತೆಯಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ಈ ಯೋಜನೆಗ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲಿದೆಯೇ? ಎಂದು ಕಾದು ನೋಡಬೇಕಿದೆ.












Click it and Unblock the Notifications