ಒನ್ ಇಂಡಿಯಾ ವರದಿ ಬಳಿಕ ಜೋಗದಲ್ಲಿ ಅಧಿಕಾರಿಗಳ ದಾಳಿ
ಶಿವಮೊಗ್ಗ, ಆಗಸ್ಟ್ 20; ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಗ ಜಲಪಾತದ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಜಲಪಾತ ವೀಕ್ಷಣೆಗೆ ಬಿಟ್ಟ ಆರೋಪದಡಿ 7 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಪೈಕಿ ಮೂವರು ಹೋಂ ಗಾರ್ಡ್ ಸಿಬ್ಬಂದಿಗಳಿದ್ದಾರೆ.
ಆಗಸ್ಟ್ 18ರಂದು ಒನ್ ಇಂಡಿಯಾ ಕನ್ನಡ 'ಜೋಗ ವೀಕ್ಷಣೆಗೆ ಷರತ್ತು; ಪ್ರವಾಸಿಗರ ಸಂಖ್ಯೆ ಭಾರಿ ಕುಸಿತ' ಎಂಬ ವರದಿ ಪ್ರಕಟಿಸಿತ್ತು. ವರದಿಯಲ್ಲಿ ಕೋವಿಡ್ ನಗೆಟಿವ್ ವರದಿ ಇಲ್ಲದ ಪ್ರವಾಸಿಗರು ಸಹ ಪ್ರಭಾವ ಬಳಸಿ ಜಲಪಾತ ವೀಕ್ಷಣೆ ಮಾಡುವ ಕುರಿತು ಪ್ರಸ್ತಾಪಿಸಿತ್ತು.

ಜೋಗ ಜಲಪಾತ ವೀಕ್ಷಣೆಗೆ ಬರುವವರಿಗೆ RTPCR ನೆಗೆಟಿವ್ ವರದಿ ಅಥವಾ ಎರಡನೇ ಡೋಸ್ ಲಸಿಕೆ ಪಡೆದ ವರದಿ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆದರೆ ಇಲ್ಲಿನ ಸೆಕ್ಯೂರಿಟಿ ಗಾರ್ಡ್‌ಗಳು ಈ ಆದೇಶ ಪಾಲಿಸದೇ, ಬಂದ ಪ್ರವಾಸಿಗರನ್ನು ಒಳಬಿಡುತ್ತಿದ್ದರು.
ದಿಢೀರ್ ದಾಳಿ; ಜೋಗ ಗೇಟ್ ಸೆಕ್ಯೂರಿಟಿ ಗಾರ್ಡ್‌ಗಳ ನಿರ್ಲಕ್ಷ್ಯದ ಕುರಿತು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌ಗೆ ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸುವಂತೆ ಜಿಲ್ಲಾ ರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಸಾಗರ ಡಿವೈಎಸ್‌ಪಿ ವಿಶೇಷ ತಂಡ ರಚಿಸಿ, ದಾಳಿಗೆ ಸೂಚಿಸಿದ್ದರು. ಪ್ರವಾಸಿಗರ ಸೋಗಿನಲ್ಲಿ ಬಂದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರವಾಸಿಗರಂತೆ ಒಳಗೆ ಹೋದರು; ಪೊಲೀಸರ ವಿಶೇಷ ತಂಡ ಪ್ರವಾಸಿಗರಂತೆ ಜೋಗ ಜಲಪಾತಕ್ಕೆ ತೆರಳಿದ್ದರು. ಇವರಿಗೆ ಕೋವಿಡ್ ನೆಗೆಟಿವ್ ವರದಿಯಾಗಲಿ, ಲಸಿಕೆ ಪಡೆದ ರಿಪೋರ್ಟಾಗಿ ವಿಚಾರಿಸಲಿಲ್ಲ. ನೇರವಾಗಿ ಜೋಗ ಜಲಪಾತ ವೀಕ್ಷಣೆಗೆ ಕಳುಹಿಸಲಾಗಿತ್ತು. ಹಾಗಾಗಿ ಕೂಡಲೇ ಸೆಕ್ಯೂರಿಟಿ ಗಾರ್ಡ್ ಮತ್ತು ಅಂಗಡಿ ಮಾಲೀಕರೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಯಾರ ವಿರುದ್ಧ ಪ್ರಕರಣ; ಜೋಗದ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು, ಗೈಡ್ ಒಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಂದ್ರಶೇಖರ್, ಹೋಂ ಗಾರ್ಡ್‌ಗಳಾದ ಮಂಜುನಾಥ, ಕೃಷ್ಣಪ್ಪ, ಮಂಜುನಾಥ, ಸೆಕ್ಯೂರಿಟಿ ಗಾರ್ಡ್‌ಗಳಾದ ರಾಕೇಶ, ಪ್ರಭುದಾಸ, ಅಂಗಡಿ ಮಾಲೀಕ ಸಂಜು ಅಲಿಯಾಸ್ ಮಂಜುನಾಥ್ ಎಂಬುವವರ ವಿರುದ್ಧ ಜೋಗ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ಪ್ರಕರಣ ದಾಖಲು ಮಾಡಿದೆ.
ಗೇಟಲ್ಲಿ ಏನಾಗುತಿತ್ತು ಗೊತ್ತಾ?; ಕೋವಿಡ್ ಮೂರನೇ ಅಲೆಯ ಭೀತಿ ಎದುರಾದ ಹಿನ್ನೆಲೆ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಕೆಲವು ಷರತ್ತು ವಿಧಿಸಿದ್ದರು. ಗೇಟ್‌ನಲ್ಲಿ ಪ್ರವಾಸಿಗರ ಕೋವಿಡ್ ವರದಿ ಅಥವಾ ಲಸಿಕೆ ಪಡೆದ ವರದಿಯನ್ನು ಪರಿಶೀಲಿಸಬೇಕಿತ್ತು.
ಆರಂಭದಲ್ಲಿ ವರದಿ ಕಡ್ಡಾಯವಾಗಿ ಪರಿಶೀಲನೆ ನಡೆಸುತ್ತಿದ್ದರು. ಆ ಬಳಿಕ ಪ್ರಭಾವ ಬೀರಿದವರಿಗೆ ಯಾವುದೇ ರಿಪೋರ್ಟ್ ಕೇಳದೆ ಒಳಗೆ ಬಿಡುತ್ತಿರುವ ಕುರಿತು ಆರೋಪಗಳು ಕೇಳಿ ಬಂದಿದ್ದವು. ಈ ಸಂಬಂಧ ಒನ್ ಇಂಡಿಯಾ ಕನ್ನಡ ಕೂಡ ವರದಿ ಪ್ರಕಟಿಸಿತ್ತು.
ಮಾರ್ಗಸೂಚಿ; ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಎಲ್ಲಾ ಲಾಡ್ಜ್, ಹೋಟೆಲ್, ಹೋಂ ಸ್ಟೇ/ ಅರಣ್ಯ ಇಲಾಖೆ ವಸತಿ ಗೃಹಗಳಲ್ಲಿ ತಂಗಲಿರುವವರು ಬುಕಿಂಗ್ ಸಮಯದಲ್ಲಿ ಚೆಕ್ ಇನ್ ದಿನದಿಂದ ಹಿಂದಿನ 72 ಗಂಟೆಗಳ ಒಳಗಾಗಿ ಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ/ ಆರ್‍ಎಟಿ ನೆಗೆಟಿವ್ ವರದಿ/ ಕೋವಿಡ್ 2ನೇ ಲಸಿಕೆ ಪಡೆದ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ.












Click it and Unblock the Notifications