ಶಿವಮೊಗ್ಗದಲ್ಲಿ 5000 ನಿವೇಶನಗಳ ಹಂಚಿಕೆ, ವಿವರಗಳು
ಶಿವಮೊಗ್ಗ, ಮಾರ್ಚ್ 09: ಶಿವಮೊಗ್ಗದಲ್ಲಿ ಸೈಟುಗಳನ್ನು ಖರೀದಿ ಮಾಡಬೇಕು, ಭೂಮಿಯ ಮೇಲೆ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿರುವ ಜನರಿಗೆ ಸಿಹಿಸುದ್ದಿಯೊಂದಿದೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ 5 ಸಾವಿರ ನಿವೇಶನಗಳನ್ನು ಅಭಿವೃದ್ಧಿಗೊಳಿಸಿ ಜನರಿಗೆ ಹಂಚಿಕೆ ಮಾಡಲು ಮುಂದಾಗಿದೆ. ಯಾವ-ಯಾವ ಪ್ರದೇಶದಲ್ಲಿ ಸೈಟುಗಳು ಇವೆ, ಯಾವಾಗ ಮಾರಾಟ ಪ್ರಕ್ರಿಯೆ ಆರಂಭವಾಗಲಿದೆ ಎಂಬ ಕುರಿತು ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, "ಸ್ವಂತ ಸೂರೊಂದನ್ನು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊಂದಿದ್ದು, ನಿವೇಶನದ ನಿರೀಕ್ಷೆಯಲ್ಲಿರುವ ಶಿವಮೊಗ್ಗದ ಅಸಂಖ್ಯಾತ ವಸತಿ ರಹಿತರನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನಿಷ್ಠ 5000 ನಿವೇಶನಗಳನ್ನಾದರೂ ಸೃಜಿಸಿ ಅರ್ಹರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ" ಎಂದು ಹೇಳಿದರು.

"ನಗರದ ಹೊರವಲಯದಲ್ಲಿರುವ ಗೋಪಶೆಟ್ಟಿಕೊಪ್ಪದಲ್ಲಿ ಈಗಾಗಲೇ 104 ಎಕರೆ ಭೂಪ್ರದೇಶವನ್ನು ಗುರುತಿಸಲಾಗಿದ್ದು, ಆ ಪೈಕಿ ಈಗಾಗಲೇ 30 ಎಕರೆ ಭೂಮಿಯ ಮಾಲೀಕರು 50:50 ಅನುಪಾತದಲ್ಲಿ ನಿವೇಶನವನ್ನು ಹಸ್ತಾಂತರಿಸಲು ಒಡಂಬಡಿಕೆ ಮಾಡಿಕೊಟ್ಟಿದ್ದು, ಭೂಪರಿವರ್ತನೆಗೆ ಸರ್ಕಾರದ ಅನುಮತಿ ದೊರೆತಿದ್ದು, ಶೀಘ್ರದಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಲಾಗುವುದು" ಎಂದು ತಿಳಿಸಿದರು.
"ಉಳಿದ ಭೂಮಿಯ ಭೂಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಮಾಲೋಚನೆಯ ನಂತರವೂ ಭೂಮಿಯನ್ನು ಪ್ರಾಧಿಕಾರಕ್ಕೆ ನೀಡಲು ಹಿಂದೆ ಸರಿದಲ್ಲಿ ಅಂತಹ ಮಾಲೀಕತ್ವದ ಭೂಮಿಯನ್ನು ನಿಯಮಾನುಸಾರ ಭೂಸ್ವಾದೀನಪಡಿಸಿಕೊಂಡು ಸರ್ಕಾರದ ಅನುಮತಿ ಪಡೆದು ಅಭಿವೃದ್ಧಿಪಡಿಸಲಾಗುವುದು" ಎಂದು ವಿವರಣೆ ನೀಡಿದರು.
ಸೂಡಾ ನಿವೇಶನಗಳ ಹಂಚಿಕೆ: ಹೆಚ್. ಎಸ್. ಸುಂದರೇಶ್ ಮಾತನಾಡಿ, "ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ ಕನಿಷ್ಟ 1.20ಎಕರೆಗಿಂತ ಹೆಚ್ಚಿನ ಭೂಮಿಯನ್ನು 50:50ಅನುಪಾತದಲ್ಲಿಯಾದರೂ ಸರಿ ಅಥವಾ ಸಂಪೂರ್ಣ ಮಾಲೀಕತ್ವವನ್ನು ವಹಿಸಿಕೊಡಲು ಇಚ್ಚಿಸಿದಲ್ಲಿ ಸೂಡಾ ವತಿಯಿಂದ ಉತ್ತಮ ಬೆಲೆಗೆ ಖರೀದಿಸಿ, ಬಡಾವಣೆ ನಿರ್ಮಾಣ ಮಾಡಿ, ಅರ್ಹರಿಗೆ ನಿವೇಶನ ವಿತರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ" ಎಂದರು.
"100 ಎಕರೆ ಭೂಮಿ ಖರೀದಿಸಲು ಸೂಡಾ ಸಿದ್ದವಾಗಿದ್ದು, ಅದಕ್ಕಾಗಿ 70 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ. ಇದಲ್ಲದೇ ಪ್ರಾಧಿಕಾರದಿಂದ ರಚಿಸಲಾದ ಬಡಾವಣೆಗಳಿಗೆ ಮೂಲಭೂತ ಸೌಕರ್ಯ, ರಸ್ತೆ ಇತ್ಯಾದಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಿರ್ವಹಿಸಲಾಗುವುದು" ಎಂದು ವಿವರಣೆ ಕೊಟ್ಟರು.
"ಸ್ವಾಮಿ ವಿವೇಕಾನಂದ ಬಡಾವಣೆಯ ಮಹಿಳಾ ಪಾಲಿಟೆಕ್ನಕ್ ಕಾಲೇಜು ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಜೆ. ಹೆಚ್. ಪಟೇಲ್ ಬಡಾವಣೆಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ, ಗೋಪಿಶೆಟ್ಟಿಕೊಪ್ಪ, ನಿಧಿಗೆ ಮಾಚೇನಹಳ್ಳಿ, ಸೋಮಿನಕೊಪ್ಪದಲ್ಲಿ ವಸತಿ ಸಮುಚ್ಛಯ, ಊರುಗಡೂರಿನ ಪ್ರಾಧಿಕಾರದ ವಸತಿ ಬಡಾವಣೆಯಲ್ಲಿ ಇರುವ 4 ಎಕರೆ ಪ್ರದೇಶದಲ್ಲಿ ವಸತಿ ಯೋಜನೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ" ಎಂದು ಸೂಡಾ ಯೋಜನೆಗಳ ಕುರಿತು ವಿವರಿಸಿದರು.
"ಪ್ರಾಧಿಕಾರದ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದು ಅದಕ್ಕಾಗಿ 1 ಕೋಟಿ ರೂ. ಗಳನ್ನು ಕಾಯ್ದಿರಿಸಲಾಗಿದೆ. ನಗರದ ಹೊರವರ್ತುಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಪ್ರಸಕ್ತ ಸಾಲಿನ ಆಯ-ವ್ಯಯದಲ್ಲಿ 4.10 ಕೋಟಿ ರೂ.ಗಳನ್ನು ಹಾಗೂ ಸೂಡಾ ಪ್ರದೇಶ ವ್ಯಾಪ್ತಿಯಲ್ಲಿನ ಕೆರೆಗಳ ಅಭಿವೃದ್ಧಿಗಾಗಿ 3 ಕೋಟಿ., ಪ್ರಾಧಿಕಾರದ ಬಡಾವಣೆಗಳಲ್ಲಿನ ಉದ್ಯಾನವನಗಳ ಅಭಿವೃದ್ಧಿ, ನಿರ್ವಹಣೆಗೆ 3 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ" ಎಂದರು.
"ನಗರದ ಆಯ್ದ ಕಡೆಗಳಲ್ಲಿ ಆಟೋ, ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗಳು, ಇತರೆ ಮೂಲಭೂತ ಸೌಕಕರ್ಯಗಳ ಅಭಿವೃದ್ಧಿಗಾಗಿ 5 ಕೋಟಿ ಹಾಗೂ ಸೂಡಾ ಕಚೇರಿಯಲ್ಲಿನ ಅಭಿಲೇಖಾಲಯದ ದಾಖಲೆಗಳನ್ನು ಗಣಕೀಕರೀಸಲು 50 ಲಕ್ಷ ರೂ.ಗಳನ್ನು ಕಾಯ್ದಿರಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಹೆಚ್. ಎಸ್. ಸುಂದರೇಶ್ ಕರ್ನಾಟಕ ಬಜೆಟ್ 2025-26ರ ಕುರಿತು ಪ್ರತಿಕ್ರಿಯೆ ನೀಡಿ, "ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾಗಿದ್ದು, ಸಮಾಜದ ಎಲ್ಲ ಸ್ತರಗಳನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆ, ಮಕ್ಕಳು, ಶಿಕ್ಷಣ, ಕೃಷಿ, ನೀರಾವರಿ ಕೈಗಾರಿಕೆ ಸೇರಿದಂತೆ ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಜನಸ್ನೇಹಿ ಬಜೆಟ್ ರೂಪಿಸಿ, ಮಂಡಿಸಿರುವ ಮಾನ್ಯಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದರು.












Click it and Unblock the Notifications