ಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಬಾಲಕ ಸಾವು
ಶಿವಮೊಗ್ಗ ಡಿಸೆಂಬರ್ 1: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ 4 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಗುರುವಾರ ನಡೆದಿದೆ.
ಭದ್ರಾವತಿ ತಾಲೂಕು ದೊಣಬಘಟ್ಟ ಗ್ರಾಮದ ನಿವಾಸಿ ಸೈಯದ್ ನಸ್ರುಲ್ಲಾ ಮತ್ತು ಶೇರ್ ಬಾನು ದಂಪತಿ ಪುತ್ರ ಸೈಯದ್ ಅರ್ಷದ್ ಮದನಿ (4 ) ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಎಲೆ ಚುಕ್ಕೆ ರೋಗ: ತೀರ್ಥಹಳ್ಳಿಯ ಅಡಿಕೆ ತೋಟಕ್ಕೆ ಭೇಟಿ ನೀಡಿದ ಸಿಎಂ, ಪ್ರಮುಖಾಂಗಳು ಇಲ್ಲಿವೆ
ಮೃತ ಬಾಲಕ ಸೈಯದ್ ಅರ್ಷದ್ ಮದನಿ ತನ್ನ ತಂದೆಯೊಂದಿಗೆ ಜಮೀನಿಗೆ ತೆರಳಿದ್ದಾನೆ. ಈ ವೇಳೆ ಜಮೀನಿನಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಸುಮಾರು 10 ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ನಾಯಿಗಳ ದಾಳಿಯ ವೇಳೆ ಬಾಲಕನ ತಂದೆ ಸ್ವಲ್ಪ ದೂರದಲ್ಲಿ ಯಂತ್ರದಲ್ಲಿ ಭತ್ತ ಕಟಾವು ಮಾಡಿಸುತ್ತಿದ್ದರು. ಹೀಗಾಗಿ ಯಂತ್ರದ ಶಬ್ದಕ್ಕೆ, ನಾಯಿಗಳ ದಾಳಿಗೊಳಗಾದ ಬಾಲಕನ ಚೀರಾಟ ತಂದೆಗೆ ಕೇಳಿಸಿಲ್ಲ ಎನ್ನಲಾಗಿದೆ.
ಬೀದಿ ನಾಯಿಗಳ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಕೂಡಲೇ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಾಯಿಗಳ ದಾಳಿಯಿಂದ ಬಾಲಕನ ಸಂಪೂರ್ಣ ದೇಹ ರಕ್ತವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ದುರಾದೃಷ್ಟವಶಾತ್ ಬಾಲಕ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಅಡಿಕೆ ಬೆಳೆಗಾರನ ಮನ ಗೆದ್ದರೆ ಎಂಎಲ್ಎ ಆಗುವುದು ಖಚಿತ, ಯಾಕೆ? ಇಲ್ಲಿದೆ 4 ಕಾರಣ..!
ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 4 ವರ್ಷದ ಮಗನನ್ನು ಕಳೆದುಕೊಂಡ ಸೈಯದ್ ನಸ್ರುಲ್ಲಾ ಮತ್ತು ಶೇರ್ ಬಾನು ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಭದ್ರಾವತಿ ತಾಲೂಕಿನ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು, ವಯಸ್ಸಾದವರು ಸೇರಿದಂತೆ ಸಾರ್ವಜನಿಕರ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ನಡೆಸುತ್ತಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಬೀದಿನಾಯಿಗಳ ಕಾಟಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.