ಬೆಚ್ಚಿಬಿದ್ದ ಆಗುಂಬೆ; ಯುವತಿ ಕೊಲೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಶಿವಮೊಗ್ಗ, ಜುಲೈ 07: ನಾಪತ್ತೆಯಾಗಿದ್ದ 24 ವರ್ಷದ ಯುವತಿ ಕೊಲೆಯಾಗಿರುವ ಘಟನೆ ಆಗುಂಬೆಯಲ್ಲಿ ನಡೆದಿದೆ. ಸ್ನೇಹಿತನೇ ಈ ಹತ್ಯೆಯನ್ನು ಮಾಡಿದ್ದು, ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಯುವತಿಯನ್ನು ಎ. ಕೆ. ಪೂಜಾ (24) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಯಾಗಿದ್ದ ಯುವತಿ ಪೂಜಾ ಜೂನ್ 30ರಂದು ಮನೆಯಿಂದ ಕೆಲಸಕ್ಕೆ ಹೋಗಿದ್ದಳು, ಬಳಿಕ ನಾಪತ್ತೆಯಾಗಿದ್ದಳು. ಎಲ್ಲೂ ಪತ್ತೆಯಾಗದ ಕಾರಣ ಪೂಜಾ ಪೋಷಕರು ಈ ಕುರಿತು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಯುವತಿ ತಂದೆ ಕುಶಾಲ್‌ಗೆ ಪರಿಚಯವಿದ್ದ, ಸ್ನೇಹಿತನಾಗಿದ್ದ ಮಣಿಕಂಠ ಎಂಬುವವನೇ ಕೂಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಮಣಿಕಂಠ ಒಪ್ಪಿಕೊಂಡಿದ್ದಾನೆ.
ಹಣಕಾಸಿ ವಿಚಾರಕ್ಕೆ ಪೂಜಾ ಕೊಲೆ ಮಾಡಿದ್ದೇನೆ ಎಂದು ಪೂಜಾಗೂ ಸ್ನೇಹಿತನಾಗಿರುವ ಮಣಿಕಂಠ ತಪ್ಪೊಪ್ಪಿಕೊಂಡಿದ್ದಾನೆ. ಪೂಜಾ ಶವ ಭಾನುವಾರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಗುಂಬೆ ಪೊಲೀಸರು ಕೊಲೆ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಪಿಎಸ್‌ಐ ರಂಗನಾಥ್ ಅಂತರಗಟ್ಟಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ಮಣಿಕಂಠ ನಾಲೂರು ಸಮೀಪದ ನಿವಾಸಿ. ಕತ್ತು ಹಿಸುಕಿ ಪೂಜಾ ಕೊಲೆ ಮಾಡಿದ್ದ ಆತ ನಾಲೂರು ಸಮೀಪದ ಹೊಂಡಕ್ಕೆ ಶವವನ್ನು ಬಿಸಾಡಿದ್ದ.
ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸರು ಆರೋಪಿ ಮಣಿಯನ್ನು ಕೊಲೆ, ಶವ ಎಸೆದ ಸ್ಥಳಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ಶವವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಕಳಿಸಿದ್ದಾರೆ.
ಎ. ಕೆ. ಪೂಜಾ (24) ಶವ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಪ್ರಕಟಣೆ ಹೊರಡಿಸಿದ್ದ ಪೊಲೀಸರು: ಯುವತಿ ಎ. ಕೆ. ಪೂಜಾ (24) ನಾಪತ್ತೆ ಕುರಿತು ಆಗುಂಬೆ ಪೊಲೀಸ್ ಠಾಣೆಯ ಪೊಲೀಸರು ಜುಲೈ 2ರಂದು ಪ್ರಕಟಣೆಯನ್ನು ಹೊರಡಿಸಿದ್ದರು. ಪೊಲೀಸ್ ಠಾಣೆ ವ್ಯಾಪ್ತಿಯ ಕುಶಾಲ್ ಎಂಬುವವರ ಮಗಳು 24 ವರ್ಷದ ಪೂಜಾ ಎ. ಕೆ. ಎಂಬುವವರು ಜೂನ್ 30ರಂದು ಮನೆಯಿಂದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಕೆಲಸಕ್ಕೆಂದು ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ ಎಂದು ಹೇಳಿದ್ದರು.
4.06 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿರುವ ಆಕೆ ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೊರಗೆ ಹೋಗುವಾಗ ನೀಲಿ ಬಣ್ಣದ ಚೂಡಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಮಾಹಿತಿ ದೊರೆತಲ್ಲಿ ಎಸ್.ಪಿ. ಕಚೇರಿ ಶಿವಮೊಗ್ಗ08182-261400, ತೀರ್ಥಹಳ್ಳಿ 08181-220388, ಸಿಪಿಐ ಮಾಳೂರು 9480803333 ಹಾಗೂ ಪಿಎಸ್‍ಐ ಆಗುಂಬೆ 9480803314 ಇವರುಗಳನ್ನು ಸಂಪರ್ಕಿಸಿ ಎಂದು ಮನವಿಯನ್ನು ಮಾಡಿದ್ದರು.












Click it and Unblock the Notifications