‘ಪರೀಕ್ಷೆಗಿಂತಲೂ ಹಿಜಾಬ್ ಮುಖ್ಯ’; ಶಿವಮೊಗ್ಗದಲ್ಲಿ ಪರೀಕ್ಷೆ ತ್ಯಜಿಸಿದ ಮತ್ತಿಬ್ಬರು ವಿದ್ಯಾರ್ಥಿನಿಯರು
ಶಿವಮೊಗ್ಗ, ಫೆಬ್ರವರಿ 15: ಹಿಜಾಬ್ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆ, ಶಿವಮೊಗ್ಗದಲ್ಲಿ ಇಂದೂ ಕೂಡ ಮತ್ತಿಬ್ಬರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಹಿಂದೇಟು ಹಾಕಿದ್ದಾರೆ.
ಶಿವಮೊಗ್ಗದ ಬಿ.ಹೆಚ್. ರಸ್ತೆಯ ಪ್ರೌಢಶಾಲೆಯಲ್ಲಿ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಇಬ್ಬರು ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದಿಂದ ಹೊರಗೆ ಬಂದರು. ಸೋಮವಾರ ಇದೇ ಶಾಲೆಯ 13 ವಿದ್ಯಾರ್ಥಿನಿಯರು ಪರೀಕ್ಷೆ ತ್ಯಜಿಸಿ ಹೊರ ನಡೆದಿದ್ದರು.

ವಿದ್ಯಾರ್ಥಿನಿಯರು ಹೇಳಿದ್ದೇನು?
ಪರೀಕ್ಷಾ ಕೇಂದ್ರದಿಂದ ಹೊರ ಬಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹೀನಾ ಕೌಸರ್, "ನಾವು ಹಿಜಾಬ್ ಧರಿಸಲು ಕಲಿತ ಮೇಲೆ ಶಾಲೆಗೆ ಸೇರಿದ್ದು. ಆದರೆ ಹಿಜಾಬ್ ಹಾಕದಂತೆ ಈಗ ಶಿಕ್ಷಕರು ತಿಳಿಸಿದ್ದಾರೆ. ನನಗೆ ಪರೀಕ್ಷೆಗಿಂತಲೂ ಹಿಜಾಬ್ ಮುಖ್ಯ. ನಮ್ಮ ಪೋಷಕರು ಕೂಡ ಹಿಜಾಬ್ ಧರಿಸಬೇಕು ಎಂದು ತಿಳಿಸಿದ್ದಾರೆ,'' ಎಂದು ಹೇಳಿದ್ದಾಳೆ.

36 ಮಕ್ಕಳಷ್ಟೇ ಹಾಜರು
ಶಿವಮೊಗ್ಗದ ಬಿ.ಹೆಚ್. ರಸ್ತೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ 83 ಮಕ್ಕಳಿದ್ದಾರೆ. ಈ ಪೈಕಿ 36 ಮಕ್ಕಳಷ್ಟೆ ಇವತ್ತು ಪರೀಕ್ಷೆ ಬರೆಯಲು ಆಗಮಿಸಿದ್ದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಡಿಪಿಐ ರಮೇಶ್, "ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 36 ಮಕ್ಕಳಷ್ಟೇ ಪರೀಕ್ಷೆಗೆ ಬಂದಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಮಕ್ಕಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ,'' ಎಂದು ತಿಳಿಸಿದರು.

ಪ್ರೌಢಶಾಲೆ ಸುತ್ತಲು ಬಂದೋಬಸ್ತ್
ಇತ್ತ ಹಿಜಾಬ್ ವಿವಾದ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಹಾಗಾಗಿ ಬಿ.ಹೆಚ್. ರಸ್ತೆಯಲ್ಲಿರುವ ಪ್ರೌಢಶಾಲೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಮೀಸಲು ಪೊಲೀಸ್ ಪಡೆಯ ಮೂರು ಬಸ್‌ಗಳಲ್ಲಿ ಪೊಲೀಸರು ನಿಯೋಜಿಸಲಾಗಿದೆ.
ಸೋಮವಾರ ಬಿ.ಹೆಚ್. ರಸ್ತೆಯ ಪ್ರೌಢಶಾಲೆ ಆವರಣದೊಳಗೆ ಪೋಷಕರು ಆಗಮಿಸಿದ್ದರು. ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಕರೆದೊಯ್ದಿದ್ದರು. ಪರೀಕ್ಷೆ ಸಂದರ್ಭ ಗೊಂದಲಕ್ಕೆ ಕಾರಣವಾಗಿತ್ತು. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಯಾವುದೆ ರೀತಿ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಇವತ್ತು ಪ್ರೌಢಶಾಲೆ ಗೇಟ್ ಬಂದ್ ಮಾಡಲಾಗಿತ್ತು. ಶಿಕ್ಷಕರು, ಮಕ್ಕಳು ಹೊರತು ಉಳಿದವರಾರಿಗೂ ಗೇಟ್ ದಾಟಲು ಅವಕಾಶವಿರಲಿಲ್ಲ.

ಕಾಲೇಜು ಆರಂಭಕ್ಕೆ ಸಿದ್ಧತೆ, ಭದ್ರತೆ
ಹಿಜಾಬ್, ಕೇಸರಿ ಶಾಲು ಸಂಘರ್ಷದ ಹಿನ್ನೆಲೆ ಪಿಯು, ಪದವಿ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಾದ್ಯಂತ ಬುಧವಾರದಿಂದ ಕಾಲೇಜುಗಳು ಪುನಾರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಗಲಾಟೆಯಾಗಿದ್ದ ಕಾಲೇಜುಗಳ ಬಳಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಹೊರಗಿನವರು ಕ್ಯಾಂಪಸ್ ಒಳಗೆ ಪ್ರವೇಶಿಸದಂತೆ ತಡೆಯಲು ಕ್ರಮ ವಹಿಸಲಾಗುತ್ತಿದೆ.

ಖಾಸಗಿ ಶಾಲೆ, ಕಾಲೇಜುಗಳಲ್ಲಿ ಕಟ್ಟುನಿಟ್ಟು
ಇತ್ತ ಖಾಸಗಿ ಶಾಲೆ, ಕಾಲೇಜುಗಳಲ್ಲಿ ಕಟ್ಟುನಿಟ್ಟು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಗಲಾಟೆಗಳು ಆಗದಂತೆ ನಿಗಾ ವಹಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕಡ್ಡಾಯಗೊಳಿಸಲಾಗಿದೆ. ಶಾಲೆ, ಕಾಲೇಜು ಅವರಣದೊಳಗೆ ಪ್ರವೇಶಿಸುವಾಗ ಗುರುತಿನ ಚೀಟಿ ಪ್ರದರ್ಶಿಸಬೇಕು. ವಾಹನಗಳನ್ನು ತರುವವರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಹೊರಗಿನವರು ಶಾಲೆ, ಕಾಲೇಜು ಅವರಣವನ್ನು ಪ್ರವೇಶವನ್ನು ನಿರ್ಬಂಧಿಸಲಾಗುತ್ತಿದೆ. ಒಂದು ವೇಳೆ ಹೊರಗಿನವರು ಕ್ಯಾಂಪಸ್ ಒಳಗೆ ಬರಬೇಕಿದ್ದರೆ, ವಿಸಿಟರ್ಸ್ ಡೈರಿಯಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಸೆಕ್ಯೂರಿಟಿ ಸಿಬ್ಬಂದಿಗೆ ಆಡಳಿತ ಮಂಡಳಿ ಸೂಚಿಸಿದೆ.
ಹಿಜಾಬ್ ವಿವಾದ ದಿನಕ್ಕೊಂದು ಸ್ವರೂಪ ಪಡೆಯುತ್ತಿದ್ದರಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಆಡಳಿತ ಮಂಡಳಿ ಕಟ್ಟುನಿಟ್ಟು ಕ್ರಮಗಳನ್ನು ಕೈಗೊಳ್ಳುತ್ತಿವೆ. ತರಗತಿಗಳು ಪುನಾರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಕೂಡ ಕೈಗೊಳ್ಳಲಾಗುತ್ತಿದೆ. ಸಿವಿಲ್ ಪೊಲೀಸರ ಜೊತೆಗೆ ಡಿಎಆರ್, ಕೆಎಸ್‌ಆರ್‌ಪಿ ಪೊಲೀಸರನ್ನು ಕೂಡ ಶಿವಮೊಗ್ಗದಲ್ಲಿ ನಿಯೋಜಿಸಲಾಗಿದೆ.












Click it and Unblock the Notifications