ಜಾರ್ಖಂಡ್ ಫಲಿತಾಂಶ: ಬಿಜೆಪಿ ಮಿತ್ರಪಕ್ಷಗಳಿಂದ ಶೂನ್ಯ ಸಂಪಾದನೆ
ರಾಂಚಿ, ಡಿಸೆಂಬರ್ 23: ಬಹುನಿರೀಕ್ಷಿತ ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ(ಡಿಸೆಂಬರ್ 23) ದಂದು ಪ್ರಕಟಗೊಂಡಿದೆ. ಅಂತಿಮ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಬೇಕಿದ್ದು, ಸದ್ಯದ ಟ್ರೆಂಡ್ ಆಧಾರದ ಮೇಲೆ ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟವು ಅಧಿಕಾರ ಸ್ಥಾಪನೆಗೆ ಅರ್ಹತೆ ಪಡೆದುಕೊಂಡಿವೆ.
ಭಾರತೀಯ ಜನತಾ ಪಕ್ಷ ಈ ಬಾರಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದು, ಹೆಚ್ಚು ಸ್ಥಾನ ಪಡೆದ ಪಕ್ಷ ಎನಿಸಿಕೊಂಡಿದೆ. ಆದರೆ, 81 ವಿಧಾನಸಭಾ ಸ್ಥಾನಗಳುಳ್ಳ ಜಾರ್ಖಂಡ್ ನಲ್ಲಿ ಸರ್ಕಾರ ಸ್ಥಾಪನೆಗೆ 41 ಸ್ಥಾನಗಳನ್ನು ಗೆಲ್ಲಲೇಬೇಕು. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ, ಮಿತ್ರಪಕ್ಷಗಳಿಂದ ಸೂಕ್ತ ಬೆಂಬಲ ಸಿಗದೆ ಅಧಿಕಾರದಿಂದ ವಂಚಿತವಾಗುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಮಿತ್ರಪಕ್ಷಗಳಾದ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ, ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) ಕಳಪೆ ಸಾಧನೆ ಮಾಡಿವೆ. ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ 33.58% ಗಳಿಸಿದ್ದರೆ, ಜೆಡಿಯು 0.79%, ಎಲ್ ಜೆಪಿ 0.27% ಗಳಿಸಿವೆ. ನೋಟಾ 1.46% ಬಂದಿದೆ.

ಎಲ್ ಜೆಪಿ ಹಾಗೂ ಜೆಡಿಯು
ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಭಾಗವಾಗಿರುವ ಎಲ್ ಜೆಪಿ ಈ ಬಾರಿ ಜಾರ್ಖಂಡ್ ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಚುನಾವಣಾ ಪೂರ್ವ ಮೈತ್ರಿಗೆ ಬಿಜೆಪಿ ಹಿರಿಯ ನಾಯಕರೇ ಮನಸ್ಸು ಮಾಡಲಿಲ್ಲ ಎಂಬ ವಾದವಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕೂಡಾ ಎನ್ಡಿಎ ಮಿತ್ರ ಪಕ್ಷವಾಗಿದೆ. ಮತ್ತೊಂದು ಮಿತ್ರ ಪಕ್ಷ ಎಜೆಎಸ್ ಯು ಕೂಡಾ ಪ್ರತ್ಯೇಕವಾಗಿ ಸ್ಪರ್ಧಿಗಿಳಿದಿತ್ತು. ಎಲ್ ಜೆಪಿ ಹಾಗೂ ಜೆಡಿಯು ಖಾತೆ ಓಪನ್ ಮಾಡುವ ಲಕ್ಷಣಗಳಿಲ್ಲ. ಆದರೆ, ಎಜೆಎಸ್ ಯು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು.

ಸದ್ಯದ ಟ್ರೆಂಡ್ ಹೇಗಿದೆ?
ಸದ್ಯದ ಟ್ರೆಂಡ್ ನಂತೆ ಬಿಜೆಪಿ 29, ಜೆಎಂಎಂ 24, ಕಾಂಗ್ರೆಸ್ 14, ಏಜೆಎಸ್ ಯು 3, ಜೆವಿಎಂ 3, ಇತರೆ 7ರಲ್ಲಿ ಮುನ್ನಡೆ ಪಡೆದುಕೊಂಡಿವೆ. ಕಾಂಗ್ರೆಸ್ ಪ್ಲಸ್ 40, ಬಿಜೆಪಿ 30 ಸ್ಥಾನ ಖಾತ್ರಿ ಪಡಿಸಿಕೊಂಡಿವೆ. ಅಂತಿಮ ಫಲಿತಾಂಶದಲ್ಲಿ ಮಹಾ ಘಟಬಂಧನ್ ಸಂಖ್ಯೆ 40ಕ್ಕಿಂತ ಕಡಿಮೆಯಾದರೆ ಬಿಜೆಪಿ ಸರ್ಕಾರ ರಚನೆ ಬಗ್ಗೆ ಕಾರ್ಯತಂತ್ರ ರೂಪಿಸಲಿದೆ ಎಂಬ ಮಾಹಿತಿ ಸಿಕ್ಕಿದೆ. ಜಾರ್ಖಂಡ್ ನಲ್ಲಿ ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಒಟ್ಟು ಐದು ಹಂತದಲ್ಲಿ ಮತದಾನವಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಫಲಿತಾಂಶ ಹೊರಬರಲಿದೆ.

ಬಿಜೆಪಿ ವಿರುದ್ಧ ಮಹಾಘಟಬಂಧನ್
ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಜೆಎಂಎಂ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ವರದಿ ಬಂದಿತ್ತು.

2014ರ ಫಲಿತಾಂಶ ಏನಾಗಿತ್ತು?
2014ರ ಫಲಿತಾಂಶ: 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 6 ಸ್ಥಾನ ಹಾಗೂ ಮಿಕ್ಕ 38 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲುವಲ್ಲಿ ಸಫಲವಾಗಿದ್ದವು. ವಿಧಾನಸಭೆ 81 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 41.












Click it and Unblock the Notifications