ಜಾನಪದ ಲೋಕದಲ್ಲಿ ವಿಶ್ವ ಜಾನಪದ ದಿನಾಚರಣೆ ಸಂಭ್ರಮ
ರಾಮನಗರ, ಆಗಸ್ಟ್ 24: ಜನಪದರ ತವರು, ಜಾನಪದ ಕಾಶಿ ಎಂಬ ಹೆಗ್ಗಳಿಕೆಯ ಜಾನಪದ ಲೋಕದಲ್ಲಿ ಕೊರೊನಾ ಭೀತಿಯ ನಡುವೆಯೂ ನಿನ್ನೆ ಸಂಜೆ ವಿಶ್ವ ಜಾನಪದ ದಿನಾಚರಣೆಯ ಸಂಭ್ರಮ ಮನೆ ಮಾಡಿತ್ತು.
Recommended Video
ಪ್ರತಿವರ್ಷ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದ ಜಾನಪದ ದಿನಾಚರಣೆಯನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಪ್ರತಿ ಬಾರಿ ರಾಜ್ಯಾದ್ಯಂತ ಸರಿಸುಮಾರು 30ಕ್ಕೂ ಹೆಚ್ಚು ತಂಡಗಳು ಆಗಮಿಸುತ್ತಿದ್ದವು. ಆದರೆ ಈ ಬಾರಿ ಕಲಾತಂಡಗಳ ಕೊರತೆ ಎದ್ದು ಕಾಣುತ್ತಿತ್ತು. ಆಗಸ್ಟ್ 23, ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾವಿದರು ಆಗಮಿಸಿದ್ದರು. ವೀರಗಾಸೆ ಕುಣಿತ, ಡೊಳ್ಳುಕುಣಿತ, ಕಂಸಾಳೆ ಕುಣಿತ, ಜಾನಪದ ಕುಣಿತ ನೋಡುಗರ ಗಮನ ಸೆಳೆಯಿತು.
ಈ ಸಂದರ್ಭ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಪ್ರತಿವರ್ಷ ಬಹಳ ಅದ್ಧೂರಿಯಾಗಿ ಜಾನಪದ ಹಬ್ಬ ಆಚರಣೆ ಮಾಡುತ್ತಿದ್ದೆವು. ಆದರೆ ಈ ಬಾರಿ ಕೊರೊನಾದಿಂದ ಕಲಾವಿದರು ಕೂಡ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಜೊತೆಗೆ ಪ್ರತಿವರ್ಷ ಜಾನಪದ ಲೋಕಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ಬರುತ್ತಿತ್ತು. ಆದರೆ ಈ ಬಾರಿ ಕೇವಲ 30 ಲಕ್ಷ ರೂಪಾಯಿ ಮಾತ್ರ ಬಿಡುಗಡೆಯಾಗಿದೆ ಎಂದರು.

ಸರ್ಕಾರದ ಅನುದಾನದ ಕೊರತೆಯಿಂದ ಕಲಾವಿದರಿಗೂ ಬಹಳಷ್ಟು ಕಷ್ಟವಾಗಿದೆ. ಈ ಬಾರಿ ಅನುದಾನದಲ್ಲಿ ಜಾನಪದ ಲೋಕದ ಸಿಬ್ಬಂದಿಗೆ ಸಂಬಳ ಮಾತ್ರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾದಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕಲಾವಿದರ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕೆಂದು ತಿಮ್ಮೇಗೌಡ ಆಗ್ರಹಿಸಿದರು.











Click it and Unblock the Notifications