ತ್ರಿವಳಿ ಕೊಲೆಗಾರನಿಗೆ ರಾಮನಗರ ನ್ಯಾಯಾಲಯದಿಂದ ಮರಣ ದಂಡನೆ
ರಾಮನಗರ, ಜುಲೈ 22: ಮಹಿಳೆ ಮೇಲೆ ಅತ್ಯಾಚಾರ ಎಸಗಿ, ಒಂದೇ ಕುಟುಂಬದ ಮೂವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿಗೆ ರಾಮನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ಶಿಕ್ಷೆ ವಿಧಿಸಿ, ಆದೇಶ ಮಾಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಮರಳವಾಡಿ ಹೋಬಳಿಯ ಚಿಕ್ಕ ಬೆಜ್ಜಲಹಟ್ಟಿ ನಿವಾಸಿ ಬಸವರಾಜ ಬೋವಿ (41) ಶಿಕ್ಷೆಗೆ ಗುರಿಯಾದ ಆರೋಪಿ. ಈತ 2016ನೇ ಇಸವಿ ಜನವರಿ 5ರಂದು ಭೀಮೇಗೌಡನ ದೊಡ್ಡಿ ಹೊರವಲಯದಲ್ಲಿ ಇರುವ ತೋಟದ ಮನೆಯಲ್ಲಿ ವಾಸವಿದ್ದ ಮಾರೇಗೌಡ (70), ಅವರ ಮಗಳು ಗೌರಮ್ಮ (50) ಮತ್ತು ಮೊಮ್ಮೊಗಳು ಸುಕನ್ಯಾ (15) ಈ ಮೂವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದ.
ಆರೋಪಿ ಬಸವರಾಜನು ಗೌರಮ್ಮ ಅವರನ್ನು ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಲೇ ಬಂದಿದ್ದ. ಆದರೆ ಅವರು ಅದಕ್ಕೆ ಒಪ್ಪಿರಲಿಲ್ಲ. ತೋಟದ ಮನೆಯಲ್ಲಿ ಮೊಲವನ್ನು ಸೆರೆ ಹಿಡಿದಿರುವುದಾಗಿ ಹೇಳಿ, ಮಾರೇಗೌಡರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದ. ಬಳಿಕ ಅವರ ಮನೆಗೆ ಬಂದು ಸುಕನ್ಯಾಳನ್ನು ಹತ್ಯೆ ಮಾಡಿ, ಆ ನಂತರ ಗೌರಮ್ಮ ಅವರ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದರು. ರಾಮನಗರ ಉಪವಿಭಾಗದ ಅಂದಿನ ಡಿವೈಎಸ್ಪಿ ಲಕ್ಷ್ಮಿ ಗಣೇಶ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮರುಳ ಸಿದ್ದಾರಾಧ್ಯ ಅವರು ಆರೋಪಿಗೆ ಗಲ್ಲು ಶಿಕ್ಷೆ ಹಾಗೂ 5 ಸಾವಿರ ರುಪಾಯಿ ದಂಡ ವಿಧಿಸಿ ಆದೇಶ ನೀಡಿದ್ದಾರೆ.












Click it and Unblock the Notifications