37ನೇ ದಿನಕ್ಕೆ ಕಾಲಿಟ್ಟ ಟೊಯೋಟಾ ಕಾರ್ಮಿಕರ ಹೋರಾಟ
ರಾಮನಗರ, ಡಿಸೆಂಬರ್ 15: ರಾಮನಗರ ಜಿಲ್ಲೆಯ ಬಿಡದಿಯಲ್ಲಿನ ಟೊಯೋಟಾ ಕಿರ್ಲೋಸ್ಕರ್ ಘಟಕದ ಕಾರ್ಮಿಕರ ಪ್ರತಿಭಟನೆ 37ನೇ ದಿನಕ್ಕೆ ಕಾಲಿಟ್ಟಿದೆ. ಆಡಳಿತದ ಮಂಡಳಿ ಮತ್ತು ಕಾರ್ಮಿಕರ ನಡುವಿನ ಅಸಮಾಧಾನ ಮುಂದುವರೆದಿದ್ದು, ಹಲವಾರು ಸಂಘಟನೆಗಳು ಕಾರ್ಮಿಕರಿಗೆ ಬೆಂಬಲ ನೀಡಿವೆ.
ಮಂಗಳವಾರ ಎಐಟಿಯುಸಿ ಸೇರಿದಂತೆ ಹಲವು ಕಾರ್ಮಿಕರ ಸಂಘಟನೆಗಳು ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿವೆ. ರಾಮನಗರ ಎಐಟಿಯುಸಿ ಅಧ್ಯಕ್ಷ ದೀಪಕ್ ನೇತೃತ್ವದ ಎಐಟಿಯುಸಿಯ ನಿಯೋಗ ಹಾಗೂ ಹೋಂಡಾ ಕಾರ್ಮಿಕರ ಸಂಘದ ನಾಯಕರು ಕಾರ್ಮಿಕರ ಮುಷ್ಕರದಲ್ಲಿ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಕಾರ್ಮಿಕ ಸಂಘಟನೆಗಳ ಮುಖಂಡರು, ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಆಡಳಿತ ಮಂಡಳಿ, ಜಿಲ್ಲಾಡಳಿತ ಪೊಲೀಸ್ ಬಲ ಬಳಸಿಕೊಂಡು ಕಾರ್ಮಿಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ದೂರಿದರು.

ರಾಜ್ಯದ ಹಲವು ಕಾರ್ಮಿಕ ಸಂಘಗಳು, ಸಂಘಟನೆಗಳು, ಒಕ್ಕೂಟಗಳು ಕಾರ್ಮಿಕರಿಗೆ ಬೆಂಬಲ ಸೂಚಿಸುತ್ತಿವೆ. ನೊಂದ ಕಾರ್ಮಿಕರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸ್ಥಳ ಖಾಲಿ ಮಾಡಿಸಲಾಗಿದೆ. ಪೊಲೀಸರು ಪೆಂಡಾಲ್ ತೆರವುಗೊಳಿಸಿದ್ದಾರೆ.
ಆಡಳಿತ ಮಂಡಳಿಯ ವಿರುದ್ಧ ನಾವು ಪಟ್ಟು ಬಿಡದೆ ನಮ್ಮ ಹೋರಾಟ ಮುಂದುವರೆಸಿದ್ದೇವೆ. ಕಾರ್ಮಿಕರು ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ವಿಧಾನಸೌಧ ಚಲೋ ಮಾಡುವುದಾಗಿ ಸರ್ಕಾರಕ್ಕೆ ಕಾರ್ಮಿಕರು ಎಚ್ಚರಿಕೆ ನೀಡಿದರು.

ಕಾರ್ಮಿಕರ ಹೋರಾಟಕ್ಕೆ ಎಐಟಿಯುಸಿ ರಾಜ್ಯ ಘಟಕ ಮತ್ತು ಆನೇಕಲ್ ತಾಲೂಕು ಸಮಿತಿ, ಹೋಂಡ ಕಂಪೆನಿಯ ಕಾರ್ಮಿಕ ಸಂಘ, ಕಾಂಟಿನೆಂಟಲ್ ಕಾಂಪೋನೆಂಟ್ಸ್ ಇಂಡಿಯಾದ ಕಾರ್ಮಿಕ ಸಂಘಗಳು ಬೆಂಬಲವನ್ನು ಘೋಷಣೆ ಮಾಡಿವೆ.
ಸಹೋದ್ಯೋಗಿಗಳನ್ನು ಅಮಾನತು ಮಾಡಿರುವುದನ್ನು ಖಂಡಿಸಿ ಕಾರ್ಮಿಕರು ಹೋರಾಟ ಆರಂಭಿಸಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಕಾರ್ಮಿಕರು, ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದರು. ಆದರೆ, ಸಮಸ್ಯೆ ಇನ್ನೂ ಬಗೆಹರಿದಿಲ್ಲ.












Click it and Unblock the Notifications