Breaking; ಕನಕಪುರದ ಕಬ್ಬಾಳು ಬೆಟ್ಟದಲ್ಲಿ ಪ್ರೇಮಿಗಳ ಆತ್ಮಹತ್ಯೆ
ರಾಮನಗರ, ಸೆಪ್ಟೆಂಬರ್ 26: ವಿವಾಹಿತ ಯುವತಿ ಪ್ರಿಯಕರನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರದಲ್ಲಿ ನಡೆದಿದೆ. ತಾಲೂಕಿನ ಕಬ್ಬಾಳು ಗ್ರಾಮದ ಕಬ್ಬಾಳು ಬೆಟ್ಟದಿಂದ ಹಾರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ರಾಮನಗರ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಕಬ್ಬಾಳು ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು ಕೊಳೆತ ಸ್ಥಿತಿಯಲ್ಲಿ ಶವಗಳು ಇಂದು ಸಿಕ್ಕಿವೆ.
ಮೃತಪಟ್ಟವರನ್ನು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚಿಟಿ ತಾಲೂಕು ಉರುಗ್ಯಂ ಗ್ರಾಮದ ಚಂದನ (20) ಹಾಗೂ ಆಕೆಯ ಪ್ರಿಯಕರ ಅದೇ ಗ್ರಾಮದ ಸತೀಶ್ ಕುಮಾರ್ (24) ಎಂದು ಗುರುತಿಸಲಾಗಿದೆ.

ಚಂದನಳನ್ನು ಆಕೆಯ ಪೋಷಕರು ತಮ್ಮ ಗ್ರಾಮದ ಪಕ್ಕವಿರುವ ದೊಡ್ಡಮರಳ್ಳಿ ಗ್ರಾಮದ ಗಣೀಶ್ ಎಂಬಾತನ ಜೊತೆ ಕಳೆದ ವರ್ಷ ಮದುವೆ ಮಾಡಿಕೊಟ್ಟಿದ್ದರು. ಗಣೇಶ್ ಪ್ರಸ್ತುತ ಕನಕಪುರದ ವಾಸು ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬದೊಡನೆ ವಾಸವಾಗಿದ್ದ.
ಒಂದೇ ಗ್ರಾಮದವರಾದ ಚಂದನ ಮತ್ತು ಸತೀಶ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಬೇರೊಬ್ಬನ ಜೊತೆ ಮದುವೆ ಮಾಡಿಕೊಟ್ಟಿದ್ದರಿಂದ ಆಕೆ ಬೇಸತ್ತಿದ್ದಳು ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 22ರಂದು ಚಂದನ ಮನೆಯಿಂದ ಕಾಣೆಯಾಗಿದ್ದು, ಆಕೆ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇಂದು ತನ್ನ ಪ್ರಿಯಕರ ಸತೀಶ್ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಬೆಟ್ಟದಲ್ಲಿ ಓಡಾಡುವ ದನಗಾಯಿಗಳು ಹಾಗೂ ಗ್ರಾಮಸ್ಥರಿಗೆ ಕೊಳೆತು ನಾರುತ್ತಿದ್ದ ಎರಡು ಶವಗಳು ಕಂಡಿವೆ. ತಕ್ಷಣ ಅವರು ಸಾತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕನಕಪುರ ಸಿಪಿಐ ಕೃಷ್ಣ ಹಾಗು ಸಾತನೂರು ಪಿಎಸ್ಐ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಆತ್ಮಹತ್ಯೆ ಮಾಡಿಕೊಂಡ ಚಂದನಳ ತಾಯಿ ರತ್ನಮ್ಮ ತಮ್ಮ ಪುತ್ರಿ ಕಾಣೆಯಾಗಿರುವ ಬಗ್ಗೆ ಕನಕಪುರನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶವಗಳನ್ನು ಶವ ಪರೀಕ್ಷೆಗಾಗಿ ಕಳುಹಿಸಲಾಗಿದೆ.












Click it and Unblock the Notifications