Bengaluru - Mysuru Expressway ಜಲಾವೃತ: ಕಾರು ಅಪಘಾತ, ವಾಹನ ಸವಾರರ ಪರದಾಟ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕೆಳಸೇತುವೆ ಬಳಿ ನೀರು ನಿಂತಿದ್ದು, ವಾಹನಗಳು ಮುಂದಕ್ಕೆ ಚಲಿಸಲಾಗಿದೇ ವಾಹನ ದಟ್ಟಣೆ ಉಂಟಾಗಿದೆ. ಅಲ್ಲದೇ ಸರಣಿ ಅಪಘಾತಗಳು ಕೂಡ ನಡೆದಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಮನಗರ ಮಾರ್ಚ್ 18: ತಡರಾತ್ರಿ ಸುರಿದ ಮಳೆಯಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ರಾಮನಗರ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಾರಾಂತ್ಯದ ಹಿನ್ನೆಲೆಯಲ್ಲಿ ಸಾಕಷ್ಟು ವಾಹನಗಳು ಈ ಮಾರ್ಗವಾಗಿ ಚಲಿಸುತ್ತಿದ್ದು, ಜಲಾವೃತಗೊಂಡ ರಸ್ತೆಯಿಂದ ಸವಾರರು ಹೈರಾಣಾಗಿದ್ದಾರೆ.
ಹೆದ್ದಾರಿಯ ಕೆಳಸೇತುವೆ ಬಳಿ ನೀರು ನಿಂತಿದ್ದು, ವಾಹನಗಳು ಮುಂದಕ್ಕೆ ಚಲಿಸಲಾಗಿದೇ ವಾಹನ ದಟ್ಟಣೆ ಉಂಟಾಗಿದೆ. ಅಲ್ಲದೇ ಸರಣಿ ಅಪಘಾತಗಳು ಕೂಡ ನಡೆದಿದೆ. ದಶಪಥ ಹೆದ್ದಾರಿಯಲ್ಲಿ ಮಳೆ ಅವಾತರ ಹಿನ್ನೆಲೆಯಲ್ಲಿ ಮಳೆಯ ನೀರಿನಿಂದ ಕಾರು ಕೆಟ್ಟುನಿಂತಿದ್ದು, ಈ ವೇಳೆ ಹಿಂದೆ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರ ಹಾಗೂ ಸರ್ಕಾರದ ವಿರುದ್ಧ ಕಾರಿನ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ.
ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದರೆ ಮಳೆಗಾಲದಲ್ಲಿ ಇನ್ನೇನು ಗತಿ, ಅಧಿಕಾರಿಗಳು ಮಳೆ ನೀರು ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.
270 ರೂಪಾಯಿ ಟೋಲ್ ಕಟ್ಟಿದ್ದೇನೆ. ಮಳೆ ನೀರಿನಿಂದ ಕಾರು ಎಂಜಿನ್ ಸೀಜ್ ಆಗಿದೆ. ಬೆಳಗ್ಗಿನ ಜಾವ ಸಮಯದಲ್ಲಿ ಈ ಮಾರ್ಗವಾಗಿ ಬಂದು ರಸ್ತೆ ನೀರಿನಲ್ಲಿ ಕಾರು ಸಿಲುಕಿಕೊಂಡಿದೆ. ಟೋಯಿಂಗ್ ಮಾಡೋದಕ್ಕೆ ದುಡ್ಡು, ಗ್ಯಾರೇಜ್ ಸಿಬ್ಬಂದಿ ಕರೆತರೋದಕ್ಕೆ ದುಡ್ಡು, ಇತ್ತ ಇಂಜಿನ್ ಸೀಜ್. ಟೋಲ್ ಕಟ್ಟಿದ್ದಲ್ಲದೆ ಇಷ್ಟು ನಷ್ಟ ಮಾಡಿಕೊಂಡಿದ್ದೇನೆ. ನನಗೆ ಪರಿಹಾರ ಕೊಡಿ ಎಂದು ಮಡಿಕೇರಿ ಕಡೆ ಪ್ರಯಾಣ ಮಾಡುತ್ತಿದ್ದ ಕಾರು ಚಾಲಕ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಕಳೆದ ವರ್ಷ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ನಿರ್ಮಾಣದ ಸಮಯದಲ್ಲಿ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಜಲಾವೃತವಾದ ಘಟನೆ ಕೂಡ ನಡೆದಿತ್ತು. ಈ ಸಮಯದಲ್ಲಿಯೇ ವಾಹನ ಸವಾರರು ಈ ಬಗ್ಗೆ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ ಈಗ ಉದ್ಘಾಟನೆಯಾದ ವಾರದೊಳಗೆ ಮತ್ತೆ ಅದೇ ರೀತಿಯ ಸ್ಥಿತಿ ನಿರ್ಮಾವಾಗಿದೆ.
ಮಳೆಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಶುಕ್ರವಾರ ಸಂಜೆ ಸುರಿದ ಸಾಧಾರಣ ಮಳೆಗೆ ರಸ್ತೆ ಜಲಾವೃತಗೊಂಡಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ವಾಹನ ಸವಾರರ ಆಕ್ರೋಶದ ಬಳಿಕ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ರಸ್ತೆ ಜವಾವೃತಗೊಂಡ ರಾಮಗನಗರಕ್ಕೆ ಆಗಮಿಸಿದ್ದು, ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ನೀರು ಹೊರಹಾಕುವ ಕಾರ್ಯ ಆರಂಭಿಸಿದ್ದಾರೆ. ಸರ್ವೀಸ್ ರಸ್ತೆ ಪಕ್ಕದಲ್ಲಿ ಡ್ರೈನೇಜ್ ಮಾಡಿ ನೀರನ್ನು ಹೊರ ಹಾಕಲು ಯತ್ನಿಸುತ್ತಿದ್ದಾರೆ. ಈ ವೇಳೆ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿರುವ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಾರ್ಚ್ 14ರಿಂದ ಟೋಲ್ ಸಂಗ್ರಹ ಆರಂಭವಾಗಿದೆ. ದುಬಾರಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಟೋಲ್ ಸಂಗ್ರಹ ಆರಂಭವಾದ ದಿನದಿಂದ ಪ್ರತಿಭಟನೆಗಳು ನಡೆಯುತ್ತಿದೆ. ಸರ್ವೀಸ್ ರಸ್ತೆ ಸೌಲಭ್ಯ ಸೂಕ್ತವಾಗಿ ನೀಡದೇ ಟೋಲ್ ಸಂಗ್ರಹ ಮಾಡಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಳೆಗೆ ಹೆದ್ದಾರಿ ಜಲಾವೃತವಾಗಿದ್ದು, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದಾರೆ.












Click it and Unblock the Notifications