"ಸಿದ್ದರಾಯ್ಯನವರಿಗೆ ಉತ್ತರ ನೀಡಲು ಸಿಎಂ ಸಮರ್ಥರು'
ರಾಮನಗರ, ಮಾರ್ಚ್ 01: ಬಜೆಟ್ ಅಧಿವೇಶನವನ್ನು ವಿರೋಧ ಮಾಡಬಾರದು, ಏನೇ ಸಮಸ್ಯೆ ಇದ್ದರು ಅಸೆಂಬ್ಲಿಯಲ್ಲಿ ಬಂದು ಚರ್ಚೆ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸವಾಲು ಹಾಕಿದರು.
ರಾಮನಗರ ತಾಲ್ಲೂಕಿನ ಅವರ ಹುಟ್ಟೂರು ಶೆಟ್ಟಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಜೆಟ್ ಅಧಿವೇಶನ ಬಹಿಷ್ಕಾರ ಮಾಡುವುದರಿಂದ ಏನೂ ಪ್ರಯೋಜನವಾಗಲ್ಲ. ಚರ್ಚೆಗೆ ವಿರೋಧ ಪಕ್ಷದ ನಾಯಕರಿಗೆ 3-4 ಗಂಟೆ ಕಾಲಾವಕಾಶ ಕೊಡುತ್ತಾರೆ ಎಂದರು.

ಅಸೆಂಬ್ಲಿಯಲ್ಲೇ ಪ್ರತಿಭಟನೆ ಹಾಗೂ ಸರಕಾರಕ್ಕೆ ಚಾಟಿ ಸಿದ್ದರಾಮಯ್ಯ ಬೀಸಲಿ, ಅವರು ಏನು ಮಾತಾಡಿದರು ಪೇಸ್ ಮಾಡೋಕೆ ಮುಖ್ಯಮಂತ್ರಿಗಳು ಇದ್ದಾರೆ ಎಂದು ತಮ್ಮ ಮಾಜಿ ಗುರು ಸಿದ್ದರಾಮ್ಯನವರಿಗೆ ಸವಾಲ್ ಹಾಕಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಸೋಮಶೇಖರ್, ನಾವು ಮತ್ತೆ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಪಕ್ಷದಿಂದ ನಾವು ಹೊರಗಡೆ ಹೋಗುತ್ತವೆ ಅಂತಾ ಹೇಳಿರಲಿಲ್ಲ, ಪಕ್ಷದಿಂದ ಅವರೇ ಹೊರಗೆ ಹಾಕಿರುವುದರಿಂದ ಮತ್ತೆ ಕಾಂಗ್ರೆಸ್ ಗೆ ಹೋಗುವಂತಹ ಪ್ರಮೇಯವೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಆಹ್ವಾನ ಕೊಟ್ಟಿದೆ, ಬಿಜೆಪಿಯಿಂದ ಶಾಸಕಾಗಿ ಆಯ್ಕೆ ಕೂಡ ಆಗಿದ್ದೇವೆ. ಅದೇ ಬಿಜೆಪಿ ಸರಕಾರದಲ್ಲಿ ಸಹಕಾರ ಮಂತ್ರಿಯಾಗಿದ್ದೇನೆ, ಇಂತಹ ಸಮಯದಲ್ಲಿ ಮತ್ತೆ ಕಾಂಗ್ರೆಸ್ ಗೆ ಮರಳುವ ಪ್ರಶ್ನೆ ಇಲ್ಲ, ಯಾವ ಹೈಕಮಾಂಡ್ ಹೇಳಿದರು ಅಷ್ಟೇ, ಯಾರು ಹೇಳಿದ್ರು ಅಷ್ಟೆ. 100 ಕ್ಕೆ 100 ಬಿಜೆಪಿ ಪಕ್ಷದಲ್ಲೇ ಇರುತ್ತೇನೆ ಎಂದು ಸಚಿವ ಸೋಮಶೇಖರ್ ಕಾಂಗ್ರೆಸ್ ಸೇರುವ ವದಂತಿಗೆ ತೆರೆ ಎಳೆದರು.

ನನಗೆ ಯಾವ ಜಿಲ್ಲೆ ಉಸ್ತುವಾರಿ ಕೊಡುತ್ತಾರೆ ಅಂತಾ ಗೊತ್ತಿಲ್ಲ, ಯಾವ ಜಿಲ್ಲೆ ಉಸ್ತುವಾರಿ ಕೊಟ್ಟರೂ ಕೆಲಸ ಮಾಡುತ್ತೇನೆ, ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ, ನಾನು ರಾಮನಗರ ಜಿಲ್ಲೆಯನ್ನು ಉಸ್ತುವಾರಿ ಕೊಡಿ ಅಂತಾ ಕೇಳಿಲ್ಲ, ನಾನು ಆಕಾಂಕ್ಷಿಯು ಅಲ್ಲ. ನನ್ನ ಸ್ವಂತ ಜಿಲ್ಲೆ ರಾಮನಗರ ಉಸ್ತುವಾರಿ ಕೊಟ್ಟರೆ ಸ್ವಾಗತಿಸುತ್ತೇನೆ, ಜಿಲ್ಲೆಯ ಪರಿಚಯ ಇರುವ ಕಾರಣ ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ ಎಂದು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.
ರಾಜಕೀಯವಾಗಿ ಹಲವು ಏಳು ಬೀಳುಗಳನ್ನು ಕಂಡಿದ್ದೇನೆ, ನನಗೆ ನನ್ನ ತಾಯಿ ಅಶೀರ್ವಾದ ನನಗೆ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನೀಡಿದೆ ಎಂದು ತಾಯಿ ಆಶೀರ್ವಾದ ನೆನೆದು ವೇದಿಕೆಯ ಮೇಲೆ ಕಣ್ಣಲ್ಲಿ ನೀರು ತುಂಬಿಕೊಂಡು ಭಾವುಕರಾದರು.












Click it and Unblock the Notifications