ಸಬರ್ಬನ್ ರೈಲ್ವೆ ಯೋಜನೆ ಮೋದಿಯಿಂದ ಮೂರು ವರ್ಷ ವಿಳಂಬ: ಎಚ್.ಡಿ. ಕುಮಾರಸ್ವಾಮಿ
ರಾಮನಗರ, ಜೂ21: ಸಬ್ ಅರ್ಬನ್ ರೈಲ್ವೆ ಯೋಜನೆ ನನ್ನ ಕಾಲದಲ್ಲೇ ಅನುಷ್ಠಾನಕ್ಕೆ ಬರಬೇಕಿತ್ತು ಆದರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಮೂರು ವರ್ಷ ತಡವಾಗಿ ಆರಂಭವಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಅವರು ಇಂದು ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಹಮ್ಮಿಕೊಂಡಿದ್ದ ರೈತರಿಗೆ ಸಾಗುವಳಿ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಹತ್ತಿರದಲ್ಲಿದೆ ಹಾಗಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.
ನಿನ್ನೆ ಪ್ರಧಾನಿಗಳು ಸಬ್ ಅರ್ಬನ್ ರೈಲ್ವೆ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಇದು ನಾನು 2018ರಲ್ಲಿ ಸಿಎಂ ಆಗಿದ್ದಾಗಲೇ ಸಬ್ ಅರ್ಬನ್ ಯೋಜನೆ ರೂಪಿಸಿದ್ದೆ. ದೇವೇಗೌಡರ ಜೊತೆಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ರನ್ನು ಭೇಟಿ ಮಾಡಿ ಯೋಜನೆಯ ಬಗ್ಗೆ ಸುಧೀರ್ಘ ಚರ್ಚೆ ಮಾಡಿದ್ದೆ. ಸಬ್ ಅರ್ಬನ್ ಯೋಜನೆಗೆ ರಾಜ್ಯ ಸರ್ಕಾರದಿಂದ ನಾವು 19 ಷರತ್ತುಗಳನ್ನು ವಿಧಿಸಿದ್ದೇವು, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೇ ಕೃಷ್ಣ ಕಚೇರಿಗೆ ಬಂದಿದ್ದರು. ಯೋಜನೆಗೆ ಚಾಲನೆ ನೀಡಲು 2019 ರಲ್ಲೇ ಪ್ರಧಾನಿಗಳು ಬರಬೇಕಿತ್ತು ಬರಲಿಲ್ಲ, ಬಂದಿದ್ದರೆ ಸುಮಾರು 23 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆ ಇಷ್ಟೊತ್ತಿಗೆ ಕಂಪ್ಲೀಟ್ ಆಗಬೇಕಿತ್ತು. ಅಂದು ನಾನು ತೆಗೆದುಕೊಂಡ ನಿರ್ಧಾರಗಳು ಸರ್ಕಾರದ ಕಡತದಲ್ಲಿದೆ ಎಂದು ಮಾಜಿ ಸಿಎಂ ಹೆಚ್ಡಿಕೆ ವಿವರಿಸಿದರು.

ರಾಜ್ಯಕ್ಕೆ ಭೇಟಿ ನೀಡಿರುವುದಕ್ಕೆ ಅಭಿನಂದನೆ : ಕುಮಾರಸ್ವಾಮಿ ವ್ಯಂಗ್ಯ
2019 ರಲ್ಲೇ ಗುದ್ದಲಿ ಪೂಜೆ ಮಾಡಬೇಕಿದ್ದ ಸಬ್ ಅರ್ಬನ್ ರೈಲ್ವೆ ಯೋಜನೆಗೆ 2022 ಕ್ಕೆ ಬಂದಿದ್ದಾರೆ ಎಂದು ಪ್ರಧಾನಿ ವಿರುದ್ಧ ಆರೋಪಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರು - ಮೈಸೂರು ಹೆದ್ದಾರಿ ಕಾಮಗಾರಿಗೆ ತ್ವರಿತವಾಗಿ ಅನುಷ್ಟಾನಕ್ಕೆ ತರಲು 8 ಸಭೆಗಳನ್ನು ಮಾಡಿದ್ದೇನೆ. ಇದೆಲ್ಲವೂ ಸಹ ನಾನು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಮಾಡಿದ್ದು ಎಂದರು. ಅವರು ಸನ್ಯಾಸಿಯಲ್ಲ, ಅಧಿಕಾರಕ್ಕಾಗಿ ಪಕ್ಷ ಇದೇ, ಹಾಗಾಗಿ ಬಂದಿದ್ದಾರೆ , ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಕರ್ನಾಟಕ ನೆನಪಿಗೆ ಬಂದಿದೆ, ಸದ್ಯ ಈಗಲಾದರು ರಾಜ್ಯಕ್ಕೆ ಭೇಟಿ ನೀಡಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ವ್ಯಂಗ್ಯವಾಡಿದರು.
58 ರೈತರಿಗೆ ಸಾಗುವಳಿ ಚೀಟಿ ವಿತರಣೆ
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಾಗುವಳಿ ಚೀಟಿ ವಿತರಣೆಯನ್ನು ಇಂದು ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಯವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿತ್ತು , ಕಾರ್ಯಕ್ರಮದಲ್ಲಿ ಸುಮಾರು 58 ರೈತರಿಗೆ ಸಾಗುವಳಿ ಚೀಟಿ ವಿತರಿಸಲಾಯಿತು. ಕಳೆದ 3-4, ವರ್ಷಗಳಿಂದ ಕೋರ್ಟ್ ತಕರಾರಿನಿಂದ ನೆನೆಗುದಿಗೆ ಬಿದ್ದಿತ್ತು. ಹಾಗಾಗಿ ಈ ಭಾಗದ ರೈತರಲ್ಲಿ ಆತಂಕ ಮನೆ ಮಾಡಿತ್ತು. ಇಂದು ಸುಮಾರ 58 ರೈತರಿಗೆ ಸಾಗುವಳಿ ಚೀಟಿ ವಿತರಿಸುವ ಮೂಲಕ ಅವರ ಆತಂಕ ಸ್ವಲ್ಪ ಮಟ್ಟಿಗೆ ದೂರ ಮಾಡಿದ್ದೇವೆ ಎಂದರು.

ಒತ್ತುವರಿ ಯಾಗಿರುವ ಅರಣ್ಯ ಭೂಮಿ ವಿಚಾರವಾಗಿ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದೇನೆ. ಹಾಗೂ ಕೈಗಾರಿಕೆಗಳ ಸ್ಥಾಪನೆಗಾಗಿ ಕೆಐಡಿಬಿ ಕೆಲ ಜಮೀನುಗಳನ್ನು ಗುರುತಿಸಿದೆ. ಹಾಗಾಗಿ ಕೆಐಡಿಬಿ ಯೊಂದಿಗೂ ಮಾತುಕತೆ ಮಾಡುತ್ತಿದ್ದೇವೆ ಎರಡು ಇಲಾಖೆಯಲ್ಲಿರುವ ಜಮೀನುಗಳನ್ನು ಬಿಡಿಸಿಕೊಂಡು ನಂತರ ಇನ್ನೂ 110 ಮಂದಿ ರೈತರಿಗೆ ಸಾಗುವಳಿ ಚೀಟಿ ವಿತರಿಸುತ್ತೇವೆ ಎಂದು ಹೆಚ್ಡಿಕೆ ತಿಳಿಸಿದರು.












Click it and Unblock the Notifications