ಬೆಂಗಳೂರು ವಿವಿ ಘಟಿಕೋತ್ಸವ: 6 ಚಿನ್ನದ ಪದಕಗಳಿಗೆ ಕೊರಳೊಡ್ಡಿದ ರಾಮನಗರದ ಸ್ಪೂರ್ತಿ
ರಾಮನಗರ, ಡಿಸೆಂಬರ್ 7:ಅನಾರೋಗ್ಯದ ನಡುವೆಯೂ ಬಿಕಾಂ ಪದವಿಯಲ್ಲಿ ಆರು ಚಿನ್ನದ ಪದಕ ಗಳಿಸಿ ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಣಿ ಪಡೆದು ಅಪ್ರತಿಮ ಸಾಧನೆ ಮಾಡಿದ ಬಿಡದಿ ಪಟ್ಟಣದ ಸ್ಪೂರ್ತಿ.ಆರ್‌ಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಚಿನ್ನದ ಪದಕಗಳನ್ನು ಪ್ರದಾನ ಮಾಡಿದ್ದಾರೆ.
ಆರು ಚಿನ್ನದ ಪದಕ ಪಡೆಯುವ ಮೂಲಕ ರಾಮನಗರ ಜಿಲ್ಲೆ ಹಾಗೂ ಬಿಡದಿ ಪಟ್ಟಣಕ್ಕೆ ಸ್ಫೂರ್ತಿ. ಆರ್ ಕೀರ್ತಿ ತಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ 57ನೇ ಘಟಿಕೋತ್ಸವದಲ್ಲಿ ಸಾಧಕಿ ಸ್ಪೂರ್ತಿ ಅವರಿಗೆ ಆರು ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.
ಬಿಡದಿ ಪಟ್ಟಣದ ಜ್ಞಾನ ವಿಕಾಸ್ ಸಮೂಹ ಸಂಸ್ಥೆಯಲ್ಲಿ ಬಿಕಾಂ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ ಸ್ಪೂರ್ತಿ. ಆರ್. ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಶ್ರೇಣಿ ಪಡೆದು ಆರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಜೂನ್ ತಿಂಗಳಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದಿಂದ ಚಿನ್ನದ ಪದಕ ಘೋಷಣೆ ಮಾಡಲಾಗಿತ್ತು.

ಅನಾರೋಗ್ಯಕ್ಕೆ ಸೆಡ್ಡು ಹೊಡೆದು ಸಾಧನೆ ಮಾಡಿದ ಸ್ಪೂರ್ತಿ
ಸ್ಪೂರ್ತಿ ಎಲ್‌ಕೆಜಿಯಿಂದ ಬಿಕಾಂ ಪದವಿವರೆಗೂ ಬಿಡದಿ ಪಟ್ಟಣದ ಜ್ಞಾನ ವಿಕಾಸ್ ಸಂಸ್ಥೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು. ಪಿಯುಸಿಯಲ್ಲಿ 98.03% ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದರು.
ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಸ್ಪೂರ್ತಿ ಎರಡು ವರ್ಷ ಕಾಲೇಜಿಗೆ ಹೋಗಿ ಪಾಠ ಕೇಳಿದ್ದರು. ಅದರೆ ಅಂತಿಮ ವರ್ಷದಲ್ಲಿ ಆರೋಗ್ಯ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಸತತ 6 ತಿಂಗಳು ಸ್ಪೂರ್ತಿ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾದ ಪರಿಸ್ಥಿತಿ ಇತ್ತು. ಅನಾರೋಗ್ಯ ಸಮಸ್ಯೆಯ ನಡುವೆಯೂ ಛಲ ಬಿಡದ ಸ್ಪೂರ್ತಿ, 6 ತಿಂಗಳು ಕಾಲ ಆನ್‌ಲೈನ್‌ನಲ್ಲೇ ಪಾಠ ಕೇಳಿ ಹಾಗೂ ಸ್ನೇಹಿತರ ಬಳಿ ಕೇಳಿ ತಿಳಿದುಕೊಂಡು ಅನಾರೋಗ್ಯಕ್ಕೆ ಸೆಡ್ಡು ಹೊಡೆದು ಸಾಧನೆ ಮಾಡಿದ್ದಾರೆ.

ಮಧ್ಯಮ ವರ್ಗದ ಕುಟುಂಬದಿಂದ ಬಂದ ಸ್ಪೂರ್ತಿಯ ಸಾಧನೆ
ಬೆಂಗಳೂರು ವಿವಿಯಿಂದ ಆರು ಚಿನ್ನದ ಪದಕ ಪಡೆದ ಸ್ಪೂರ್ತಿ ಬಿಡದಿ ಪಟ್ಟಣದ ನಿವಾಸಿಯಾಗಿದ್ದಾರೆ. ಬಿಡದಿಯ ನಾಮ್ ಧಾರಿ ಸೀಡ್ಸ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎಲ್‌ಕೆಜಿಯಿಂದ ಪದವಿವರೆಗೆ ಜ್ಞಾನ ವಿಕಾಸ್ ಸಮೂಹ ಸಂಸ್ಥೆಯ ವಿದ್ಯಾಭ್ಯಾಸ ಮಾಡಿ, ಬಿಕಾಂ ಪದವಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. 6 ಚಿನ್ನದ ಪದಕ ಪಡೆದ ಸ್ಪೂರ್ತಿಗೆ ಜ್ಞಾನ ವಿಕಾಸ್ ಸಂಸ್ಥೆಯ ಎಲ್.ಸತೀಶ್, ಕಾರ್ಯದರ್ಶಿ ನಾಗರಾಜ್, ಖಜಾಂಚಿ ರಾಜಣ್ಣ, ನಿರ್ದೇಶಕರಾದ ಸತೀಶ್ ಚಂದ್ರ, ಗಿರೀಶ್ ಸೇರಿದಂತೆ ಜ್ಞಾನ ವಿಕಾಸ್ ಸಂಸ್ಥೆಯ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

ಶಿಕ್ಷಣ ಸಂಸ್ಥೆಗೆ ಧನ್ಯವಾದ ತಿಳಿಸಿದ ಸ್ಪೂರ್ತಿ
ತನ್ನ ಸಾಧನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಪೂರ್ತಿ, "ನಾನು ಮೊದಲಿನಿಂದಲೂ ಓದಿನಲ್ಲಿ ಮುಂದೆ ಇದ್ದೆ. ಏನಾದರೂ ಸಾಧಿಸಬೇಕೆಂಬ ಛಲ ಇಂದಿನ ಸಾಧನೆಗೆ ಸ್ಪೂರ್ತಿ. ಎಲ್‌ಕೆಜಿಯಿಂದ ಬಿಕಾಂವರೆಗೆ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ವ್ಯಸಾಂಗ ಮಾಡಿದ್ದು ಸಹ ನನ್ನ ಈ ಸಾಧನೆಗೆ ಸಹಕಾರಿಯಾಗಿದೆ. ನನಗೆ 6 ಚಿನ್ನದ ಪದಕ ಬಂದಿರುವುದು ಸಂತಸವನ್ನ ತಂದಿದೆ. ನಮ್ಮ ಸಂಸ್ಥೆಗೆ ಹಾಗೂ ನನ್ನ ತಂದೆ ತಾಯಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಖುಷಿ ಹಂಚಿಕೊಂಡರು.

ಸ್ಪೂರ್ತಿಗೆ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮೆಚ್ಚುಗೆ
ಆರು ಚಿನ್ನದ ಪದಕ ಪಡೆದ ಸ್ಪೂರ್ತಿಬಗ್ಗೆ ಅಭಿಮಾನ ವ್ಯಕ್ತಪಡಿಸಿ ಮಾತನಾಡಿದ ಜ್ಞಾನ ವಿಕಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ "ನಮ್ಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಸ್ಪೂರ್ತಿ. ಆರ್ ಅವರಿಗೆ 57ನೇ ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರು ಚಿನ್ನದ ಪದಕಗಳನ್ನ ಪ್ರಧಾನ ಮಾಡಿದ್ದಾರೆ ಇದೊಂದು ಸಂತಸದ ವಿಷಯ. ಮೊದಲಿನಿಂದಲೂ ಓದಿನಲ್ಲಿ ಸ್ಪೂರ್ತಿ ಮುಂದೆ ಇದ್ದು, ಏನಾದರೂ ಸಾಧಿಸಬೇಕೆಂಬ ಛಲ ಆ ವಿದ್ಯಾರ್ಥಿಯಲ್ಲಿತ್ತು. ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು 6 ತಿಂಗಳು ಮನೆಯಲ್ಲಿಯೇ ಇದ್ದು ಆನ್‌ಲೈನ್‌ನಲ್ಲಿ ಪಾಠಗಳನ್ನು ಕೇಳಿಕೊಂಡು ಆರು ಚಿನ್ನದ ಪದಕ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ" ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications