ಯುಗಾದಿ ಜೂಜಾಟಕ್ಕೆ ಬ್ರೇಕ್ ಹಾಕಿದ ಪೊಲೀಸ್ ಇಲಾಖೆ: ಕಾನೂನು ಮೀರಿದರೆ ಕಠಿಣ ಕ್ರಮ
ಯುಗಾದಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅದರಲ್ಲೂ ಹಬ್ಬದ ಆಚರಣೆ ನೆಪದಲ್ಲಿ ಇಸ್ಪೀಟ್ ಆಟ, ಜೌಕಬಾರ, ಸೇರಿದಂತೆ ನಾನಾ ಬಗೆಯ ಜೂಜಾಟ ಕನವರಿಕೆಯಲ್ಲಿದ್ದ ಜನರಿಗೆ ರಾಮನಗರ ಜಿಲ್ಲಾ ಪೊಲೀಸರು ಜೂಜಾಟ ನಿರ್ಬಂಧಿಸುವ ಮೂಲಕ ಶಾಕ್ ನೀಡಿದೆ.
ರಾಮನಗರ, ಮಾರ್ಚ್ 20: ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷದ ಆರಂಭ ಎನ್ನುವ ನಂಬಿಕೆ ಇರುವ ಯುಗಾದಿ ಹಬ್ಬ ಎಂದರೆ ಜನರಲ್ಲಿ ಸಡಗರ ಮನೆ ಮಾಡುತ್ತದೆ. ಹಬ್ಬದಂದು ಹೊಸ ಬಟ್ಟೆ ತೊಟ್ಟು, ಹಬ್ಬದೂಟ ಸವಿದು, ಪರಸ್ಪರ ಶುಭಾಶಯ ಕೋರುವುದರ ಜೊತೆಗೆ ಜೂಜಾಟ ಆಡುವ ಪದ್ಧತಿ ಕೂಡ ಹಿಂದಿನಿಂದಲೂ ಚಾಲ್ತಿಯಲ್ಲಿದೆ.
ಯುಗಾದಿ ಹಬ್ಬದ ಸಂಭ್ರಮಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅದರಲ್ಲೂ ಹಬ್ಬದ ಆಚರಣೆ ನೆಪದಲ್ಲಿ ಇಸ್ಪೀಟ್ ಆಟ, ಜೌಕಬಾರ, ಸೇರಿದಂತೆ ನಾನಾ ಬಗೆಯ ಜೂಜಾಟ ಕನವರಿಕೆಯಲ್ಲಿದ್ದ ಜನರಿಗೆ ರಾಮನಗರ ಜಿಲ್ಲಾ ಪೊಲೀಸರು ಜೂಜಾಟ ನಿರ್ಬಂಧಿಸುವ ಮೂಲಕ ಶಾಕ್ ನೀಡಿದೆ.

ಯುಗಾದಿ ಹಬ್ಬದ ಜೂಜಾಟಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ 'ಯುಗಾದಿ ಹಬ್ಬದಂದು ಎಲ್ಲಾ ಮಾದರಿಯ ಜೂಜಾಟಗಳನ್ನು ನಿಷೇಧಿಸಿದ್ದು, ಒಂದು ವೇಳೆ ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಜೂಜಾಟಕ್ಕೆ ಮುಂದಾದವರು ಹಾಗೂ ಜೂಜು ಅಡ್ಡೆ ನಡೆಸುವರು ಇಬ್ಬರ ಮೇಲೂ ಗೂಂಡಾ ಕಾಯ್ದೆ ದಾಖಲಿಸುವುದಾಗಿ' ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಪ್ರಕಟಣೆಯಲ್ಲಿರುವುದೇನು?
ರಾಮನಗರ ಜಿಲ್ಲೆಯ ಸಮಸ್ತ ನಾಗರೀಕರಿಗೆ ಯುಗಾದಿ ಹಬ್ಬದ ಶುಭಾಷಯಗಳು. ಈ ಮೂಲಕ ತಿಳಿಯಪಡಿಸುವುದೇನೆಂದರೆ, ದಿನಾಂಕ: 22-03-2023ರಂದು ನಡೆಯುವ ಯುಗಾದಿ ಹಬ್ಬದ ಆಚರಣೆ ಸಮಯದಲ್ಲಿ ಕಲ್ಯಾಣ ಮಂಟಪ, ಹೊಟೇಲ್, ವಸತಿ ಗೃಹಗಳು, ಮನೆ, ತೋಟದ ಮನೆಗಳು, ಕ್ಲಬ್‌ಗಳು, ಇನ್ನಿತರ ಸ್ಥಳಗಳು ಮತ್ತು ರಸ್ತೆಯ ಬದಿಗಳಲ್ಲಿ ಟೆಂಟ್ ನಿರ್ಮಿಸಿಕೊಂಡು ಜೂಜಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ಜೂಜಾಟ ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಹಾಗೂ ಇದಕ್ಕೆ ಪ್ರೋತ್ಸಾಹಿಸಿದ ಸ್ಥಳದ ಮಾಲೀಕರು, ಮಧ್ಯವರ್ತಿಗಳ ಮೇಲು ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅಕ್ರಮ ಜೂಜಾಟದಲ್ಲಿ ತೊಡಗುವವರ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಜೂಜಾಟದಲ್ಲಿ ತೊಡಗುವುದಾಗಲಿ, ಅದಕ್ಕೆ ಅವಕಾಶ ಮಾಡಿಕೊಡುವುದಾಗಲಿ, ಪ್ರೋತ್ಸಾಹ ಕೊಡುವುದಾಗಲಿ ಮಾಡಬಾರದಾಗಿ ಈ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ಎಸ್‌ಪಿ ಕಾರ್ತಿಕ್ ರೆಡ್ಡಿ ಎಚ್ಚರಿಗೆ ರವಾನಿಸಿದ್ದಾರೆ.

ಚಿತ್ರದುರ್ಗ: ಯುಗಾದಿ ಜೂಜಾಟಕ್ಕೆ ಬ್ರೇಕ್
ಚಿತ್ರದುರ್ಗ ಜಿಲ್ಲೆಯಲ್ಲೂ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಯುಗಾದಿ ಹಬ್ಬದ ಆಚರಣೆ ಹೆಸರಿನಲ್ಲಿ ಜೂಜಾಟ ಆಡುವುದಕ್ಕೆ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಪೊಲೀಸ್ ಇಲಾಖೆ, 2023ರ ಯುಗಾದಿ ಹಬ್ಬದ ಪ್ರಯುಕ್ತ ಹೊಸದುರ್ಗ, ಹೊಸದುರ್ಗ ತಾಲೂಕು ಹಾಗೂ ಹಿರಿಯೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಇಸ್ಪೀಟ್ ಹಾಗೂ ಇತರ ಬಗೆಯ ಜೂಜಾಟಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜೂಜಾಟಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಹಕಾರ ನೀಡುವುದು, ಲಾಡ್ಜ್, ಹೋಟೆಲ್ ಹಾಗೂ ಮನೆಗಳನ್ನು ಜೂಜಾಟಕ್ಕೆ ನೀಡುವುದನ್ನು ಕಂಡುಬಂದಲ್ಲಿ, ಜೂಜುಕೋರರ ಜೊತೆಗೆ ಮಾಲೀಕರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು. ಇಸ್ಟೀಟ್ ಆಡುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸರಿಗೆ ತಿಳಿಸಿ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.
ಇನ್ನು ಹಿರಿಯೂರು ಪೊಲೀಸರು ಕೂಡ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಕಾನೂನು ಮೀರಿದರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications