Breaking: ಬಂಡೇ ಮಠ ಶ್ರೀ ಹನಿಟ್ರ್ಯಾಪ್: ಕಣ್ಣೂರು ಮಠ ಸ್ವಾಮೀಜಿ, ಯುವತಿ ಬಂಧನ
ರಾಮನಗರ, ಅಕ್ಟೋಬರ್ 30: ಮಾಗಡಿ ತಾಲೂಕಿ ಕಂಚಗಲ್ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಮಠದ ಮೃತ್ಯುಂಜಯ ಸ್ವಾಮೀಜಿ, ಮಠದಲ್ಲಿ ಕೆಲಸ ಮಾಡುತ್ತಿದ್ದ ಅಡ್ವಕೇಟ್ ಮಹದೇವಯ್ಯ ಹಾಗೂ ದೊಡ್ಡಬಳ್ಳಾಪುರ ಮೂಲದ 21 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಸವಲಿಂಗ ಶ್ರೀಗಳು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್‍ನಲ್ಲಿ ಮೂರು ಪುಟಗಳಲ್ಲಿ ಆತ್ಮಹತ್ಯೆಗೆ ಕಾರಣ ಬಹಿರಂಗ ಪಡಿಸಿದ್ದರು. ಅದರಲ್ಲಿ ಯುವತಿಯನ್ನು ಬಿಟ್ಟು ಕಣ್ಣೂರು ಶ್ರೀಗಳು ಹನಿಟ್ರ್ಯಾಪ್ ಮಾಡಿಸಿರುವ ಕುರಿತು ಹಾಗೂ ಕಣ್ಣೂರು ಶ್ರೀಗಳ ಷಡ್ಯಂತ್ರ್ಯದ ಬಗ್ಗೆಯೂ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ರಾಮನಗರ ಎಸ್‌ಪಿ ಸಂತೋಷ್ ಬಾಬು ಪ್ರತಿಕ್ರಿಯಿಸಿದ್ದು, ಕಣ್ಣೂರು ಶ್ರೀ ಹಾಗೂ ಬಂಡೇ ಮಠದ ಶ್ರೀಗಳ ನಡುವೆ ಮಠದ ವಿಚಾರಕ್ಕೆ ಮನಸ್ತಾಪ ಏರ್ಪಟ್ಟಿತ್ತು. ಫೆಬ್ರವರಿಯಲ್ಲಿ ಬಂಡೇ ಮಠದ ಶ್ರೀ ವಿರುದ್ದ ಸೇಡು ತೀರಿಸಿಕೊಳ್ಳಲು ಹಾಗೂ ಬಸಲಿಂಗ ಶ್ರೀಗಳ ಹೆಸರನ್ನು ಕೆಡಿಸಲು ಕಣ್ಣೂರು ಸ್ವಾಮೀಜಿ , ಯುವತಿ ಹಾಗೂ ಇತರರು ಪ್ಲಾನ್ ಮಾಡಿಕೊಂಡಿದ್ದಾರೆ. ಆದರೆ ಯಾವ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು ಎನ್ನುವುದು ತನಿಖೆ ನಂತರ ತಿಳಿದುಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಡೆತ್ ನೋಟ್‌ನಲ್ಲಿ ಬಂಡೇ ಮಠ ಸ್ವಾಮೀಜಿ ಆರೋಪಿಗಳ ಹೆಸರನ್ನು ನಮೂದಿಸಿದ ಹಿನ್ನಲೆ ರಾಮನಗರ ಪೊಲೀಸರು ವಿಚಾರಣೆ ನಡೆಸಿ ಮೊದಲು ಮಹಿಳೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕಣ್ಣೂರು ಶ್ರೀ ಹಾಗೂ ಇತರರ ಹೆಸರು ಬೆಳಕಿಗೆ ಬಂದಿದೆ.












Click it and Unblock the Notifications