ನಿಧಿ ಆಸೆ ತೋರಿಸಿ ಮಹಿಳೆಯನ್ನು ಬೆತ್ತಲೆಗೊಳಿಸಿ ಪೂಜೆ ಮಾಡುತ್ತಿದ್ದ ಆರೋಪಿಗಳ ಬಂಧನ
ರಾಮನಗರ, ನವೆಂಬರ್ 10: ಮನೆಯಲ್ಲಿ ವಾಮಾಚಾರ ಮಾಡಿದರೆ ನಿಧಿ ಸಿಗುತ್ತದೆ ಎಂದು ಹೇಳಿ ಯಾಮಾರಿಸಿ ಮಹಿಳೆಯೊಬ್ಬಳನ್ನು ಬೆತ್ತಲೆ ಮಾಡಿ ಪೂಜೆ ಮಾಡುತ್ತಿದ್ದ ಅನ್ಯರಾಜ್ಯದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಭೂಹಳ್ಳಿ ಗ್ರಾಮದಲ್ಲಿ ನಡೆದಿದೆ.
ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವರನ್ನು ನಿಮ್ಮ ಮನೆಯಲ್ಲಿ ನಿಧಿ ಇದೆ ಎಂದು ನಂಬಿಸಿ ವಾಮಾಚಾರ ಮಾಡುತ್ತಿದ್ದ ತಮಿಳುನಾಡು ಮೂಲದ ಆರು ಆರೋಪಿಗಳನ್ನು ಸಾತನೂರು ಠಾಣೆಯ ಪೋಲಿಸರು ಬಂಧಿಸಿದ್ದಾರೆ.
ಮಂಗಳವಾರ ತಡರಾತ್ರಿ ಶ್ರೀನಿವಾಸ್‌ರವರ ನೂರು ವರ್ಷಗಳಷ್ಟು ಹಳೆಯ ಮನೆಯಲ್ಲಿ ಮಹಿಳೆ ಒಬ್ಬಳನ್ನು ಬೆತ್ತಲು ಮಾಡಿ ವಾಮಾಚಾರದಲ್ಲಿ ತೊಡಗಿದ್ದ ಸಮಯದಲ್ಲಿ ಖಚಿತ ಮಾಹಿತಿ ಮೇರೆಗೆ ಮನೆಯ ಮೇಲೆ ದಾಳಿ ಮಾಡಿದ ಸಾತನೂತು ಪೊಲೀಸರು, ತಮಿಳುನಾಡು ಮೂಲದ ಪ್ರಮುಖ ಆರೋಪಿ ಪಾರ್ಥಸಾರಥಿ, ಮೇಸ್ತ್ರಿ ನಾಗರಾಜು, ಗುರೂಜಿ ಶಶಿಕುಮಾರ್, ಆತನ ಶಿಷ್ಯ ಮೋಹನ್ ಲಕ್ಷ್ಮಿನರಸಪ್ಪ ಹಾಗೂ ಲೋಕೇಶ್ ಎಂಬುವವರನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನಲೆ
ಭೂಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬಾತ ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹೊಂದಿದ್ದ. ಇರೋಬರೋ ಜಮೀನನ್ನು ಕೂಡ ಮಾರಾಟ ಮಾಡಿದ್ದ. ಹೀಗಾಗಿ ಕಳೆದ ಆರು ತಿಂಗಳಿಂದ ಸಾಕಷ್ಟು ಪರದಾಟ ನಡೆಸುತ್ತಿದ್ದ. ಸಾಕಷ್ಟು ನಷ್ಟ ಹೊಂದಿದ್ದ ಶ್ರೀನಿವಾಸನಿಗೆ ಶ್ರೀರಂಗಪಟ್ಟಣದಲ್ಲಿ ತಮಿಳುನಾಡು ಮೂಲದ ಪಾರ್ಥಸಾರಥಿ ಎಂಬುವವನು ಪರಿಚಯವಾಗುತ್ತಾನೆ. ಅವನ ಬಳಿ ತನ್ನ ಕಷ್ಟಗಳನ್ನು ಶ್ರೀನಿವಾಸ್ ಹೇಳಿಕೊಳ್ಳುತ್ತಾನೆ.
ಪಾರ್ಥಸಾರಥಿ ನನಗೆ ತಮಿಳುನಾಡಿನಲ್ಲಿ ಗುರೂಜಿ ಒಬ್ಬರು ಪರಿಚಯವೆಂದು ಹೇಳಿ ಭೇಟಿ ಮಾಡಿಸುತ್ತಾನೆ. ಈ ವೇಳೆ ತಮಿಳುನಾಡು ಮೂಲದ ಶಶಿಕುಮಾರ್ ಎಂಬ ಗುರೂಜಿ ಭೇಟಿ ಮಾಡಿಸಿದ್ದಾನೆ. ಮಾಂತ್ರಿಕ ಶಶಿಕುಮಾರ್ ನಿನ್ನ ಮನೆಯಲ್ಲಿ ನಿಧಿ ಇದೆ. ಹೀಗಾಗಿ ನಿನಗೆ ಸಮಸ್ಯೆಗಳು ಆಗುತ್ತಿವೆ. ಪೂಜೆ ಮಾಡಿ ನಿಧಿ ಹೊರ ತೆಗೆದರೆ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಿಳಿಸಿದ್ದಾನೆ.
ಇನ್ನು ಮಾಟಗಾರನ ಮಾತಿನಂತೆ ಶ್ರೀನಿವಾಸ್ ಮನೆಯಲ್ಲಿ ಇದೇ ತಿಂಗಳ 2ರಂದು ಅಮಾವಾಸೆ ದಿನ ಕೂಡ ಪೂಜೆ ಮಾಡುತ್ತಾರೆ. ಆದರೆ ಪೂಜೆ ಯಶಸ್ವಿ ಆಗುವುದಿಲ್ಲ. ಮತ್ತೆ ಮುಂದಿನ ಮಂಗಳವಾರ ಮಹಿಳೆಯೊಬ್ಬಳನ್ನು ಬೆತ್ತಲೆಯಾಗಿ ನಿಲ್ಲಿಸಿ, ಮನೆಯಲ್ಲಿ ಗುಂಡಿ ತೆಗೆದು ಪೂಜೆ ಮಾಡಿದರೆ ನಿಧಿ ಸಿಗುತ್ತದೆ ಎಂದು ಸಲಹೆ ನೀಡುತ್ತಾನೆ.

ಅದರಂತೆ ನೆನ್ನೆ ರಾತ್ರಿ ಕೂಡ ಮನೆಯಲ್ಲಿ ಬೆಂಗಳೂರಿನ ಕೆಂಗೇರಿ ಮೂಲದ ಕೂಲಿ ಕೆಲಸ ಮಾಡುವ ಮಹಿಳೆಯನ್ನು 50 ಸಾವಿರ ನೀಡುವ ಆಸೆ ತೋರಿಸಿ ಕರೆದುಕೊಂಡು ಬಂದು ಬೆತ್ತಲೆ ಮಾಡಿ ಪೂಜೆ ಸಹ ಮಾಡಿದ್ದಾರೆ. ಆ ಮಹಿಳೆ ತನ್ನ ಆರು ವರ್ಷ ಮಗುವನ್ನು ಸಹ ಜೊತೆಗೆ ಕರೆದುಕೊಂಡು ಬಂದಿದ್ದಳು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಎಸ್ಪಿ ಎಸ್. ಗಿರೀಶ್ ಪ್ರತಿಕ್ರಿಯೆ
ಭೂಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳೆದ 5- 6 ತಿಂಗಳಿನಿಂದ ವಾಮಾಚಾರ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳವಾರ ತಡರಾತ್ರಿ ದಾಳಿ ಮಾಡಿ, ಸ್ಥಳದಲ್ಲಿದ್ದ 13 ಜನರು ಹಾಗೂ ನಾಲ್ಕು ವರ್ಷದ ಬಾಲಕಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಆರೋಪಿಗಳು ಶ್ರೀನಿವಾಸ್ ಎನ್ನುವವರನ್ನು ನಿಮ್ಮ ಮನೆಯಲ್ಲಿ ನಿಧಿ ಇದೆ ನಂಬಿಸಿ ವಂಚಿಸಿದ ಹಿನ್ನಲೆಯಲ್ಲಿ ತಮಿಳುನಾಡು ಮೂಲದ ಪಾರ್ಥಸಾರಥಿ, ಮೇಸ್ತ್ರಿ ನಾಗರಾಜು, ಗುರೂಜಿ ಶಶಿಕುಮಾರ್, ಆತನ ಶಿಷ್ಯ ಮೋಹನ್ ಲಕ್ಷಿನರಸಪ್ಪ, ಲೋಕೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ಮಾಲೀಕ ಶ್ರೀನಿವಾಸ್ ಹಾಗೂ ಹಣ ನೀಡುವುದಾಗಿ ನಂಬಿಸಿ ಪೂಜೆಗೆ ಕರೆತಂದಿದ್ದ. ಮಹಿಳೆಯಿಂದ ದೂರು ಪಡೆದು ಆರೋಪಿಗಳ ವಿರುದ್ಧ ವಾಮಚಾರ ವಿರೋಧಿ ಕಾಯ್ದೆ 2917, IPC 420, 120B ಮತ್ತು149 ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದೇವೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ತಿಳಿಸಿದರು.