Karnataka election 2023: ಚನ್ನಪಟ್ಟಣದಲ್ಲಿಂದು (ಏಪ್ರಿಲ್ 30) ಪ್ರಧಾನಿ ಮೋದಿ, ದೇವೇಗೌಡ್ರ ಸಮಾವೇಶ
ಚನ್ನಪಟ್ಟಣ, ಏಪ್ರಿಲ್, 30: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಬೊಂಬೆನಾಡು ಚನ್ನಪಟ್ಟಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ಮಾಡಲಿದ್ದಾರೆ. ಮತ್ತೊಂದೆಡೆ ಇದೇ ಕ್ಷೇತ್ರದಲ್ಲೇ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಎಚ್.ಡಿ.ಕುಮಾರಸ್ವಾಮಿ ಅವರ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಚನ್ನಪಟ್ಟಣದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ಹಿನ್ನೆಲೆ, ಇಗ್ಗಲೂರು ಗ್ರಾಮಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ಸಮಾವೇಶ ಪ್ರಾರಂಭ ಆಗಲಿದೆ. ಅಲ್ಲದೆ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ಅವರು ಮತಬೇಟೆ ನಡೆಸಲಿದ್ದಾರೆ. ಮತ್ತೊಂದೆಡೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ಮೋದಿಯವರು ಮತಬೇಟಿ ನಡೆಸಲಿದ್ದಾರೆ.

ಇನ್ನು ಪ್ರಧಾನಿ ಮೋದಿ ಆಗಮನದ ಕುರಿತು ಪ್ರತಿಕ್ರಿಯಿಸಿದ ದೇವೆಗೌಡರು, ನಾನು ಮೊದಲ ಬಾರಿಗೆ ಕುಮಾರಸ್ವಾಮಿ ಅವರ ಕ್ಷೇತ್ರದಲ್ಲಿ ಪ್ರಚಾರಕ್ಕಾಗಿ ಬಂದಿದ್ದೇನೆ. ಇದನ್ನು ಮುಗಿಸಿ ಬೇರೆ ಕ್ಷೇತ್ರಗಳಿಗೆ ಹೋಗುತ್ತೇನೆ. ಪ್ರಧಾನಿಗಳು ಬರುತ್ತಿದ್ದಾರೆ, ಗೊತ್ತಿದೆ ನನಗೆ. ಅವರು ಬರುವುದರೊಳಗೆ ನನ್ನ ಕಾರ್ಯಕ್ರಮ ಮುಗಿಯಲಿದೆ. ಅವರು ಬರೋದನ್ನು ಬೇಡ ಎನ್ನಲು ಆಗುತ್ತದೆಯಾ? ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ರೋಡ್ ಶೋಗೆ ಮಳೆ ಅಡ್ಡಿಯಾಗುವ ಆತಂಕ
ಹಾಗೆಯೇ ಮೈಸೂರಿನಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಮೋದಿ ರೋಡ್ ಶೋ ಮಳೆ ಕಂಟಕವಾಗಿ ಪರಿಣಮಿಸುವುದೇ ಎಂಬ ಪ್ರಶ್ನೆ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರದಲ್ಲಿ ಭಾನುವಾರ ಸಂಜೆ ನಾಲ್ಕು ಕಿ.ಮೀ. ರೋಡ್ ಶೋ ನಡೆಸಲಿದ್ದು, ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ.
ಮೈಸೂರು ನಗರದ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹ ರಾಜ ಕ್ಷೇತ್ರ ವ್ಯಾಪ್ತಿಯ ಪ್ರಮುಖ ರಸ್ತೆಯಾದ ರಾಜ ಮಾರ್ಗದಲ್ಲಿ ಮೋದಿ ಅವರ ರೋಡ್ ಶೋ ನಡೆಯಲಿದ್ದು, ಈ ಮೂಲಕ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮತದಾರರಿಗೆ ಪ್ರಧಾನಿ ಮೋದಿ ಮನವಿ ಮಾಡಲಿದ್ದಾರೆ.
ರೋಡ್ ಶೋಗೆ ಬಿಜೆಪಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೆರವಣಿಗೆಯುದ್ದಕ್ಕೂ ಸಾಂಪ್ರಾಯಿಕ ಧಿರಿಸು ಧರಿಸಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜೊತೆಗೆ ಕಲಾ ತಂಡಗಳ ಪ್ರದರ್ಶನ ಆಯಾ ಕಟ್ಟಿನ ಸ್ಥಳಗಳಲಿ ನಡೆಯಲಿದೆ. ಭಾನುವಾರ ಸಂಜೆ 5.30 ರೋಡ್ ಶೋ ಆರಂಭವಾಗಲಿದ್ದು, ಮೂರು ಕ್ಷೇತ್ರಗಳಲ್ಲಿ ನಡೆಯಲಿದೆ. ಭಾನುವಾರ ರಜಾ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಅದರಲ್ಲೂ ಯುವ ಮತದಾರರು ಸೇರುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಎಸ್‌ಪಿಜಿ ಅಧಿಕಾರಿಗಳ ಸಲಹೆ ಮೇರೆಗೆ ಪೊಲೀಸರು ಜಂಬೂಸವಾರಿ ಮಾರ್ಗದಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಅರಮನೆ ದಕ್ಷಿಣ ದ್ವಾರದ ಕಾಡಾ ಕಚೇರಿ (ಪಾಲಿಕೆ ಕಚೇರಿ)ಯಿಂದ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆಯ ಸರಕಾರಿ ಆಯುರ್ವೇದ ಕಾಲೇಜು ಜಂಕ್ಷನ್‌ವರೆಗೆ ಇರುವ ಇಕ್ಕೆಲಗಳ ಕಲ್ಲಿನ ಬ್ಯಾರಿಕೇಡ್‌ಗೆ ಫುಟ್‌ಪಾತ್‌ನಿಂದ ಯಾರೂ ರಸ್ತೆಗೆ ಸುಳಿಯದಂತೆ ಜಾಲರಿಯನ್ನು ಅಳವಡಿಸಲಾಗುತ್ತಿದೆ.
ಓವಲ್ ಮೈದಾನದ ಮುಖ್ಯದ್ವಾರ ಹೊರತುಪಡಿಸಿ ಉಳಿದೆಲ್ಲಾ ಪ್ರವೇಶಗಳನ್ನು ಬಂದ್ ಮಾಡಬೇಕು. ಸುತ್ತಲಿನ ಮರಗಳ ಒಣಗಿದ ರೆಂಬೆ ತೆರವುಗೊಳಿಸಿ ಆವರಣವನ್ನು ಶುಚಿಯಾಗಿಡಬೇಕು. ವಾಹನ ನಿಲುಗಡೆಗೆ ದೂರದಲ್ಲಿ ವ್ಯವಸ್ಥೆ ಮಾಡಬೇಕು. ಬನ್ನಿಮಂಟಪದ ಎಲ್‌ಐಸಿ ವೃತ್ತದವರೆಗೆ ರಾಜಮಾರ್ಗದಲ್ಲಿ ಬ್ಯಾರಿಕೇಡ್ ನಿರ್ಮಿಸಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಪಿಜಿ ಹಿರಿಯ ಅಧಿಕಾರಿಗಳು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹಾಗೂ ಕಾನೂನು ಸುವ್ಯವಸ್ಥೆ ಡಿಸಿಪಿ ಎಂ. ಮುತ್ತುರಾಜ್ ಅವರಿಗೆ ತಿಳಿಸಿದರು.
ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ರಸ್ತೆ ಮಾರ್ಗದ ಇಕ್ಕೆಲಗಳಲ್ಲಿ ದಸರಾ ಮಾದರಿಯಲ್ಲಿ ಮರದ ಬಂಬುಗಳಿಂದ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ರೋಡ್ ಶೋ ಸಂಜೆಯಾದ ಕಾರಣ ರಸ್ತೆ ಬಳಿ ಇರುವ ಮರಗಳಿಗೆ ಪೋಕಸ್ ಲೈಟ್ ಅಳವಡಿಸಲಾಗುತ್ತಿದೆ. ಎಲ್‌ಐಸಿ ವೃತ್ತದಿಂದ ಮೈಸೂರು- ಬೆಂಗಳೂರು ರಸ್ತೆ, ಮಣಿಪಾಲ್ ಆಸ್ಪತ್ರೆ ಜಂಕ್ಷನ್, ನಾರಾಯಣ ಹೃದಯಾಲಯ, ದೇವೇಗೌಡ ವೃತ್ತ, ತಿ.ನರಸೀಪುರ ರಸ್ತೆ ಜಂಕ್ಷನ್‌ಗೆ ಎಸ್‌ಪಿಜಿ ಅಧಿಕಾರಿಗಳು ತೆರಳಿ ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು. ನಂತರ ವಿಮಾನ ನಿಲ್ದಾಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ, ಏರ್‌ಪೋರ್ಟ್ ನಿರ್ದೇಶಕ ಆರ್. ಮಂಜುನಾಥರೊಂದಿಗೆ ಸಭೆ ನಡೆಸಿ ಕೆಲ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದರು.












Click it and Unblock the Notifications