ಕೈ ಕಟ್ಟಿ ನಿಂತ ಫೋಟೋ ವೈರಲ್; ಎಚ್‌ಡಿಕೆ ಹೇಳಿದ್ದೇನು?
ರಾಮನಗರ, ಜುಲೈ 08; ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮಂಡ್ಯ ಸಂಸದೆ ಸುಮಲತಾ ನಡುವಿನ ಮಾತಿನ ಯುದ್ಧ ಮುಂದುವರೆದಿದೆ. ಕುಮಾರಸ್ವಾಮಿ ದಿ. ಅಂಬರೀಶ್ ಜೊತೆಗಿರುವ ಹಿಂದಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಎಚ್. ಡಿ. ಕುಮಾರಸ್ವಾಮಿ ಅಂಬರೀಶ್ ಮುಂದೆ ಕೈಕಟ್ಟಿ ನಿಂತ ಫೋಟೋ ಇದಾಗಿದೆ. ಈ ಕುರಿತು ಗುರುವಾರ ರಾಮನಗರದಲ್ಲಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
"ನಾನು ಸಾರ್ವಜನಿಕರ ಮುಂದೆ ಕೂಡ ಕೈಕಟ್ಟಿ ನಿಲ್ಲುತ್ತೇನೆ. ಅಂಬರೀಶ್‌ಗೆ ನಾನೇನು ಗುಲಾಮನಾಗಿದ್ದೆನಾ?. ಈ ವಿಷಯಕ್ಕೆ ಮಾಧ್ಯಮದವರು ಹೆಚ್ಚಿನ ಮನ್ನಣೆ ಕೊಡುವ ಅವಶ್ಯಕತೆ ಇಲ್ಲ. ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅನೇಕ ಸಮಸ್ಯೆಗಳಿಗೆ ಅದರ ಬಗ್ಗೆ ಮಾಧ್ಯಮದವರು ಗಮನಹರಿಸಬೇಕು" ಎಂದು ಕುಮಾರಸ್ವಾಮಿ ಹೇಳಿದರು.

"ಹೌದು ನಾನು ಭ್ರಷ್ಟಾಚಾರದಲ್ಲಿ ಅಂಬಾಸಿಡರ್ ಅನೇಕ ವರ್ಷಗಳಿಂದ ನಾನು ನಮ್ಮ ಕುಟುಂಬ ಭ್ರಷ್ಟಾಚಾರದ ವಿಷಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟ ಅಧಿಕಾರಿಗಳು, ಭ್ರಷ್ಟಾಚಾರದ ವಿರುದ್ದ ದಾಖಲೆ ಸಮೇತ ಹೋರಾಟ ಮಾಡಿದ್ದೇವೆ" ಎಂದು ಪ್ರತಿಕ್ರಿಯಿಸಿದರು.
ಸುಮಲತಾ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, "ಆ ಹೆಣ್ಣು ಮಗಳ ಬಗ್ಗೆ ಇದೀಗ ಚರ್ಚೆ ಬೇಡ. ಮುಂದಿನ ಚುನಾವಣೆ ಸಂದರ್ಭದಲ್ಲಿ ನಾನು ಮಾತಾಡುತ್ತೇನೆ" ಎಂದು ತಿಳಿಸಿದರು.
ನಿಖಿಲ್ ಕುಮಾರಸ್ವಾಮಿ ಹೇಳಿಕೆ; ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, "ಕೆಆರ್‌ಎಸ್ ಡ್ಯಾಂಗೆ ಆದರದ್ದೇ ಆದ ಇತಿಹಾಸ ಇದೆ. ರಾಜರು ತಮ್ಮ ಒಡವೆಗಳನ್ನು ಅಡವಿಟ್ಟು ಡ್ಯಾಂ ನಿರ್ಮಾಣ ಮಾಡಿದ್ದಾರೆ. ಅಂತಹ ಡ್ಯಾಂ ಬಿರುಕು ಬಿಟ್ಟಿದೆ ಎಂದು ಹೇಳಿದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತೆ. ಜನರಲ್ಲಿ ಗೊಂದಲ ಸೃಷ್ಟಿಸುವ ರೀತಿಯಲ್ಲಿ ಸಂಸದರು ಮಾತನಾಡುವುದು ಸರಿಯಲ್ಲ" ಎಂದರು.
"ಚುನಾವಣೆ ಅಂದ ಮೇಲೆ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ನನ್ನ ಸೋಲನ್ನ ನಾನು ಒಪ್ಪಿಕೊಂಡಿದ್ದೇನೆ. ಮಂಡ್ಯದಲ್ಲಿ ಐದು ಮುಕ್ಕಾಲು ಲಕ್ಷ ಜನರು ನನಗೆ ಮತ ಹಾಕಿದ್ದಾರೆ. ಅದು ಸಣ್ಣ ಸಂಖ್ಯೆ ಅಲ್ಲ, ಬೇಜಾರು ಮಾಡಿಕೊಳ್ಳುವಂತಹದ್ದು ಏನು ಇಲ್ಲ" ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
"ಸಂಸದರಾಗಿ ಮಂಡ್ಯ ಜನ ನಿಮಗೆ ಅವಕಾಶ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಿ. ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೀತಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ. ಜೆಡಿಎಸ್ ಪಕ್ಷದವರಾಗಲಿ, ಬೇರೆ ಪಕ್ಷದವರಾಗಿರಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರೆ ಕ್ರಮವಾಗಲಿ. ನಾನು ಒಬ್ಬ ನಾಗರಿಕನಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಸುಮ್ಮನೆ ಆರೋಪ ಮಾಡುವುದು, ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವುದು ಸರಿಯಲ್ಲ" ಎಂದು ತಿಳಿಸಿದರು.












Click it and Unblock the Notifications