Muda Scam: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ- ಹೆಚ್‌ಸಿ ಬಾಲಕೃಷ್ಣ
ರಾಮನಗರ ಮಾಗಡಿ ಆಗಸ್ಟ್ 17: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಶಾಸಕ ಹೆಚ್.ಸಿ.ಬಾಲಕೃಷ್ಣ ಮೈತ್ರಿ ಪಕ್ಷಗಳ ವಿರುದ್ಧ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ವಿಚಾರವಾಗಿ ಮಾಗಡಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇದು ಬಿಜೆಪಿ, ಜೆಡಿಎಸ್ ಷಡ್ಯಂತ್ರ ಎಂದು ದೂರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯಪಾಲರು ಈ ಮಟ್ಟಕ್ಕೆ ಇಳಿಯುತ್ತಾರೆ ಅಂತ ಅಂದುಕೊಂಡಿರಲಿಲ್ಲ. ರಾಜ್ಯ ಕಂಡ ಏಕೈಕ ಅತ್ಯುತ್ತಮ ನಾಯಕ ಸಿದ್ದರಾಮಯ್ಯ. ಅಧಿಕಾರ ಇದ್ದ ಸಂದರ್ಭದಲ್ಲಿ ಕುಟುಂಬದವರನ್ನ ಅಕ್ಕಪಕ್ಕ ಸೇರಿಸದೇ ಆಡಳಿತ ಮಾಡಿದ್ದಾರೆ. ಬಿಜೆಪಿ ಅವ್ರು ದ್ವೇಷದ ರಾಜಕೀಯ ಮಾಡ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಕಾಲದಲ್ಲಿ ಆಗದೇ ಇರೋ ವಿಚಾರವನ್ನ ಅವರ ಹಣೆಗೆ ಕಟ್ಟುವ ಕೆಲಸ ಆಗ್ತಿದೆ. ಬಿಜೆಪಿಯವ್ರಿಗೆ ಸಿದ್ದರಾಮಯ್ಯನ ಜನಪ್ರಿಯತೆ ಸಹಿಸಲು ಆಗ್ತಿಲ್ಲ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ರು ನಮ್ಮ ತಟ್ಟೆಯ ನೊಣದ ಬಗ್ಗೆ ಮಾತನಾಡುತ್ತಾರೆ. ಬಹುಶಃ ಇದರಿಂದ ಅವರಿಗೆ ಯಾವುದೇ ಅನುಕೂಲ ಆಗಲ್ಲ ಎಂದು ವಾಗ್ದಾಳಿ ಮಾಡಿದರು.
ದ್ವೇಷದ ರಾಜಕಾರಣ ಮಾಡಿ ರಾಜ್ಯವನ್ನ ಬಾಂಗ್ಲಾ, ಶ್ರೀಲಂಕಾ ಸ್ಥಿತಿಗೆ ತರುವ ಪ್ರಯತ್ನ ಮಾಡ್ತಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದ್ವೇಷದ ರಾಜಕಾರಣ ಮಾಡಿರೋ ಉದಾಹರಣೆಯೇ ಇಲ್ಲ. ಇದರಿಂದ ನಮ್ಮ ಸಿದ್ದರಾಮಯ್ಯ ರವರ ಒಂದು ಕೂದಲನ್ನೂ ಬಗ್ಗಿಸಲು ಸಾಧ್ಯವಿಲ್ಲ ಎಂದು ಮಾಗಡಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿ ಕಾರಿದ್ದಾರೆ.
ತರೀಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ತರೀಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯಪಾಲರು ಹಾಗು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿ, ತರೀಕೆರೆ ಪಟ್ಟಣದಲ್ಲಿ ಟೈಯರ್ ಗೆ ಬೆಂಕಿ ಹಾಕಿ ಪ್ರತಿಭಟನೆ ಮಾಡಲಾಗುತ್ತಿದೆ. ಪಟ್ಟಣದ ಗಾಂಧಿ ವೃತದಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರು, ಸಿಎಂ ವಿರುದ್ಧ ಷಡ್ಯಂತರ ಮಾಡಲಾಗಿದೆ ಎಂದು ಘೋಷಣೆಗಳನ್ನು ಕೂಗಿದರು.

ರಾಜ್ಯಪಾಲರ ವಿರುದ್ಧ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವುದನ್ನು ಖಂಡಿಸಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರಿನ ಮಾಜಿ ಶಾಸಕ ನರೇಂದ್ರ ಕಿಡಿಕಾರಿದ್ದಾರೆ.
ಚಾಮರಾಜನಗರದ ಯಳಂದೂರಿನಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ನಿರಪರಾಧಿ, ಮುಡಾದಲ್ಲಿ ಹಗರವೇ ಆಗಿಲ್ಲ, 100 ಬಾರಿ ಸುಳ್ಳನ್ನು ಸತ್ಯ ಎಂದು ಹೇಳಿ ಸತ್ಯವನ್ನೇ ಮಾಡಲು ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಪರ ಹೈಕಮಾಂಡ್ ಇದೆ, ಬಿಜೆಪಿ ಆರೋಪಕ್ಕೆ ಸಮಾವೇಶ ನಡೆಸಿ ಉತ್ತರ ಕೊಟ್ಟಾಗಿದೆ, ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ, ನಮಗೆ ನ್ಯಾಯದ ಮೇಲೆ ನಂಬಿಕೆ ಇದೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದರು.
ದೆಹಲಿ ಸಿಎಂ ಕೇಜ್ರಿವಾಲ್ ರನ್ನು ಕೆಳಗಿಳಿಸಬೇಕೆಂದು ಕೇಂದ್ರ ಸರ್ಕಾರ ಇಡಿ ಬಳಸಿತ್ತು, ಮಲ್ಲಿಕಾರ್ಜುನ ಖರ್ಗೆ ಅವರ ಪ್ರಶ್ನೆಗಳಿಗೆ, ಆರೋಪಗಳಿಗೆ ಉತ್ತರಿಸಲಾಗದೇ ಹಿಂದಿನ ಲೋಕ ಚುನಾವಣೆಯಲ್ಲಿ ಖರ್ಗೆ ಅವರನ್ನು ಬಿಜೆಪಿ ಸೋಲಿಸಿತ್ತು ಎಂದು ಕಿಡಿಕಾರಿದರು. ಅದೇ ರೀತಿ ಕರ್ನಾಟಕದಲ್ಲೂ ಕೂಡ ಸುಳ್ಳು ಆರೋಪಗಳನ್ನು ಬಿಜೆಪಿ ಮಾಡುತ್ತಿದೆ, ಸಿದ್ದರಾಮಯ್ಯ ಪರ ಹೈಕಮಾಂಡ್ , ಶಾಸಕರು ಇದ್ದೇವೆ ಎಂದರು.
''ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಇವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು" ಎಂದು ಮಾಜಿ ಶಾಸಕ ಆರ್ ನರೇಂದ್ರ ಒತ್ತಾಯಿಸಿದರು.












Click it and Unblock the Notifications