ಮಾಗಡಿ ಕಾಂಗ್ರೆಸ್ ಸಮಾವೇಶದಲ್ಲಿ ಜನಕ್ಕೆ ಕಾಸು ಹಂಚಿದ್ದು ದಿಟವೆ!
ಮಾಗಡಿ (ರಾಮನಗರ ಜಿಲ್ಲೆ), ಏಪ್ರಿಲ್ 5: ಮಾಗಡಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಜನಾಶೀರ್ವಾದ ಸಮಾವೇಶದಲ್ಲಿ ಕಾಂಚಾಣ ಭಾರೀ ಸದ್ದು ಮಾಡಿದೆ. ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಬೆಂಬಲಿಗ ರೇಣುಕಪ್ಪ ಎಂಬಾತ ಸಾರ್ವಜನಿಕವಾಗಿಯೇ ಹಣ ಹಂಚುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಜನಾಶೀರ್ವಾದ ಸಮಾವೇಶಕ್ಕೆ ಬಂದಿದ್ದ ಜನರಿಗೆ ತಲಾ ಮುನ್ನೂರು ರುಪಾಯಿ ಹಣ ನೀಡುತ್ತಿರುವ ದೃಶ್ಯ ಈಗ ಎಲ್ಲೆಡೆ ವೈರಲ್ ಅಗಿದೆ. ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ನ ಎ.ಮಂಜುಗೆ ಟಾಂಗ್ ಕೊಡುವಷ್ಟು ಜನರು ಕಾಂಗ್ರೆಸ್ ಸಮಾವೇಶಕ್ಕೆ ಸೇರದೆ ಇದ್ದಿದ್ದು, ಜತೆಗೆ ಕಾರ್ಯಕರ್ತರಲ್ಲಿ ಉತ್ಸಾಹ ಇಲ್ಲದಿದ್ದದ್ದು ಗಮನಕ್ಕೆ ಬಂತು.
ಈ ಸನ್ನಿವೇಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳಿವುದಾದರೆ, ಹಣ ಕೊಟ್ಟು ಜನರನ್ನು ಸೇರಿಸಿ ತಮ್ಮ ನಾಯಕರನ್ನು ಮೆಚ್ಚಿಸಲು ಬಾಲಕೃಷ್ಣ ಪ್ರಯತ್ನಿಸಿದರೇನೋ ಎಂಬ ಅನುಮಾನ ವ್ಯಕ್ತವಾಯಿತು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರದ ಸಾಧನೆಯ ಭಾಷಣವನ್ನು ಮಾಡುತ್ತಿರುವಾಗಲೇ ಸಭೆಯಲ್ಲಿದ್ದ ಜನರು ಅಲ್ಲಿಂದ ಜಾಗ ಖಾಲಿ ಮಾಡಿದರು.

ಈಚೆಗೆ ಮಾಗಡಿಯಲ್ಲಿ ಜೆಡಿಎಸ್ ನಿಂದ ದೊಡ್ಡ ಪ್ರಮಾಣದಲ್ಲಿ ಸಮಾವೇಶ ಮಾಡಲಾಗಿತ್ತು. ಅದಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಕೂಡ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications