ಡಿಕೆಶಿ ರಾಜೀನಾಮೆ ಅಗತ್ಯವಿಲ್ಲ, ಐಟಿ ನೋಟಿಸ್ ಬಗ್ಗೆ ಎಚ್ ಡಿಕೆ
ರಾಮನಗರ, ಜೂನ್ 21: "ಕಾನೂನಿನಲ್ಲಿ ಎಲ್ಲರಿಗೂ ಹೋರಾಟ ಮಾಡಲು ಅವಕಾಶ ಇದೆ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರಿಗೂ ಅವಕಾಶ ಇದೆ. ಅವರಿಗೆ ಇರುವ ದ್ವೇಷದ ರಾಜಕಾರಣ ಸಮಸ್ಯೆಯನ್ನು ಕಾನೂನು ಹೋರಾಟದ ಮೂಲಕ ಬಗೆಹರಿಸಿಕೊಳ್ಳುತ್ತಾರೆ. ಆದರೆ ಈಗ ಅವರ ರಾಜೀನಾಮೆ ಅವಶ್ಯಕತೆ ಇಲ್ಲ" ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಹೇಳಿದ್ದಾರೆ.
ರಾಮನಗರದ ಪೇಟೆ ಕುರಬಳ್ಳಿಯ ಉದ್ಭವ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಐಟಿ ಸಮನ್ಸ್ ಜಾರಿ ಮಾಡಿದ ವಿಚಾರವಾಗಿ ಮಾತನಾಡಿ, ಅಂಥ ಸಮಯ ಬಂದಾಗ ರಾಜೀನಾಮೆ ವಿಚಾರವಾಗಿ ಹೇಳುತ್ತೇನೆ ಎಂದರು.
ಇನ್ನು ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಮಾತನಾಡಿ, ಆದೇಶ ಬರುವವರೆಗೂ ನಾವು ಕಾಯಲು ಆಗುವುದಿಲ್ಲ. ನಮ್ಮ ರೈತರಿಗೂ ಅನುಕೂಲವಾಗುವಂತೆ ಕೆರೆ- ನಾಲೆಗಳಿಗೆ ನೀರು ಬಿಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದ್ದೇನೆ. ಯಾವುದೇ ಕಾನೂನು ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ನಮ್ಮ ರೈತರ ಹಿತ ನನಗೆ ಮುಖ್ಯ. ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳನ್ನು ಭರ್ತಿ ಮಾಡುತ್ತೇನೆ. ನಾನು ಅಧಿಕಾರ ವಹಿಸಿಕೊಂಡು 25 ದಿನ ಮಾತ್ರ ಹಾಗಿದೆ. ರಾಮನಗರದಲ್ಲಿ ಮಾತ್ರ ಸಮಸ್ಯೆ ಇಲ್ಲ. ರಾಜ್ಯದ ಎಲ್ಲ ಕಡೆ ಹಲವು ಸಮಸ್ಯೆಗಳಿವೆ ಎಂದು ಹೇಳಿದರು.
ನನ್ನ ಗಮನ ಈಗ ಬಜೆಟ್ ಮಂಡನೆ ಕಡೆ ಇದೆ. ಮುಂದಿನ ತಿಂಗಳು ಐದನೇ ತಾರೀಕಿನಂದು ಬಜೆಟ್ ಮಂಡನೆ ಮಾಡಬೇಕಿದೆ. ಅದಕ್ಕಾಗಿ ಅಧಿಕಾರಿಗಳ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದೇನೆ. ಬಜೆಟ್ ಮುಗಿದ ನಂತರ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಒಂದೊಂದು ದಿನ ಸಂಪೂರ್ಣವಾಗಿ ಇದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.












Click it and Unblock the Notifications