Mekedatu Padayatra 2.0 : ಮೇಕೆದಾಟು ಪಾದಯಾತ್ರೆ; ಬೆಂಗಳೂರಿಗೆ ತೆರಳುವ ಜನರು ಹೈರಾಣ!
ರಾಮನಗರ, ಫೆಬ್ರವರಿ 28; ಕರ್ನಾಟಕ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಭಾನುವಾರ ಚಾಲನೆ ಸಿಕ್ಕಿದೆ. ನೂರಾರು ಜನರು ಪಾದಯಾತ್ರೆ ಹೊರಟಿದ್ದು, ಇದರ ಬಿಸಿ ನೇರವಾಗಿ ಬೆಂಗಳೂರಿಗೆ ಹೊರಟವರಿಗೆ ತಟ್ಟಿದೆ. ಮೈಸೂರಿನತ್ತ ಹೊರಟ ಪ್ರವಾಸಿಗರ ವಾಹನಗಳೂ ದಟ್ಟಣೆಯಲ್ಲಿ ಸಿಲುಕಿ ಕಿರಿಕಿರಿ ಅನುಭವಿಸುವಂತಾಯಿತು.
ಮೇಕೆದಾಟು ಪಾದಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿತ್ತು. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಶನಿವಾರ ಸಂಜೆಯಿಂದಲೇ ವಾಹನ ಸಂಚಾರದಲ್ಲಿ ತೊಂದರೆ ಉಂಟಾಗಿತ್ತು.
ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ವಾಹನ ಸವಾರರು ಕಿರಿಕಿರಿ ಅನುಭವಿಸಿದರು. ರಾಮನಗರದ ಕನಕಪುರ ವೃತ್ತದ ಬಳಿ ಪಾದಯಾತ್ರೆಗೆ ಚಾಲನೆ ಸಿಕ್ಕಿತು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಿ. ಮೀ. ಗಟ್ಟಲೆ ನೂರಾರು ವಾಹನಗಳು ಸಾಲುಗಟ್ಟಿ ನಿಂತವು.
ಪಾದಯಾತ್ರೆ ಮಾರ್ಗದುದ್ದಕ್ಕೂ ಸಂಚಾರ ದಟ್ಟಣೆ ಸಮಸ್ಯೆ ಎದುರಾಯಿತು. ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಮೇಕೆದಾಟು ಪಾದಯಾತ್ರೆ 2.0 ಮೊದಲ ದಿನ ಸುಮಾರು 15 ಕಿ. ಮೀ. ಸಾಗಿ ಬಿಡದಿ ತಲುಪಿದೆ.

ಮೂರು ದಿನ ಹೆದ್ದಾರಿಯಲ್ಲಿ ಪಾದಯಾತ್ರೆ
ಮೇಕೆದಾಟು ಪಾದಯಾತ್ರೆಯು ಭಾನುವಾರದಿಂದ ಮೂರು ದಿನಗಳ ಕಾಲ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಲಿದೆ. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯು ಬೆಂಗಳೂರು ನಗರ ತಲುಪುವ ತನಕ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚರಿಸಲಿರುವ ಎಲ್ಲಾ ವಾಹನಗಳ ಸವಾರರು ರಾಷ್ಟ್ರೀಯ ಹೆದ್ದಾರಿ ಬದಲಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ವಾಹನಗಳು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಿಟ್ಟು
ಮೈಸೂರು-ಬನ್ನೂರು-ಕಿರುಗಾವಲು-ಮಳವಳ್ಳಿ-ಹಲಗೂರು-ಸಾತನೂರು-ಕನಕಪುರ-ಹಾರೋಹಳ್ಳಿ-ಕಗ್ಗಲೀಪುರ-ಬನಶಂಕರಿ-ಸಾರಕ್ಕಿ ಮಾರ್ಗವಾಗಿ ಸಂಚರಿಸಬೇಕು.
ಮೈಸೂರು-ಶ್ರೀರಂಗಪಟ್ಟಣ-ಪಾಂಡವಪುರ-ನಾಗಮಂಗಲ-ಬೆಳ್ಳೂರು ಕ್ರಾಸ್-ಕುಣಿಗಲ್ ನೆಲಮಂಗಲ ಮಾರ್ಗವಾಗಿಯೂ ತೆರಳಿದವು.
ಇನ್ನೂ ಮಂಡ್ಯ ದಿಂದ ಹೊರಟ ವಾಹನಗಳು ಮದ್ದೂರಿನಿಂದ ಕುಣಿಗಲ್ ಮಾರ್ಗವಾಗಿ ಬೆಂಗಳೂರು ತಲುಪಬೇಕಿದೆ. ಮೈಸೂರು, ಮಡಿಕೇರಿ ಜಿಲ್ಲೆಯವರು, ಹಾಸನ ಹೆದ್ದಾರಿ ಬಳಸಬೇಕಿದೆ. ಇಲ್ಲವೇ ಮದ್ದೂರಿನಿಂದ ಕನಕಪುರ ಮಾರ್ಗವಾಗಿ ವಾಹನಗಳು ಬೆಂಗಳೂರು ತಲುಪುತ್ತಿದ್ದವು.
ಚನ್ನಪಟ್ಟಣ ದಿಂದ ಬೆಂಗಳೂರಿಗೆ ಹೊರಟ ವಾಹನಗಳು ಕೆಂಗಲ್ ಬಳಿ ತಿರುವು ತೆಗೆದುಕೊಂಡು ಮಂಚನಬೆಲೆ ಜಲಾಶಯ ಮಾರ್ಗವಾಗಿ ಚಂದ್ರಪ್ಪ ಸರ್ಕಲ್ ಮೂಲಕ ಬೆಂಗಳೂರು ತಲುಪಿದವು.

ಹೆದ್ದಾರಿ ತೆರವು ಮಾಡದ ಪೋಲಿಸರು
ಪ್ರತಿ ಭಾನುವಾರಗಳಂದು ಸಂಜೆ ಹೆಚ್ಚಿನ ವಾಹನಗಳು ಬೆಂಗಳೂರಿನತ್ತ ಪ್ರಯಾಣ ಮಾಡುತ್ತವೆ. ಪಾದಯಾತ್ರೆ ಇದ್ದ ಹಿನ್ನಲೆಯಲ್ಲಿ ಬಹುತೇಕ ವಾಹನಗಳು ಸಂಜೆ ತಡವಾಗಿ ಬೆಂಗಳೂರಿನ ಕಡೆಗೆ ಹೊರಟ್ಟಿದ್ದವು, ರಾತ್ರಿ 8 ಗಂಟೆಯಾದರೂ ಹೆದ್ದಾರಿಗೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪೋಲಿಸರು ತೆರವು ಮಾಡದ ಕಾರಣ ವಾಹನ ಸವಾರರು ಹಾಗೂ ಪೋಲಿಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಪಾದಯಾತ್ರೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಮನಗರದ ಐಜೂರು ವೃತ್ತದಲ್ಲಿ, ಪೋಲಿಸರು ಹೆದ್ದಾರಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ಬಂದ್ ಮಾಡಿದ್ದರು. ರಾತ್ರಿ 8 ಗಂಟೆಯಾದರೂ ರಸ್ತೆಗೆ ಹಾಕಿದ್ದ ಬ್ಯಾರಿಕೇಡ್ ತೆಗೆಯಲು ಪೋಲಿಸರು ನಿರಾಕರಿಸಿದರು. ಇದರಿಂದ ಬೆಂಗಳೂರಿಗೆ ತೆರಳುತ್ತಿದ್ದ ವಾಹನ ಸವಾರರು ಪೋಲಿಸರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬಿಡದಿ ತಲುಪಿರುವ ಪಾದಯಾತ್ರೆ
ಈಗಾಗಲೇ ಮೇಕೆದಾಟು ಪಾದಯಾತ್ರೆ ಬಿಡದಿ ತಲುಪಿದೆ. ಆದರೂ ಪೋಲಿಸರು ಹೆದ್ದಾರಿ ಬಂದ್ ಮಾಡಿ ಕಿರಿಕಿರಿ ಮಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಮಂಚನಬೆಲೆ ಜಲಾಶಯ ಮಾರ್ಗವಾಗಿ ಸುತ್ತಿ ಬಳಸಿ ಬೆಂಗಳೂರಿಗೆ ತೆರಳಲು ಸೂಚಿಸಿದ್ದಾರೆ. ಹೆದ್ದಾರಿ ಸಂಪೂರ್ಣವಾಗಿ ಖಾಲಿಯಾಗಿದ್ದರು ಪೋಲಿಸರು ವಾಹನ ಸಂಚಾರಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ಸವಾರರು ಆರೋಪಿಸಿದರು.
ಮೇಕೆದಾಟು ಯೋಜನೆಗೆ ಹೋರಾಟ ಮಾಡುವುದಿದ್ದರೆ ದೆಹಲಿಯ ಸಂಸತ್ ಭವನದ ಮುಂದೆ ಅಥವಾ ಬೆಂಗಳೂರಿನ ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವ ಮೂಲಕ ಹೋರಾಟ ಮಾಡಲಿ, ಜನರಿಗಾಗಿ ಹೋರಾಟ ಎಂದು ಹೇಳಿಕೊಂಡು ಜನರಿಗೆ ತೊಂದರೆ ಕೊಡುವುದು ಎಷ್ಟರಮಟ್ಟಿಗೆ ಸರಿ? ಎಂದು ಜನರು ಪ್ರಶ್ನಿಸಿದರು.












Click it and Unblock the Notifications