Mekedatu Padayatra 2.0 : ಮೇಕೆದಾಟು; ಬಿಡದಿ ತಲುಪಿದ ಮೊದಲ ದಿನದ ಕಾಂಗ್ರೆಸ್ ಪಾದಯಾತ್ರೆ
ರಾಮನಗರ, ಫೆಬ್ರವರಿ 28; ಮೊದಲ ಹಂತದ ಮೇಕೆದಾಟು ಪಾದಯಾತ್ರೆ ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ರಾಮನಗರದಲ್ಲಿ ಸ್ಥಗಿತಗೊಂಡಿತ್ತು. ಎರಡನೇ ಹಂತದ ಪಾದಯಾತ್ರೆ ಭಾನುವಾರ ರಾಮನಗರದ ಕನಕಪುರ ಸರ್ಕಲ್‌ನಿಂದ ಪ್ರಾರಂಭವಾಯಿತು. ಸುಮಾರು 15 ಕಿ. ಮೀ. ಸಾಗಿ ಬಿಡದಿ ತಲುಪಿತು.
ಮೊದಲ ದಿನದ ಪಾದಯಾತ್ರೆಯಲ್ಲಿ ಮಂಡ್ಯ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು. ಪಾದಯಾತ್ರೆ ಸಾಗುವ ವೇಳೆ ಹೆಜ್ಜೆ ಹೆಜ್ಜೆಗೂ ಕುಡಿಯುವ ನೀರು, ಕಬ್ಬಿನ ಹಾಲು, ಕಲ್ಲಂಗಡಿ, ಮಜ್ಜಿಗೆ, ಎಳನೀರು ಹಾಗೂ ಕಬಾಬ್ ವಿತರಣೆ ಮಾಡುವ ಸ್ಟಾಲ್‌ಗಳನ್ನು ರಸ್ತೆಯ ಪಕ್ಕದಲ್ಲಿ ಹಾಕಲಾಗಿತ್ತು.
ಮಧ್ಯಾಹ್ನ ಮಾಯಗನಹಳ್ಳಿ ಬಳಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಮಾಡಿದ ಕಾಂಗ್ರೆಸ್ ನಾಯಕರು ಕೆಲ ಕಾಲ ವಿಶ್ರಾಂತಿ ಪಡೆದು ನಂತರ ಬಿಡದಿಯತ್ತ ಹೆಜ್ಜೆ ಹಾಕಿದ್ದರು. ಪಾದಯಾತ್ರೆ ರಾತ್ರಿ ಸುಮಾರು 9 ಗಂಟೆಗೆ ಬಿಡದಿ ತಲುಪಿತು. ಬಿಡದಿಯಲ್ಲಿ ಪಾದಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮೊದಲ ದಿನದ ಮೇಕೆದಾಟು ಪಾದಯಾತ್ರೆಯ ಕೊನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ಉರಿ ಬಿಸಿಲು, ಟಾರು ರಸ್ತೆಯಲ್ಲಿ ಇಂದು ನಾವೆಲ್ಲರೂ ಹೆಜ್ಜೆ ಹಾಕಿದ್ದೇವೆ. ಅನೇಕ ಕಡೆಗಳಲ್ಲಿ ಮರಗಳಿಲ್ಲದೆ ಬಿಸಿಲಲ್ಲೇ ಗುಂಡಿ, ಬಂಡೆ ಎಲ್ಲವನ್ನು ನೋಡಿಕೊಂಡು ಬಂದಿದ್ದೇವೆ" ಎಂದರು.

ನಮ್ಮಣ್ಣ ಕುಮಾರಣ್ಣ ಹೇಳಿದ್ದಾರೆ
"ನಮ್ಮ ಸ್ನೇಹಿತರೊಬ್ಬರು ನನ್ನನ್ನು ಮಣ್ಣಿನ ಮಗ ಎಂದು ಹೇಳಿದರು. ಆದರೆ ನಾನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ ಎಂದು ನಮ್ಮಣ್ಣ ಕುಮಾರಣ್ಣಾ ಹೇಳಿದ್ದಾರೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲು ಬಂಡೆ ಚಚ್ಚಿದಾಗಲೇ ಚಪ್ಪಡಿಯಾಗೋದು, ಕೆತ್ತಿದಾಗ ಶಿಲೆ ಆಗೋದು. ನಂತರ ಅದು ಮರಳಾಗಿ ಮಣ್ಣಾಗುತ್ತದೆ. ಅಂದರೆ ಮಣ್ಣಿನ ಮೂಲ ಸ್ವರೂಪ ಕಲ್ಲು ಅಂತಾನೆ ಅಲ್ಲವೇ?" ಎಂದು ಡಿ. ಕೆ. ಶಿವಕುಮಾರ್ ಎಚ್. ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ನಾಲಿಗೆ ರಕ್ಷಣೆ ಮಾಡಿಕೊಳ್ಳಿ ಅಣ್ಣ
"ಈ ಕಲ್ಲನ್ನು ನೀವು ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳಿ. ನಮ್ಮ ಅಣ್ಣನೂ ಅವರಿಗೆ ಬೇಕಾದ ಹಾಗೆ ಬಳಸಿಕೊಳ್ಳಲಿ. ನಮಗೆ ಯಾರಾದರೂ ಹೊಡೆಯಲು ಬಂದರೆ ನಾವು ಅದನ್ನು ತಪ್ಪಿಸಬಹುದು. ಆದರೆ ನಮ್ಮ ಬಗ್ಗೆ ಅನಗತ್ಯವಾಗಿ ಮಾತನಾಡುವವರನ್ನು ತಪ್ಪಿಸಲು ಸಾಧ್ಯವೇ?. ಅಣ್ಣಾ ನಿಮಗೆ ನಾಲಿಗೆ ಇದೆ ಅಂತಾ ಬಾಯಿಗೆ ಬಂದಹಾಗೆ ಮಾತನಾಡುತ್ತೀರಿ. ಜನ ಬಯ್ಯುತ್ತಿದ್ದಾರೆ. ನೀವು ನಿಮ್ಮ ನಾಲಿಗೆ ರಕ್ಷಣೆ ಮಾಡಿಕೊಳ್ಳಣ್ಣ" ಎಂದು ಡಿ. ಕೆ. ಶಿವಕುಮಾರ್ ಟೀಕಿಸಿದರು.

ಜಲಧಾರೆ ಹೋರಾಟ ಮಾಡುತ್ತೇವೆ
"ಕುಮಾರಣ್ಣಾ ಜಲಧಾರೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಸಂತೋಷ ಅವರು ಮಾಡಲಿ, ನಾನು ಅಭಿನಂದನೆ ಸಲ್ಲಿಸುತ್ತೇನೆ. ಚಾಮರಾಜನಗರದಿಂದ ಬೀದರ್ ತನಕ ಹೋರಾಟ ಮಾಡಲಿ ನಮ್ಮ ಅಭ್ಯಂತರವಿಲ್ಲ. ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆಯೇ ಹೊರತು ಯಾವುದೇ ತಕರಾರಿಲ್ಲ. ನಾವು ಜನರಿಗಾಗಿ ಸಾಕಷ್ಟು ಕಾರ್ಯಕ್ರಮ ಮಾಡಿದ್ದೇವೆ. ಇಂದಿನ ಮೇಕೆದಾಟು ಹೋರಾಟಕ್ಕೆ ಜನತಾದಳದವರೂ ಬಂದಿದ್ದಾರೆ. ಇಲ್ಲಿರುವ ಜನರಲ್ಲಿ ಕೇವಲ ಕಾಂಗ್ರೆಸಿಗರು ಮಾತ್ರ ಇಲ್ಲ, ಎಲ್ಲ ಪಕ್ಷದವರೂ ಇದ್ದಾರೆ. ಇದು ಪಕ್ಷಾತೀತ ಹೋರಾಟ. ಎಲ್ಲ ವರ್ಗದ ಜನರ ಹೋರಾಟ. ಕಾಂಗ್ರೆಸ್ ಕೇವಲ ಮುಂದಾಳತ್ವ ವಹಿಸಿಕೊಂಡಿದೆ" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ನಾವಿಂದು ಹೋರಾಟ ಮಾಡುತ್ತಿದ್ದೇವೆ
"ನಮ್ಮ ನೀರು, ನಮ್ಮ ಹಕ್ಕು. ಹೀಗಾಗಿ ನೀರಿಗಾಗಿ ನಡೆಯುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೆ ಅನೇಕರು, ನೀರು, ಮಜ್ಜಿಗೆ, ಎಳನೀರು ಕೊಟ್ಟು ಉಪಚರಿಸಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮನಗಳು. ಹೆಜ್ಜೆ ಹಾಕುತ್ತೇವೆ, ನಾವು ಹೆಜ್ಜೆ ಹಾಕುತ್ತೇವೆ ಎಂದು ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ನಮ್ಮ ಜನ ಐತಿಹಾಸಿಕ ಹೋರಾಟದಲ್ಲಿ ಹೆಜ್ಜೆ ಹಾಕಿದ್ದಾರೆ. ಎಸ್. ಎಂ. ಕೃಷ್ಣ ಸಿಎಂ ಆಗಿದ್ದಾಗ ಕೃಷ್ಣಾ ನದಿಗಾಗಿ ಹೆಜ್ಜೆ ಹಾಕಿದ್ದರು. ಆಡ್ವಾಣಿ ಅವರು ರಥಯಾತ್ರೆ ಮಾಡಿದ್ದರು. ಚಂದ್ರಶೇಖರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಡೆದರು. ನಮ್ಮ ಆಂಧ್ರ ಪ್ರದೇಶ ಮಾಜಿ ಸಿಎಂ ರಾಜಶೇಖರ್ ರೆಡ್ಡಿ ಹೆಜ್ಜೆ ಹಾಕಿದ್ದರು. ಈಗಿನ ಆಂಧ್ರ ಸಿಎಂ ಜಗನ್ ಕೂಡ ಪಾದಯಾತ್ರೆ ಮಾಡಿದ್ದಾರೆ. ಇವರೆಲ್ಲರೂ ಛಲದಿಂದ, ಸಂಕಲ್ಪದಿಂದ ಹೋರಾಟ ಮಾಡಿದ್ದಾರೆ. ನಮಗೆ ಈ ಹೋರಾಟದ ಸ್ಪೂರ್ತಿ ತುಂಬಿದವರು ಮಹಾತ್ಮಾ ಗಾಂಧೀಜಿ. ಅವರ ಹಿಂಬಾಲಕರು ನಾವು. ಅವರು ಹಾಗೂ ಕಾಂಗ್ರೆಸ್ ಪಕ್ಷ ಈ ತ್ರಿವರ್ಣ ಧ್ವಜದ ರೂವಾರಿಗಳು" ಎಂದು ಡಿ. ಕೆ. ಶಿವಕುಮಾರ್ ಹೇಳಿದರು.

ಎಚ್. ಸಿ. ಬಾಲಕೃಷ್ಣ ಗೆಲ್ಲಿಸಿ
ಮೇಕೆದಾಟು ಪಾದಯಾತ್ರೆ ಪಕ್ಷಾತೀತ ಎನ್ನುತ್ತಲೇ ಡಿ. ಕೆ. ಶಿವಕುಮಾರ್, ಮುಂದಿನ ಚುನಾವಣೆಯಲ್ಲಿ ಮಾಗಡಿ ಅಭ್ಯರ್ಥಿ ಎಚ್. ಸಿ. ಬಾಲಕೃಷ್ಣ ಅವರನ್ನು ಗೆಲ್ಲಿಸುವಂತೆ ತಮ್ಮ ಪಕ್ಷದ ಮುಖಂಡನ ಪರ ಚುನಾವಣಾ ಭಾಷಣ ಮಾಡಿದರು. "ಬಾಲಕೃಷ್ಣ ಅವರು ಹುಟ್ಟುಹಬ್ಬದ ಪ್ರಯುಕ್ತ ತಿರುಪತಿಯಲ್ಲಿ ಪೂಜೆ ಇಟ್ಟುಕೊಂಡಿದ್ದರು. ಆದರೆ ಪಾದಯಾತ್ರೆ ದಿನಾಂಕ ನಿಗದಿಯಾದ ಬಳಿಕ ನನ್ನ ದೇವರುಗಳು ಇಲ್ಲೇ ಮಾಗಡಿಯಲ್ಲಿ ಇದ್ದಾರೆ. ಜನರೇ ನನ್ನ ದೇವರು. ಅವರಿಗೆ ಪೂಜೆ ಮಾಡುತ್ತೇನೆ ಎಂದು ನಮ್ಮ ಜತೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರನ್ನು ವಿಧಾನಸೌಧಕ್ಕೆ ಆಯ್ಕೆಮಾಡಿ ಕಳುಹಿಸಿ ಅವರಿಗೆ ಜನ್ಮದಿನದ ಉಡುಗೊರೆ ನೀಡಬೇಕು" ಎಂದು ಜನರಲ್ಲಿ ಡಿ. ಕೆ. ಶಿವಕುಮಾರ್ ಮನವಿ ಮಾಡಿದರು.












Click it and Unblock the Notifications