HD Kumaraswamy: ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಸರ್ಕಾರದಿಂದ ಬಿಗ್ ಶಾಕ್
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಸರ್ಕಾರವು ಶಾಕ್ ಕೊಟ್ಟಿದೆ. ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಗಾನಹಳ್ಳಿ ಬಳಿ ಕುಮಾರಸ್ವಾಮಿ ಅವರ ತೋಟದ ಮನೆ ಇದೆ. ಆದರೆ ಈ ಭಾಗದಲ್ಲಿರುವ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕುಮಾರಸ್ವಾಮಿ ಅವರ ವಿರುದ್ಧ ಕೇಳಿಬಂದಿತ್ತು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ ರಾಜ್ಯ ಸರ್ಕಾರಕ್ಕೆ ತರಾಟೆ ಕೂಡ ಆಗಿತ್ತು. ಇದರ ಬೆನ್ನಲ್ಲೇ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ತೆರವಿಗೆ ಅಧಿಕಾರಿಗಳು ಫೀಲ್ಡಿಗಿಳಿದಿದ್ದಾರೆ.
ಹೌದು ಇಂದು ಕಂದಾಯ ಇಲಾಖೆ ಅಧಿಕಾರಿಗಳು ಜೆಸಿಬಿ ಸಮೇತ ಕೇತಗಾನಹಳ್ಳಿ ಬಳಿ ಆಗಿದೆ ಎನ್ನಲಾದ ಜಮೀನಿನ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿದ್ದಾರೆ. ಕುಮಾರಸ್ವಾಮಿ ಕುಟುಂಬಸ್ಥರ ವಿರುದ್ಧ ಈ ಒತ್ತುವರಿ ಆರೋಪ ಕೇಳಿಬಂದಿತ್ತು. ಬಳಿಕ ಭೂಒತ್ತುವರಿ ಆರೋಪ ಸಂಬಂಧದ ತನಿಖೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ತಂಡವನ್ನು ಕೂಡ ರಚಿಸಿದ್ದರು.

ರಾಮನಗರದ ಕೇತಗಾನಹಳ್ಳಿಯ ಸರ್ವೆ ನಂ.7, 8, 9, 10, 16, 17 ಸೇರಿದಂತೆ ಒಟ್ಟು 14 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿದ್ದು,ಈಗ ಸರ್ಕಾರಕ್ಕೆ ಸರ್ವೆಯ ವರದಿ ಸಲ್ಲಿಸಿದೆ. ಮುಂದುವರಿದಂತೆ ಈ ಭಾಗದಲ್ಲಿ ಒತ್ತುವರಿ ತೆರವು ಮಾಡಲು ಕಂದಾಯ ಇಲಾಖೆ ಫೀಲ್ಡಿಗಿಳಿದಿದೆ. ಈಗಾಗಲೇ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ಜೆಸಿಬಿಗಳು ಎಂಟ್ರಿ ಕೊಟ್ಟಿದ್ದು, ಒತ್ತುವರಿ ತೆರವು ಮಾಡುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರ ತೋಟದ ಮನೆ ಸುತ್ತ ಒತ್ತುವರಿ ತೆರವಿಗೆ ಸಿದ್ಧತೆ ನಡೆಯುತ್ತಿದೆ.
ಕುಮಾರಸ್ವಾಮಿ ಪತ್ರ: ಈ ಬೆಳವಣಿಗೆ ನಡುವೆಯೇ ಮತ್ತೊಂದೆಡೆ ಸಚಿವ ಕುಮಾರಸ್ವಾಮಿ ಅವರು ಭೂ ದಾಖಲೆಗಳ ಇಲಾಖೆಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರದಲ್ಲಿ, ಒಂದು ವೇಳೆ ಕಾನೂನುಬಾಹಿರವಾಗಿ ಹೆಚ್ಚುವರಿ ಜಮೀನಿದ್ದರೆ, ಅದನ್ನು ನಿಮ್ಮ ವಶಕ್ಕೆ ಪಡೆದುಕೊಳ್ಳಿ. ಜೊತೆಗೆ ನನಗೆ ನ್ಯಾಯವಾಗಿ ಸೇರಬೇಕಿರುವ ಉಳಿದ ಜಮೀನನ್ನು ಗುರುತಿಸಿ ಹುಡುಕಿಕೊಡಿ ಎಂದು ಪತ್ರ ಬರೆದಿದ್ದಾರೆ.
ಭೂ ದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕರಿಗೆ ಅವರು ಪತ್ರ ಬರೆದಿದ್ದು, ಬಿಡದಿಯ ಕೇತಗಾನಹಳ್ಳಿ ಸರ್ವೆ ನಂಬರ್ 7ರಲ್ಲಿ 5 ಎಕರೆ 20 ಗುಂಟೆ ಜಮೀನನ್ನು ನಾನು ಖರೀದಿಸಿದ್ದೇನೆ. ಈ ಪೈಕಿ 1.25 ಎಕರೆ ಜಮೀನಿನಲ್ಲಿ ಮಾತ್ರ ನಾವು ಇದ್ದೇವೆ. ಹಾಗಾದರೆ, ಉಳಿದ ಜಮೀನನ್ನು ನೀವೇ ಗುರುತಿಸಿ, ನಮಗೆ ಹುಡುಕಿಕೊಡುವಂತೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಕೇತಗಾನಹಳ್ಳಿ ಗ್ರಾಮದಲ್ಲಿ ಭೂ ಒತ್ತುವರಿ ಆಗಿದ್ದರೆ, ಸರ್ವೇ ನಡೆಸಿ ವರದಿ ನೀಡಲು ಹೈಕೋರ್ಟ್ ನಿರ್ದೇಶನ ನೀಡಿರುವುದು ಸರಿ. ಈ ಆದೇಶದಂತೆ ಸರ್ವೇ ಕಾರ್ಯ ನಡೆದಿದೆ. ಸರ್ವೇ ನಂಬರ್ 7-8ರಲ್ಲಿ ಮಾತ್ರ ನಾನು ಪಹಣಿ ದಾಖಲೆ ಹೊಂದಿದ್ದೇನೆ. ಉಳಿದ ಜಮೀನನ್ನು ತಾವುಗಳು ಹುಡುಕಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ. ಅಲ್ಲದೆ ಈ ಜಮೀನನ್ನು ಮೀರಿ ಹೆಚ್ಚುವರಿ ಜಮೀನು ಕಾನೂನುಬಾಹಿರವಾಗಿ ನನ್ನ ಅಧೀನದಲ್ಲಿದ್ದರೆ ಅದನ್ನು ನೀವು ಕಾನೂನಾತ್ಮಕವಾಗಿ ವಶಕ್ಕೆ ಪಡೆಯಬಹುದು ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications