ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮತ್ತೊಂದು ಭೀಕರ ಅಪಘಾತ: ಕಂಡಕ್ಟರ್ ಸಾವು
ರಾಮನಗರ, ಜೂನ್ 28: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಮುಂದುವರಿದಿದೆ. ದಶಪಥ ಹೆದ್ದಾರಿಯಲ್ಲಿ ಬೊಲೆರೋ ಮತ್ತು ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬಸ್ ನಿರ್ವಾಹಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬೆಂಗಳೂರು ಕೇಂದ್ರ ವಿಭಾಗದ ಘಟಕ-5ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್.ಜಿ ಮೃತ ಬಸ್ ನಿರ್ವಾಹಕ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ರಾಮನಗರ ತಾಲೂಕಿನ ವಿಜಯಪುರ ಗ್ರಾಮದ ಬಳಿ ಫ್ಲೈವುಡ್ ತುಂಬಿದ್ದ ಬೊಲೆರೋ ವಾಹನಕ್ಕೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದ ಭೀಕರತೆಗೆ ಬಸ್ ನಿರ್ವಾಹಕ ಸ್ಥಳದಲ್ಲೇ ಮೃತಪಪಟ್ಟಿದ್ದಾರೆ. ಬಸ್‌ನ ಚಾಲಕನಿಗೆ ಗಂಭೀರ ಗಾಯವಾಗಿದೆ. ಇನ್ನು ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ರಾಮನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಫ್ಲೈವುಡ್ ತುಂಬಿದ್ದ ಬೊಲೆರೋ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತವಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ರಾಮನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಮರಣದ ಹೆದ್ದಾರಿ ಎಂಬ ಕುಖ್ಯಾತಿ ಪಡೆಯುತ್ತಿದೆ. ಈ ಹಿನ್ನಲೆಯಲ್ಲಿ ಅಪಘಾತ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೂಡ ಕಾರ್ಯನಿರ್ವಹಿಸುತ್ತಿದೆ.ಇತ್ತೀಚಿಗೆ ಸಂಚಾರಿ ಮತ್ತು ರಸ್ತೆ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪರಿಶೀಲನೆ ನಡೆಸಿ ಅಪಘಾತ ತಡೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.












Click it and Unblock the Notifications