ಏಪ್ರಿಲ್ 10ರ ನಂತರ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ: ಕಾಂಗ್ರೆಸ್‌ನಿಂದ 15 ಸಮರ್ಥ ಮುಖಂಡರು ನಮ್ಮ ಪಕ್ಷಕ್ಕೆ ಸೇರುತ್ತಾರೆ: HDK
ರಾಮನಗರ, ಏಪ್ರಿಲ್, 09: ಮೊದಲಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಜೆಡಿಎಸ್ ಪಕ್ಷವು ಎರಡು ರಾಷ್ಟ್ರೀಯ ಪಕ್ಷಗಳ ನಾಯಕರ ಹುಬ್ಬೇರುವಂತೆ ಮಾಡಿತ್ತು. ಇದೀಗ ಜೆಡಿಎಸ್ ಪಕ್ಷದ ಎರಡನೇ ಪಟ್ಟಿಯತ್ತ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲದೇ ಹಾಸನ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಜೆಡಿಎಸ್ ವರಿಷ್ಠರು ಯಾವ ರೀತಿ ತೆರೆ ಎಳೆಯುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ತೀವ್ರ ಕುತೂಹಲ ಕೆರಳಿಸಿರುವ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರದ ನಂತರ ಬಿಡುಗಡೆ ಮಾಡುತ್ತೇವೆ ಎಂದು ಘೋಷಣೆ ಮಾಡಿದರು. ಈಗ ಸಾಕಷ್ಟು ಒತ್ತಡಗಳು ಇದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಮತ್ತೆ ಅಲಾನ್ಮೆಂಟ್ ಆಗಬೇಕಿದೆ. ಹಾಗಾಗಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಲ್ಲಿ ಸ್ವಲ್ಪ ವಿಳಂಬವಾಗಿದೆ ಎಂದರು.

ಈಗಾಗಲೇ ಎಲ್ಲರಿಗಿಂತ ಮೊದಲು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದೇವೆ. ರಾಷ್ಟ್ರೀಯ ಪಕ್ಷ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯೇ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ವಿಳಂಬವಾಗಿರುವುದಕ್ಕೆ ಪ್ರಪಂಚ ಏನು ಮುಳುಗಿ ಹೋಗುವುದಿಲ್ಲ. ಕೆಲವು ಕಡೆ ಮತದಾರರು ನನಗೆ ಮತ ಹಾಕಲು ತಯಾರಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆ ಇದೆ. ಆ ಕೊರತೆ ನೀಗಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದರು.
ಕಾಂಗ್ರೆಸ್‌ನ 15ಕ್ಕೂ ಹೆಚ್ಚು ಜನ JDS ಸೇರುತ್ತಾರೆ
ಇನ್ನು ಕಾಂಗ್ರೆಸ್ ಪಕ್ಷದಿಂದ ಸುಮಾರು 15ಕ್ಕೂ ಹೆಚ್ಚು ಸಮರ್ಥ ಅಭ್ಯರ್ಥಿಗಳು ಸದ್ಯದಲ್ಲೇ ಜೆಡಿಎಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಹಲವಾರು ಮುಖಂಡರನ್ನು ಜೆಡಿಎಸ್‌ಗೆ ಸೇರ್ಪಡೆ ಪ್ರಕ್ರಿಯೆ ಪ್ರಾರಂಭವಾಗಿದೆ. ಜೆಡಿಎಸ್ ಪಕ್ಷ 123 ಸ್ಥಾನ ಗೆದ್ದು ರಾಜ್ಯದಲ್ಲಿ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವ ಗುರಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ತಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಾಂತರದ ಸುಳಿವು ನೀಡಿದ ಎಚ್.ಡಿ.ಕೆ
ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷವನ್ನು ಸರ್ವನಾಶ ಮಾಡಲು ನಮ್ಮ ಶಾಸಕರು ಹಾಗೂ ಅಭ್ಯರ್ಥಿಗಳನ್ನು ರಾಜೀನಾಮೆ ಕೊಡಿಸಿ ತಮ್ಮ ಪಕ್ಷಕ್ಕೆ ತುಂಬಿಕೊಂಡು ಹೋಗಿದ್ದರು. ಈಗ ಅದು ಯೂಟರ್ನ್ ತೆಗೆದುಕೊಂಡಿದೆ. ಈಗ ಹಲವಾರು ಪ್ರಮುಖರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುವುದು ಪ್ರಾರಂಭ ಆಗಿದೆ. ಮುಂದೆ ದೊಡ್ಡ ಮಟ್ಟದ ಪಕ್ಷಾಂತರ ಆಗುವ ಸುಳಿವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದರು.

ಕಾಂಗ್ರೆಸ್ ಪಕ್ಷಕ್ಕೆ ತಿರುಗು ಬಾಣ
ನಮ್ಮ ಪಕ್ಷದ ಮುಖಂಡರನ್ನು ಹೈಜಾಕ್ ಮಾಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಅದೇ ಈಗ ತಿರುಗು ಬಾಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಓವರ್ ಲೋಡ್ ಆಗಿ ನಮಗೆ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಟಿಕೆಟ್ ನೀಡುವ ಭರವಸೆ ನೀಡಿ ನಮ್ಮ ಪಕ್ಷದಿಂದ ಕರೆದುಕೊಂಡು ಹೋದವರಿಗೆ ಕಾಂಗ್ರೆಸ್ ನಾಯಕರು ಕಣ್ಣೀರು ಹಾಕಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತು ಹಲವಾರು ಜನ ನಮ್ಮ ಪಕ್ಷಕ್ಕೆ ಸೇರ್ಪಡೆ ಆಗುವ ಪ್ರಕ್ರಿಯೆ ಆರಂಭ ಆಗಿದೆ ಎಂದು ತಳಿಸಿದರು.
ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುವುದಾದರೆ ನಾನು ರೇಸ್‌ನಿಂದ ಹಿಂದೆ ಸರಿಯುತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಅದು ಅವರ ಪಕ್ಷದ ಅಂತರಿಕ ವಿಚಾರವಾಗಿದೆ. ಅದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications