Karnataka Budget 2023: ರಾಮನಗರದಲ್ಲಿ ರಾಮಮಂದಿರ ನಿರ್ಮಾಣ, ಜಿಲ್ಲೆಯ ಜನರ ಅಭಿಪ್ರಾಯವೇನು..?
ಶುಕ್ರವಾರ (ಫೆಬ್ರವರಿ 17) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದಾರೆ. ರಾಮನಗರ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ.
ರಾಮನಗರ, ಫೆಬ್ರವರಿ 18: ಶುಕ್ರವಾರ (ಫೆಬ್ರವರಿ 17) ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸ್ತುತ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ್ದಾರೆ.
2023ರ ಸಾರ್ವತ್ರಿಕ ಚುನಾವಣಾ ಪೂರ್ವ ಬಜೆಟ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜೆಡಿಎಸ್ ಪ್ರಾಬಲ್ಯದ ಜಿಲ್ಲೆಯಲ್ಲಿ ಖಾತೆ ತೆರೆಯಲು ಈಗಾಗಲೇ ರಂಗ ತಾಲೀಮು ಆರಂಬಿಸಿರುವ ಬಿಜೆಪಿ ನಾಯಕರು, ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿಯಾದರು ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈ ಬಾರಿ ಬಜೆಟ್ ತೃಪ್ತಿ ತಂದಿಲ್ಲ ಎನ್ನಬಹುದಾಗಿದೆ. ಕೇವಲ ಹಿಂದುತ್ವದ ಅದಾರದಲ್ಲೇ ಶ್ರೀರಾಮನ ಜಪದಲ್ಲೇ ಮತದಾರನನ್ನು ಸೆಳೆಯಲು ಮುಂದಾಗಿದೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ.
ಹಿಂದುತ್ವದ ಅಜೆಂಡಾಕ್ಕೆ ಅಂಟಿಕೊಂಡಿರುವ ಬಿಜೆಪಿ ನೇತೃತ್ವದ ಸರ್ಕಾರ ರಾಮಮಂದಿರ ನಿರ್ಮಾಣ ಯೋಜನೆ ಬಿಟ್ಟರೆ ಹೊಸತಾಗಿ ಏನನ್ನೂ ಘೋಷಿಸದ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಈವರೆಗೆ ಕೇವಲ ಬಾಯಿ ಮಾತಿಗೆ ಹೇಳಲಾಗುತ್ತಿದ್ದ ದಕ್ಷಿಣಾಯೋಧ್ಯೆ ಶ್ರೀರಾಮಮಂದಿರ ನಿರ್ಮಾಣ ವಿಚಾರ ಬಜೆಟ್‌ನಲ್ಲಿ ಪ್ರಕಟಿಸುವ ಮೂಲಕ ಅಧಿಕೃತವಾಗಿದೆ.

ಜಿಲ್ಲೆಯ ಮಟ್ಟಿಗೆ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ರಾಜ್ಯ ಬಜೆಟ್ ಎನ್ನುವ ಟೀಕೆಗಳು ಕೇಳಿ ಬರುತ್ತಿದ್ದು, ಜಿಲ್ಲೆಯ ಸಮಗ್ರ ನೀರಾವರಿಗೆ ಪೂರಕವಾದ ಮೇಕೇದಾಟು ಯೋಜನೆ ಸರ್ಕಾರದ ಪ್ರಮುಖ ಆದ್ಯತೆಯಾಗಬೇಕಿತ್ತು, ಮೇಕೆದಾಟು ಯೋಜನೆ ಅನುಷ್ಠಾನ ಮಾಡಿ ತೋರಿಸುತ್ತೇವೆ ಎನ್ನುತ್ತಿದ್ದ ರಾಜ್ಯ ಸರ್ಕಾರ, ಬಜೆಟ್‌ನಲ್ಲಿ ಅದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಧಾವೆಯನ್ನು ಇತ್ಯರ್ಥಗೊಳಿಸಿ ಯೋಜನೆ ಜಾರಿಗೆ ಬದ್ಧವಿರುವುದಾಗಿ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಘೊಷಣೆ ಮಾಡುವ ಮೂಲಕ ಮೂಗಿಗೆ ತುಪ್ಪ ಸವರಿದ್ದಾರೆ ಎನ್ನುವುದು ಜಿಲ್ಲೆಯ ಜನತೆಯ ಅಭಿಪ್ರಾಯವಾಗಿದೆ.
ಜಿಲ್ಲಾ ಕೇಂದ್ರಕ್ಕೆ ಸುಸಜ್ಜಿತವಾದ ಬಸ್ ನಿಲ್ದಾಣ ಮೇಗಾ ಮಾರುಕಟ್ಟೆ, ಮಾವು ಸಂಸ್ಕರಣಾ ಘಟಕ, ಪ್ರವಾಸಿ ತಾಣಗಳ ಅಭಿವೃದ್ದಿಗೆ ಆಧ್ಯತೆ ಮೆಟ್ರೋಮಾರ್ಗ, ಕರಕುಶಲ ಮತ್ತು ಬೊಂಬೆ ಉದ್ಯಮ ಪುನಶ್ಚೇತನ, ಕಾರ್ಮಿಕರಿಗೆ ನೆರವು, ರೇಷ್ಮೇ ನಗರಿಯಲ್ಲಿ ರೇಷ್ಮೇ ಉತ್ಪನ್ನಗಳ ಕೈಗಾರಿಕಾ ಘಟಕಗಳ ನಿರೀಕ್ಷೆಯಿತ್ತು ಅದರೆ ಸರ್ಕಾರದ ಬಜೆಟ್ ಇತ್ತ ತಿರುಗಿಯು ನೋಡದೆ ಇರುವುದರಿಂದ ಜನತೆಗೆ ನಿರಾಸೆಯಾಗಿದೆ.
ಹಿಂದಿನ ಬಜೆಟ್‌ಗಳಲ್ಲಿ ಘೋಷಣೆ ಮಾಡಲಾಗಿದ್ದ ಯಾವುದೇ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಅನುದಾನ ನೀಡುವ ಕಾರ್ಯವೂ ನಡೆದಿಲ್ಲ. ಕೆಲವು ಸಣ್ಣಪುಟ್ಟ ಯೋಜನೆಗಳನ್ನು ಜಿಲ್ಲೆಗೆ ನೀಡಿರುವುದು ಬಿಟ್ಟರೆ ಉಳಿದಂತೆ ಯಾವುದೇ ಮಹತ್ವದ ಯೋಜನೆ ಗಳನ್ನು ಘೋಷಿಸದೆ ನಿರಾಸೆ ಮೂಡಿಸಿದ್ದಾರೆ.
ರಾಜ್ಯ ಬಜೆಟ್‌ನಲ್ಲಿ ರಾಮನಗರಕ್ಕೆ ನೀಡಿರುವ ಘೋಷಣೆಗಳು
1. ರಾಮಮಂದಿರ ನಿರ್ಮಾಣ ಘೊಷಣೆ
2. ಐಐಟಿಯಂತೆ ಕೆಐಟಿ ಮಾದರಿಯಲ್ಲಿ ರಾಮನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುನ್ನು ಮುಂದಿನ 5 ವರ್ಷಗಳಲ್ಲಿ ಉನ್ನತಿಕರಿಸಲು ಯೋಜನೆ.
3. ರಾಮನಗರದಲ್ಲಿ ಪಿಎಂ-ಆಯೂಷ್‌ಮಾನ್ ಭಾರತ್ ಹೆಲ್ತ್ ಅಡಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಬ್ಲಾಕ್‌ಗಳ ಸ್ಥಾಪನೆ.
4. ಭೂ ಒಡೆತನ ಯೋಜನೆಯಡಿ ಘಟಕ ವೆಚ್ಚದ ಮೊತ್ತವನ್ನು 15 ಲಕ್ಷ ರೂನಿಂದ 20 ಲಕ್ಷ ರೂಗಳಿಗೆ ಏರಿಕೆ ಮಾಡಲಾಗಿದ್ದು, ಇದಕ್ಕೆ ರಾಮನಗರ ಜಿಲ್ಲೆಯೂ ಆಯ್ಕೆ.
5. ರಾಮನಗರದಲ್ಲಿ ಇಂಟಿಗ್ರೇಟೆಡ್ ಟೌನ್‌ಷಿಪ್ ನಿರ್ಮಿಸಲು ಎಕ್ಸ್‌ಪ್ರೆಷನ್ ಆಪ್ ಇಂಟರೆಸ್ಟ್ ಆಹ್ವಾನ.
6. ಮಂಚನೆಬೆಲೆ ಹಿನ್ನೀರಿನಲ್ಲಿ ಜಂಗಲ್ ರೆಸಾರ್ಟ್ ನಿರ್ಮಿಸಲು 10 ಕೋಟಿ ರೂಪಾಯಿ ಮೀಸಲು.
7ಸಾಂಪ್ರದಾಯಿಕ ಕೌಲಶ್ಯಗಳ ಪುನರುಜ್ಜೀವನಗೊಳಿಸುವ ಯೋಜನೆಯಲ್ಲಿ ಚನ್ನಪಟ್ಟಣದ ಬೊಂಬೆ ಉದ್ಯಮ ಆಯ್ಕೆ.
8. ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ದಾವೆಯನ್ನು ಶೀಘ್ರವೇ ಇತ್ಯರ್ಥ ಪಡಿಸಿ, ಕಾಮಗಾರಿ ನಡೆಸಲು ಕ್ರಮದ ಭರವಸೆ.












Click it and Unblock the Notifications