Karnataka Budget 2023: ರೇಷ್ಮೆನಗರಿ ರಾಮನಗರ ಜಿಲ್ಲೆಯ ನಿರೀಕ್ಷೆಗಳೇನು?

ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ರಾಮನಗರ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.

ಚುನಾವಣಾ ಪೂರ್ವ ಬಜೆಟ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜೆಡಿಎಸ್ ಭದ್ರಕೋಟೆಯ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿಯಾದರು ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಬಹುದು ಎನ್ನುವ ಮಾತುಗಳು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

2023ರ ವಿಧಾನಸಭಾ ಚುನಾವಣೆ ಸಮರದಲ್ಲಿ ಜಿಲ್ಲೆಯಲ್ಲಿ ಖಾತೆ ತೆರೆಯಲು ಈಗಾಗಲೇ ತಾಲೀಮು ಆರಂಭಿಸಿರುವ ಬಿಜೆಪಿ ನಾಯಕರು ಸರ್ಕಾರದ ಕಡೆಯ ಬಜೆಟ್‌ನಲ್ಲಿ ಜಿಲ್ಲೆಗೆ ಹಲವು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಮತದಾರ ಮನ ಮುಟ್ಟುವ ತಯಾರಿಯಲ್ಲಿದೆ.

ಬಿಜೆಪಿ, ಇದೇ ತಿಂಗಳು ಜನಸ್ನೇಹಿ ಬಜೆಟ್ ಘೋಷಣೆ ಮಾಡುವ ತಯಾರಿಯಲ್ಲಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇದೊಂದು ಚುನಾವಣಾ ಬಜೆಟ್, ಕೇವಲ ಘೋಷಣೆ ಮಾಡಬಹುದು ಆದರೆ ಅನುಷ್ಠಾನಗೊಳಿಸಲು ಸರ್ಕಾರದಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

Karnataka Budget 2023 : Expectations of Ramanagara District People

ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ 2023-24ನೇ ಸಾಲಿನ ಆಯವ್ಯಯದಲ್ಲಿ ರೇಷ್ಮೆನಗರಿಯ ಜನರು ಜಿಲ್ಲೆಯ ಸಮಗ್ರ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದಾರೆ.

ಜಿಲ್ಲೆಯ ಮಹತ್ವಾಕಾಂಕ್ಷೆಯ ರಾಜೀವ್ ಗಾಂಧಿ ಆರೋಗ್ಯ ವಿವಿ, ಮೇಕೆದಾಟು ಅಣೆಕಟ್ಟು ನಿರ್ಮಾಣ ಸೇರಿದಂತೆ ಹಲವು ನೀರಾವರಿ ಯೋಜನೆಗಳು, ಪ್ರವಾಸೋದ್ಯಮ ಉತ್ತೇಜನ, ಸಂಸ್ಕ್ರತ ವಿವಿ, ಬೆಂಗಳೂರು ಚಾಮರಾಜನಗರ ರೈಲು ಯೋಜನೆ, ಚಿತ್ರ ನಗರಿ‌ , ನೂತನ ತಾಲೂಕು ಹಾರೋಹಳ್ಳಿ ಅಗತ್ಯ ಸೌಲಭ್ಯ ಮತ್ತು ವಿಶ್ವ ವಿಖ್ಯಾತ ಬೊಂಬೆ ಉದ್ಯಮಕ್ಕೆ ನೆರವು.

ಜಿಲ್ಲೆಯ ಜನರ ಜೀವನಾಧಾರವಾಗಿರುವ ಸಿಲ್ಕ್, ಹಾಲು ಹಾಗೂ ಮಾವಿನ ಹಣ್ಣಿನ ಬೆಳೆಗಳಿಗೆ ಉತ್ತೇಜನ, ಮಾರುಕಟ್ಟೆ ಹಾಗೂ ಸಂಸ್ಕರಣ ಸೌಲಭ್ಯ, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ಹೈವೇ ನಿರ್ಮಾಣದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಹೆದ್ದಾರಿ ಬದಿಯ ಹಲವು ಉದ್ಯಮಗಳಿಗೆ ನೆರವು ಸೇರಿದಂತೆ ಹತ್ತಾರು ನಿರೀಕ್ಷೆಗಳು ಬಜೆಟ್ ಮೇಲಿದೆ.

Karnataka Budget 2023 : Expectations of Ramanagara District People

ಬಜೆಟ್‌ನಲ್ಲಿ ರಾಮನಗರದ ಜನರ ನಿರೀಕ್ಷೆಗಳೇನು?

ರಾಮನಗರ ಹಾಗೂ ಚನ್ನಪಟ್ಟಣ ಎರಡು ನಗರಗಳನ್ನು ಅವಳಿ ನಗರಗಳನ್ನಾಗಿ ಘೋಷಣೆ ಮಾಡುವುದು. ಅವಳಿ ನಗರ ಘೋಷಣೆಯಿಂದ ಬೆಂಗಳೂರಿಗೆ ಪರ್ಯಾಯ ಪಟ್ಟಣವಾಗಿ ಜಿಲ್ಲೆ ಅಭಿವೃದ್ಧಿ ವೇಗ ಹೆಚ್ಚಿಸಿಕೊಳ್ಳಲಿದೆ.

ರಾಮನಗರ ಜಿಲ್ಲೆ ಸ್ಥಾಪನೆಯಾಗಿ 15 ವರ್ಷಗಳೇ ಕಳೆದಿದ್ದರೂ ರಾಜೀವ್ ಗಾಂಧಿ ಆರೋಗ್ಯ ವಿವಿ ಅನುಷ್ಠಾನವಾಗಿಲ್ಲ, ಅಧಿಕಾರಕ್ಕೆ ಬಂದ ಪ್ರತಿ ಸರ್ಕಾರಗಳು ಹಾಗೂ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕವಾದ ಮಂತ್ರಿಗಳು ಪ್ರತಿ ರಾಷ್ಟ್ರೀಯ ಹಬ್ಬಗಳಂದು ಸರ್ವಾಜನಿಕ ಭಾಷಣಗಳ ಮಾತ್ರ ರಾಜೀವ್ ಗಾಂಧಿ ಅನುಷ್ಠಾನ ಮಾಡುವ ಬಗ್ಗೆ ಹೇಳಿಕೆ ನೀಡುತ್ತಾರೆ ನಂತರ ಮರೆಯುತ್ತಿದ್ದಾರೆ.

ಪಟ್ಟಣದ ಮಧ್ಯಭಾಗದಲ್ಲಿ ಹರಿದು ಹೋಗಿರುವ ಅರ್ಕಾವತಿ ಕಾಲುವೆ ಎರಡು ಬದಿಯಲ್ಲಿ ಥೇಮ್ಸ್ ನದಿ ಮಾದರಿಯಲ್ಲಿಯೇ ಅರ್ಕಾವತಿ ನದಿ ಶುದ್ಧೀಕರಣ, ಮಕ್ಕಳ ಉದ್ಯಾನ ಶುರುಗೊಳ್ಳಬೇಕಿದೆ.

ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಕೂಡಲೇ ಚಾಲನೆ ನೀಡುವುದು.
‌‌‌
ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮೈಸೂರು ಕಡೆಗೆ ಪ್ರಯಾಣಿಸುವ ಜನರಿಗಾಗಿ ಬಸ್ ನಿಲ್ದಾಣ ಸ್ಥಾಪನೆ ಮಾಡುವುದು.

ಜಿಲ್ಲೆಯಲ್ಲಿನ ಕಸವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ವಿಲೇವಾರಿ ಘಟಕಕ್ಕೆ ಸೂಕ್ತ ಸ್ಥಳದೊಂದಿಗೆ ವಿಲೇವಾರಿ ಘಟಕಗಳು ಕಾರ್ಯರಂಭಗೊಳ್ಳಬೇಕಿದೆ.

ಹಿಂದಿನ ಸರ್ಕಾರ ಘೋಷಣೆ ಮಾಡಿದ ರಾಮನಗರದ ಫಿಲ್ಮ್ ಸಿಟಿಯಲ್ಲಿ ಛಾಯಾಚಿತ್ರ, ಸಂಕಲನ, ಸೌಂಡ್ ರೆಕಾರ್ಡಿಂಗ್ ಮಾಡುವ ಸಂಸ್ಥೆ, ಅನಿಮೇಷನ್‌ ಸ್ಟುಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಸ್ಟುಡಿಯೋಗಳ ಸ್ಥಾಪಿಸುವ ಯೋಜನೆ‌ ಅನುಷ್ಠಾನ‌ ಮಾಡಬೇಕಿದೆ.

ರಾಮನಗರದಲ್ಲಿ ಬಹಳ ಅಪರೂಪದ ಅಳಿವಿನ ಅಂಚಿನಲ್ಲಿರುವ ಉದ್ದಕೊಕ್ಕಿನ ರಣಹದ್ದು ಬ್ರೀಡಿಂಗ್ ಸೆಂಟರ್ ಸ್ಥಾಪನೆ ಮಾಡಬೇಕು ಎನ್ನುವುದು ಹಲವರ ಬೇಡಿಕೆಯಾಗಿದೆ.

ಬಜೆಟ್‌ನಲ್ಲಿ ಚನ್ನಪಟ್ಟಣ ಜನರ ನಿರೀಕ್ಷೆಗಳೇನು..?

ಸಂಕಷ್ಟದಲ್ಲಿರುವ ಚನ್ನಪಟ್ಟಣದ ಸಾಂಪ್ರದಾಯಿಕ ಬೊಂಬೆ ಉದ್ಯಮಕ್ಕೆ ನೆರವು ನೀಡುವ ಮೂಲಕ ವಿಶ್ವ ವಿಖ್ಯಾತ ಬೊಂಬೆ ಉದ್ಯಮವನ್ನೇ ಬದುಕಿನ ಆಧಾರ ಮಾಡಿಕೊಂಡಿರುವ ಸಾವಿರಾರು ಕುಶಲಕರ್ಮಿಗಳ ರಕ್ಷಣೆ ಮಾಡಬೇಕಿದೆ.

2008 ರಿಂದ ಸ್ಥಗಿತಗೊಂಡಿರುವ ಕೆಎಸ್ಐಸಿ ( ಸ್ಪನ್ ಸಿಲ್ಕ್ ಮಿಲ್ ) ಕಾರ್ಖಾನೆ ಪುನಶ್ಚೇತನ ಮಾಡುವ ಮೂಲಕ ಕ್ಷೇತ್ರದ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಣ್ವ ಜಲಾಶಯ ಅಭಿವೃದ್ಧಿ ಮಾಡುವ ಜೊತೆಗೆ ಜಲಾಶಯದ ಬಳಿ ಮಕ್ಕಳ ಉದ್ಯಾನ ( ಚಿಲ್ಡ್ರನ್ಸ್ ಪಾರ್ಕ್ ) ಸ್ಥಾಪನೆ ಮಾಡಬೇಕಿದೆ.

ಚನ್ನಪಟ್ಟಣ ನಗರ ವ್ಯಾಪ್ತಿಯ ಯುಜಿಡಿ ಕಾಮಗಾರಿ ಕಳೆದ 12 ವರ್ಷಗಳಿಂದ ಸ್ಥಗಿತ ಗೊಂಡಿದ್ದು, ನಗರವನ್ನು ಯುಜಿಡಿ ವ್ಯವಸ್ಥೆಗೆ ಒಳಪಡಿಸುವುದು.

ತಾಲೂಕಿನ ಪ್ರಧಾನ ಕಸುಬಾದ ಹೈನುಗಾರಿಕೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪಶು ಆಹಾರ ಘಟಕ, ಪಶುಗಳಿಗೆ ಚಿಕಿತ್ಸೆ ನೀಡುವ ಸುಸಜ್ಜಿತ ಆಸ್ಪತ್ರೆ ಸ್ಥಾಪನೆ ಮಾಡಬೇಕಿದೆ.

ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಾಲೂಕಿನ ಬೈರಾಪಟ್ಟಣ ಬಳಿ ಮಾವು ಸೇರಿದಂತೆ ವಿವಿಧ ತೋಟಗಾರಿಕ ಹಣ್ಣುಗಳ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕಿದೆ.

ಬಜೆಟ್‌ನಲ್ಲಿ ಮಾಗಡಿ ಜನರ ನಿರೀಕ್ಷೆಗಳೇನು..?

ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಪ್ರದೇಶ ಎಂದು ಗುರುತಿಸಿರುವ ಮಾಗಡಿ ತಾಲೂಕು ಮಹಾ‌ ನಗರಿ ಬೆಂಗಳೂರಿನ ಸೆರಗಿನಲ್ಲಿದ್ದರು, ಆಡಳಿತ ನಡೆಸುವವರ ದೃಷ್ಟಿಯಿಂದ ದೂರದಲ್ಲಿದೆ.
‌‌
ಮಾಗಡಿ ತಾಲೂಕಿನ ವ್ಯಾಪ್ತಿಯಲ್ಲಿ ವೈಜಿ ಗುಡ್ಡ ಜಲಾಶಯ, ಮಂಚನಬೆಲೆ ಜಲಾಶಯ ಹಾಗೂ ತಿಪ್ಪಗೊಂಡನಹಳ್ಳಿ ಮೂರು ಜಲಾಶಯ ಇದ್ದರು ಅದರಿಂದ ಸಮಗ್ರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಹಾಗಾಗಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಿ. ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಬೇಕಿದೆ.

ನಾಡಪ್ರಭು ಕೆಂಪೇಗೌಡರ ಸಮಾಧಿ ಇರುವ ಕೆಂಪಾಪುರ ಗ್ರಾಮ ಅಭಿವೃದ್ಧಿಗೆ ಅನುದಾನ ಬಂದಿದೆ. ಆದರೆ, ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿಲ್ಲ. ಕೆಂಪಾಪುರವನ್ನು ಅಭಿವೃದ್ಧಿ ಪಡಿಸಬೇಕಿದೆ.

ಮಾಗಡಿ ಪಟ್ಟಣದಲ್ಲಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜು ಸ್ಥಾಪನೆ ಮಾಡುವುದು. ಮಹಿಳೆಯರಿಗೆ ಅನೂಕೂಲವಾಗುವಂತೆ ಪಟ್ಟಣ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸ್ಥಾಪನೆ ಮಾಡಬೇಕಿದೆ.

ಬಜೆಟ್‌ನಲ್ಲಿ ಕನಕಪುರ ಜನರ ನಿರೀಕ್ಷೆಗಳೇನು?

ರೈತರು, ಕನ್ನಡ ಪರ ಹೋರಾಟಗಾರರ ಹೋರಾಟಕ್ಕೆ ಮನ್ನಣೆ ನೀಡಿ, ಕೇವಲ ರಾಜಕೀಯ ಹೇಳಿಕೆಗಷ್ಟೇ ಸೀಮಿತವಾಗಿರುವ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನ ಮುಂದಾಗಬೇಕಿದೆ.

ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮುಂಜೂರಾಗಿದ್ದ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮಕೈಗೊಳ್ಳಬೇಕಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಧಿಕಾರವದಿಯಲ್ಲಿ ಮಂಜೂರಾದ ಬೆಂಗಳೂರು - ಚಾಮರಾಜನಗರ ರೈಲ್ವೆ ಮಾರ್ಗ‌ ಅನುಷ್ಠಾನಕ್ಕೆ ಮಾಡಬೇಕಿದೆ.

ನೆನಗುದಿಗೆ ಬಿದ್ದಿರುವ ಬೆಂಗಳೂರು ದಿಂಡಗಲ್ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.209 ಕಾಮಾಗಾರಿ ಪುನಾರಂಭಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಪ್ರವಾಸೋದ್ಯಮಕ್ಕೆ ತಾಲೂಕಿನಲ್ಲಿ ಸಾಕಷ್ಟು ಅವಕಾಶಗಳಿದ್ದು ಸಂಗಮ -ಮೇಕೆದಾಟು ಅಭಿವೃದ್ದಿ, ಟ್ರಕ್ಕಿಂಗ್‌ಗೆ ಹೆಸರಾದ ಬೆಳಿಕಲ್ ಬೆಟ್ಟಕ್ಕೆ ಡಾಂಬರು ರಸ್ತೆ ಅಭಿವೃದ್ಧಿ ಪಡಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳನ್ನು ಒಳಗೊಳ್ಳುವ ಸರ್ಕ್ಯೂಟ್ ರಚಿಸಿ ಮೂಲಸೌಕರ್ಯ ವೃದ್ಧಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+