ಜೆಡಿಎಸ್ ನಾಯಕರು ಎರಡು ಪಕ್ಷಗಳ ಜೊತೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ: ಸಿ.ಪಿ.ಯೋಗೇಶ್ವರ್ ಹೀಗೆ ಹೇಳಿದ್ದೇಕೆ?
ರಾಮನಗರ, ಮಾರ್ಚ್, 29: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಆರೋಪ ಪ್ರತ್ಯಾರೋಪ ಮಾಡುವುದು ಸಾಮಾನ್ಯವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಈ ಬಾರಿಯ ಚುನಾವಣೆಯಲ್ಲಿ ಹೈಕಮಾಂಡ್‌ಗೆ ಕ್ಲ್ಯಾರಿಟಿ ಇದೆ. ಯಾವುದೇ ರೀತಿಯಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ವಿರುದ್ಧ ಸಿ.ಪಿ.ಯೋಗೇಶ್ವರ್ ಆರೋಪ
ಚನ್ನಪಟ್ಟಣ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಂಕಲ್ವ ಯಾತ್ರೆ ಮೂಲಕ ಹಲವು ಗ್ರಾಮಗಳ ಮತದಾರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಜೆಡಿಎಸ್‌ನವರಿಗೆ ನಮ್ಮ ಪಕ್ಷದ ನಾಯಕರು ಸಹಕಾರ ನೀಡಿದ್ದು ನಿಜ. ಅದರೆ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಹೈಕಮಾಂಡ್‌ಗೆ ಕ್ಲ್ಯಾರಿಟಿ ಇದೆ. ಜೆಡಿಎಸ್ ಪಕ್ಷದವರನ್ನು ನಂಬುವ ಪರಿಸ್ಥಿತಿ ಇಲ್ಲ. ಅವರೂ ಎರಡೂ ಪಕ್ಷಗಳ ಜೊತೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಳೆದ ಬಾರಿ ನಮ್ಮ ಪಕ್ಷದ ಬೆಂಬಲ ಕೋರಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿಕ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸಿಎಂ ಆದರು. ಚುನಾವಣೆ ಪೂರ್ವದಲ್ಲಿ ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದು ನಾವು. ಆಮೇಲೆ ಕಾಂಗ್ರೆಸ್ ಜೊತೆ ಓಡಿಹೋಗಿ ಸಿಎಂ ಆದರು. ಹಾಗಾಗಿ ಜೆಡಿಎಸ್ ನಂಬಿಕೆಗೆ ಅರ್ಹವಲ್ಲ ಎಂದು ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು.
ಯಾವುದೇ ಹೊಂದಾಣಿಕೆ ಆಗಬಾರದು
ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಯಾವುದೇ ಹೊಂದಾಣಿಕೆ ಆಗಬಾರದು. 70-80 ಕ್ಷೇತ್ರ ಒಳಗೊಂಡಿರುವ ಹಳೇ ಮೈಸೂರು ಭಾಗದಲ್ಲಿ ಸ್ವತಂತ್ರವಾಗಿ ಬಿಜೆಪಿ ಪಕ್ಷ ಬೆಳೆಯಬೇಕು. ಅಧಿಕಾರಕ್ಕಾಗಿ ಆಪರೇಷನ್ ಕಮಲ ಹಾಗೂ ಬೇರೆ ಪಕ್ಷದವರನ್ನು ಕರೆತರುವ ಪದ್ಧತಿ ತಪ್ಪಬೇಕು ಅಂದರೆ ಹೊಂದಾಣಿಕೆ ನಿಲ್ಲಿಸಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಹಾಗಾಗಿ ಈಗಲೂ ಹೊಂದಾಣಿಕೆ ಬೇಡ ಎಂಬ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದರು.

ಕಳೆದ ಚುನಾವಣೆಯಲ್ಲಿ ಜೆಡಿಎಸ್‌ಗೆ ಡ್ಯಾಮೇಜ್
ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ಗೆ ಡ್ಯಾಮೇಜ್ ಆಗುತ್ತಿದ್ದ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿಯನ್ನು ಹಾಕಲಿಲ್ಲ. ಕೆಲವೆಡೆ ತ್ರಿಕೋನ ಸ್ಪರ್ಧೆ ಏರ್ಪಡುತ್ತಿತ್ತು. ಆದರೆ ಪ್ರಬಲ ಅಭ್ಯರ್ಥಿಗೆ ಟಿಕೆಟ್ ಕೊಡಲಿಲ್ಲ. ಹಾಗಾಗಿ ಈಗಲೂ ಕೆಲ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಈ ಭಯ ಇದೆ. ಬಿಜೆಪಿ ನಾಯಕರ ನಡೆಯನ್ನು ಖಂಡಿಸಿದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಇದೆಲ್ಲ ವರಿಷ್ಠರ ಗಮನಕ್ಕೆ ಬಂದಿದೆ. ಈ ಬಾರಿ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ ಎಂದರು.
ಈ ಹಿಂದೆ ಹಳೇ ಮೈಸೂರು ಭಾಗದಲ್ಲಿ ಹೊಸ ಕಾರ್ಯಕರ್ತರನ್ನು ಹುಟ್ಟುಹಾಕಿದ್ದೆವು. ಅಲ್ಲಲ್ಲಿ ಬಿಜೆಪಿ ಸಂಘಟನೆ ಮಾಡಿದ್ದೆವು. ಹಾಗೆಯೇ ಅವರಿಗೆ ಟಿಕೆಟ್ ಕೊಡುವುದಾಗಿ ಮಾತು ಕೊಟ್ಟಿದ್ದೆವು. ಬಳಿಕ ಟಿಕೆಟ್ ಕೊಡಲು ಸಾಧ್ಯವಾಗಿರಲಿಲ್ಲ. ಇಂತಹ ಕೆಲವೊಂದು ಘಟನೆಯಿಂದ ನನ್ನ ಮನಸ್ಸಿಗೆ ಘಾಸಿ ಆಗಿತ್ತು ಎಂದು ತಿಳಿಸಿದರು.
ಹಿಂದಿನ ಚುನಾವಣೆಯಲ್ಲಿ ಕೆಲವು ಕಡೆ ಜೆಡಿಎಸ್ ಜೊತೆ ಹೊಂದಾಣಿಕೆ ಆಗಿತ್ತು ಅನ್ನುವುದು ನನ್ನ ಭಾವನೆ ಆಗಿದೆ. ಕಳೆದ ಬಾರಿ ನಮ್ಮ ಕೈಯಾರೆ ನಾವೇ ಪಕ್ಷದ ಬೆಳವಣಿಗೆಯನ್ನು ಮೊಟಕುಗೊಳಿಸಿದ್ದೇವೆ. ಆದ್ದರಿಂದ ಸಾಂದರ್ಭಿಕವಾಗಿ ಹಾಗೆ ಮಾತನಾಡಿದ್ದೇನೆ. ಆದರೆ ಈ ಬಾರಿ ಯಾವುದೇ ಹೊಂದಾಣಿಕೆಯಿಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಿದ್ದಾರೆ. ಈಗ ಹಳೇ ಮೈಸೂರು ಭಾಗದಲ್ಲಿ ಪಕ್ಷ ಬೆಳವಣಿಗೆ ಆಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications