ಜೆಡಿಎಸ್ ತೊರೆದ ಮತ್ತೊಬ್ಬ ನಾಯಕ; ಡಿ.10ಕ್ಕೆ ಬಿಜೆಪಿ ಸೇರ್ಪಡೆ!
ರಾಮನಗರ, ಡಿಸೆಂಬರ್ 07: ಜೆಡಿಎಸ್ ನಾಯಕ ಮತ್ತು ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಜೇಡರಹಳ್ಳಿ ಕೃಷ್ಣಪ್ಪ ಬಿಜೆಪಿ ಸೇರಲಿದ್ದಾರೆ. ಮತ್ತೊಬ್ಬ ನಾಯಕರ ಜೆಡಿಎಸ್ ಬಿಟ್ಟು ಹೊರಟು ನಿಂತಿದ್ದಾರೆ.
ಸಮಾಜ ಸೇವಕ ಹೆಚ್. ಎಂ. ಕೃಷ್ಣಮೂರ್ತಿ (ಜೇಡರಹಳ್ಳಿ ಕೃಷ್ಣಪ್ಪ) ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ಡಿಸೆಂಬರ್ 10ರಂದು ಅವರು ಬಿಜೆಪಿ ಸೇರಲಿದ್ದಾರೆ. ಈ ಕುರಿತು ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
"ಮಾಗಡಿ ಶಾಸಕ ಎ. ಮಂಜು ಕಳೆದ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ನನಗೆ ಪಕ್ಷದಲ್ಲಿ ಗೌರವವಿಲ್ಲ. ಯಾವುದೇ ಸ್ಥಾನಮಾನವಿಲ್ಲ" ಎಂದು ಹೆಚ್. ಎಂ. ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
"ಡಿಸೆಂಬರ್ 10ರಂದು ನಾನು ಬಿಜೆಪಿ ಸೇರಲಿದ್ದೇನೆ. ಮಾಗಡಿಯಲ್ಲಿ ಪಕ್ಷಕ್ಕೆ ಬಲ ತುಂಬುವ ಕೆಲಸವನ್ನು ಮಾಡಲಿದ್ದೇನೆ. ಪಕ್ಷ ಅವಕಾಶ ನೀಡಿದರೆ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಸಿದ್ಧ" ಎಂದು ಹೆಚ್. ಎಂ. ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು.

ಪಕ್ಷದ ನಾಯಕರು ಗಮನ ಹರಿಸಿಲ್ಲ
"ಮಾಗಡಿಯಲ್ಲಿ ನನಗೆ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ನೀಡುವುದಿಲ್ಲ. ಈ ವಿಚಾರಗಳು ಪಕ್ಷದ ನಾಯಕರಿಗೆ ತಿಳಿದಿದ್ದರೂ ಗಮನ ಹರಿಸುವುದಿಲ್ಲ. ಆದ್ದರಿಂದ, ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ನಾನು ಬಿಜೆಪಿ ಸೇರಲಿದ್ದೇನೆ" ಎಂದು ಹೆಚ್. ಎಂ. ಕೃಷ್ಣಮೂರ್ತಿ ಹೇಳಿದ್ದಾರೆ.

ದೇವೇಗೌಡರೇ ನನಗೆ ಹೇಳಿದ್ದರು
"2018ರ ಚುನಾವಣೆಯಲ್ಲಿ ಮಾಗಡಿಯಲ್ಲಿ ಬಾಲಕೃಷ್ಣ ಸೋಲಿಸಲು ನಿಮ್ಮ ಅವಶ್ಯಕತೆ ಇದೆ ಎಂದು ಎಚ್. ಡಿ. ದೇವೇಗೌಡರೇ ನನಗೆ ಹೇಳಿದ್ದರು. ಜೆಡಿಎಸ್ ಸೇರಿ ಎ. ಮಂಜು ಪರವಾಗಿ ಕೆಲಸ ಮಾಡಿದ್ದೆ. ಚುನಾವಣೆಯಲ್ಲಿ ಅವರು ಗೆದ್ದರು. ಚುನಾವಣೆ ಬಳಿಕ ನನ್ನ ಕಡೆ ಗಮನ ಕೊಡಲಿಲ್ಲ" ಎಂದು ಹೆಚ್. ಎಂ. ಕೃಷ್ಣಮೂರ್ತಿ ದೂರಿದರು.

ಬಿಜೆಪಿ ಬೆಳೆಸುತ್ತೇನೆ
"ಡಿಸೆಂಬರ್ 10ರಂದು ನಾನು ಬಿಜೆಪಿ ಸೇರಲಿದ್ದೇನೆ. ಭವಿಷ್ಯದ ದಿನಗಳಲ್ಲಿ ನಾನು ಮಾಗಡಿಯಲ್ಲಿ ಬಿಜೆಪಿ ಬೆಳೆಸುತ್ತೇನೆ. ಪಕ್ಷ ಅವಕಾಶ ಮಾಡಿಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲು ಸಿದ್ಧ" ಎಂದು ಹೆಚ್. ಎಂ. ಕೃಷ್ಣಮೂರ್ತಿ ಹೇಳಿದರು.
Recommended Video

ರಾಜಾಜಿನಗರದಲ್ಲಿ ಕಣಕ್ಕಿಳಿದಿದ್ದರು
ಹೆಚ್. ಎಂ. ಕೃಷ್ಣಮೂರ್ತಿ 2018ರ ಚುನಾವಣೆಯಲ್ಲಿ ಬೆಂಗಳೂರಿನ ರಾಜಾಜಿನಗರದಲ್ಲಿ ಜೆಡಿಎಸ್ ಅಭ್ಯರ್ಥಿಗಯಾಗಿ ಕಣಕ್ಕಿಳಿದಿದ್ದರು. 13,637 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು. ಬಿಜೆಪಿಯ ಎಸ್. ಸುರೇಶ್ ಕುಮಾರ್ ಗೆಲುವು ಸಾಧಿಸಿದ್ದಾರೆ.












Click it and Unblock the Notifications