Independence day 2023: ರೇಷ್ಮೆನಗರಿ ರಾಮನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಹೀಗಿತ್ತು
ರಾಮನಗರ, ಆಗಸ್ಟ್, 15: ಇಂದು ದೇಶದೆಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚಣೆಯ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿಯೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಿದರು.
ಸಚಿವ ರಾಮಲಿಂಗಾರೆಡ್ಡಿ ಅವರು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪಥಸಂಚಲನ ವೀಕ್ಷಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಜಿಲ್ಲಾ ಪಂಚಾಯತ್ ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್‌ಪಿ ಕಾರ್ತಿಕ್ ರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಗೋಳ್ಳಿ ರಾಯಣ್ಣರ ಹೋರಾಟ ಅವಿಸ್ಮರಣೀಯ
ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು, ಪ್ರಾಣ ತ್ಯಾಗ ಮಾಡಿದ ಸಂಗೋಳ್ಳಿ ರಾಯಣ್ಣ ಅವರ ಹೋರಾಟ ಅವಿಸ್ಮರಣೀಯ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ನಗರದ ಕುರುಬಾರಹಳ್ಳಿಯ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಸಚಿವರು, ರಾಯಣ್ಣನ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕು ಎಂದು ಹೇಳಿದರು.
ನಾಯಕತ್ವದ ನಿಷ್ಟೆಗೆ, ಪ್ರಾಮಾಣಿಕತೆಗೆ, ನೆಲ, ಜಲ, ಭಾಷೆ ಮತ್ತು ಜನರ ರಕ್ಷಣೆಗೆ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದರು. ಗುಲಾಮಗಿರಿಯಿಂದ ನಮ್ಮ ಬಿಡುಗಡೆಗೊಳಿಸುವುದು ಬಿಟ್ಟು ಬೇರೆ ಯಾವುದೇ ಆಲೋಚನೆ ರಾಯಣ್ಣರಲ್ಲಿ ಇರಲಿಲ್ಲ ಎಂದು ಹೇಳಿದರು.
ಸಂಗೋಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯದ ಮಹಾನ್ ಹೋರಾಟಗಾರ. ಸಮಸ್ತ ನಾಡಿನ ಜನತೆಯ ಸ್ವಾತಂತ್ರ್ಯಕ್ಕಾಗಿ ತನ್ನನ್ನು ಮುಡಿಪಾಗಿಟ್ಟ ದೊಡ್ಡ ಸೇನಾನಿ. ಅಂತಹ ವೀರನ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿರುವುದು ಪ್ರಶಂಸನೀಯ ಎಂದರು.
ದೇಶಾದ್ಯಂತ ಮೈಸೂರಿಗೆ ಆಗಮಿಸಿ ಚಾಮುಂಡಿಬೆಟ್ಟಕ್ಕೆ ಬರುವ ಪ್ರವಾಸಿಗರು ಈ ವೃತ್ತದ ಮೂಲಕ ತೆರಳುವ ಸಂದರ್ಭದಲ್ಲಿ ಸಂಗೋಳ್ಳಿ ರಾಯಣ್ಣನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟವನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ ಎಂದರು.












Click it and Unblock the Notifications