ಬುಲೆಟ್‌ನಲ್ಲಿ ಜಾಲಿ ರೈಡ್ ಹೊರಟ ರತಿ ಮನ್ಮಥ: ಚನ್ನಪಟ್ಟಣದಲ್ಲಿ ಹೋಳಿ ಸಂಭ್ರಮ
ಬೊಂಬೆನಾಡು ಚನ್ನಪಟ್ಟಣದ ಹೋಳಿ ಹಬ್ಬದ ಆಚರಣೆ 150 ವರ್ಷಗಳ ಇತಿಹಾಸವನ್ನು ಹೊಂದಿದೆ. ಪುರಾಣದ ಹಿನ್ನಲೆಯಿರುವ ಹೋಳಿ ಹಬ್ಬವನ್ನು ಪಟ್ಟಣದ ಮಂಡಿಪೇಟೆ ಬಡವಾಣೆಯಲ್ಲಿ ರತಿ ಮನ್ಮಥರ ವಿಗ್ರಹ ಪ್ರತಿಷ್ಟಾಪನೆ ಮಾಡಿ 15 ದಿನಗಳ ಕಾಲ ಪೂಜೆ ಮಾಡಲಾಗುತ್ತದೆ.
ರಾಮನಗರ ಮಾರ್ಚ್ 8: ದೇಶದ ಭಾವೈಕ್ಯತೆ ಸಾರುವ ಹಬ್ಬಗಳಲ್ಲಿ ಒಂದಾದ ಹೋಳಿ ಹಬ್ಬ ತನ್ನದೇ ಪ್ರಾಮುಖ್ಯತೆಯನ್ನು ಹೊಂದಿದೆ. ಉತ್ತರ ಭಾರತದಲ್ಲಿ ವಿಜೃಂಭಣೆಯಾಗಿ ಆಚರಿಸುವ ಹೋಳಿ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಆಚರಣೆ ಮಾಡುವುದು ವಿರಳ. ಅದರೆ ಬೊಂಬೆನಾಡು ಚನ್ನಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಶತಮಾನಗಳ ಇತಿಹಾಸವಿದೆ.
ಜಗತ್ತನ್ನೇ ನಡುಗಿಸಿದ್ದ ಕೊರೊನಾ ಮಹಾಮಾರಿ ಸೋಂಕಿನ ಹಾವಳಿಯಿಂದ ಎರಡು ವರ್ಷ ಹೋಳಿ ಹಬ್ಬ ತನ್ನ ಮೆರಗು ಕಳೆದುಕೊಂಡಿತ್ತು. ಆದರೆ ಈ ಬಾರಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ರಾಮನಗರ ಜಿಲ್ಲೆಯ ಬೊಂಬೆನಾಡು ಚನ್ನಪಟ್ಟಣದ ಹೋಳಿ ಹಬ್ಬದ ಆಚರಣೆ 150 ವರ್ಷಗಳ ಇತಿಹಾಸವನ್ನು ಹೊಂದಿದೆ. ಪುರಾಣದ ಹಿನ್ನಲೆಯಿರುವ ಹೋಳಿ ಹಬ್ಬವನ್ನು ಪಟ್ಟಣದ ಮಂಡಿಪೇಟೆ ಬಡವಾಣೆಯಲ್ಲಿರತಿ ಮನ್ಮಥರ ವಿಗ್ರಹ ಪ್ರತಿಷ್ಟಾಪನೆ ಮಾಡಿ 15 ದಿನಗಳ ಕಾಲ ಪ್ರತಿ ದಿನ ರತಿ ಮನ್ಮಥ ವಿಗ್ರಹಕ್ಕೆ ವಿವಿಧ ವೇಷ ತೊಡಿಸಿ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.
ಶಿವರಾತ್ರಿಯ ನಂತರದ ಅಮಾವಾಸ್ಯೆ ದಿನ ರತಿ, ಮನ್ಮಥರನ್ನು ಪ್ರತಿಷ್ಠಾಪಿಸಿ ಪ್ರತಿ ದಿನವೂ ಒಂದೊಂದು ಅಲಂಕಾರವನ್ನು ಮಾಡಲಾಗುತ್ತದೆ ಹೋಳಿ ಹುಣ್ಣಿಮೆಯ ದಿನ ಕಾಮದಹನವನ್ನು ಮಾಡಿಲಾಗುತ್ತದೆ. ಇದರ ನಡುವೆ ಮಕ್ಕಳ ವೇಷದ ಮೆರವಣಿಗೆ ಈ ಹಬ್ಬದ ಒಂದು ವಿಶೇಷವೇ ಆಗಿದೆ. ಮಕ್ಕಳು ವಿವಿಧ ವೇಷಗಳನ್ನು ತೊಟ್ಟು ಈ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುತ್ತಾರೆ.
ರತಿ ಮನ್ಮಥರ ವಿಗ್ರಹಗಳಿಗೆ ದಿನಕ್ಕೂಂದು ಬಗೆಯ ವೇಷಗಳನ್ನು ತೋಡಿಸಿ ಪೂಜೆ ಸಲ್ಲಿಸಲಾಗುತ್ತದೆ. ರತಿ ಮನ್ಮಥರ ಜಾಲಿ ರೈಡ್, ಪ್ರೇಮ ಲೋಕ, ಮದುವೆ ಸನ್ನಿವೇಶ, ಬೈಕ್ ರೈಡ್ ಹಾಗೂ ರತಿ ಮನ್ಮಥರ ದರ್ಬಾರ್ ಸೇರಿದಂತೆ ಪ್ರತಿ ದಿನ ನಾನಾ ಬಗೆಯ ವೇಷ ಭೂಷಣ ತೊಡಿಸಿ ಸಂಭ್ರಮಿಸುವ ಪಟ್ಟಣದ ಜನತೆ ಹುಣ್ಣಿಮೆಯಂದು ವಿಜೃಂಭಣೆಯಿಂದ ಮೆರವಣಿಗೆ ಮಾಡುವ ಮೂಲಕ ಹಬ್ಬ ನೆರವೇರುತ್ತದೆ.

ವಿವಿಧ ವೇಷ ಭೂಷಣಗಳು, ಜಾನಪದ ನೃತ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಹೊರಟು ಸಂಜೆ ವೇಳೆಗೆ ಕಾಮನ ದಹನ ನೆರವೇರುತ್ತದೆ. ಕಾಮಣ್ಣ ಸ್ವಾಮಿಯ ಆರೋಹಣ, ರತಿ ಮನ್ಮಥರ ಉತ್ಸವ, ವಿಜೃಂಭಣೆಯ ಬೆಳ್ಳಿ ಪಲ್ಲಕ್ಕಿ ಉತ್ಸವ, ಐತಿಹಾಸಿಕ ಪರಂಪರೆಯ ಹೋಳಿ ಹಬ್ಬ ಆಚರಣೆ ನಡೆಯುತ್ತದೆ. ಕೊನೆಯ ದಿನ ಹೋಳಿ ಹಬ್ಬದಂದು ಮಿತ್ರರಿಗೆ , ಪರಿಚಯಸ್ಥರಿಗೆ ಬಣ್ಣ ಹಾಕುವ ಮೂಲಕ ಸಂತೋಷದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ .
ಇನ್ನು ಹೋಳಿ ಹಬ್ಬದ ಆಚರಣೆಯ ಬಗ್ಗೆ ಮಾತನಾಡಿದ ಅರ್ಚಕರಾದ ಗೋವಿಂದ ಭಟ್, "ಚನ್ನಪಟ್ಟಣದಲ್ಲಿ ಕಾಮನ ಹಬ್ಬ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬವನ್ನು ವಂಶ ಪಾರಂಪರ್ಯವಾಗಿ ಆಚರಿಸಿ ಜನತೆಯ ಕ್ಷೇಮಾಭಿವೃದ್ಧಿಗಾಗಿ ಪ್ರಾರ್ಥಿಸಲಾಗುತ್ತದೆ. ಹೋಳಿ ಹಬ್ಬವನ್ನು ನಮ್ಮ ಪೂರ್ವಿಕರು ಆಚರಣೆ ಮಾಡುತ್ತಿದ್ದರು ಹಾಗಾಗಿ ನಾವು ಕೂಡ ಅಷ್ಟೇ ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಿದ್ದೇವೆ" ಎಂದು ಹೇಳಿದರು.

ಸ್ಥಳೀಯ ಹಿರಿಯರಾದ ರಾಮಯ್ಯ ಹೋಳಿ ಹಬ್ಬದ ಆಚರಣೆ ಬಗ್ಗೆ ಮಾತನಾಡಿದ್ದು, " ಹೋಳಿ ಹಬ್ಬದ ಆಚರಣೆ ಪ್ರಾರಂಭದ ಬಗ್ಗೆ ನಿಖರವಾಗಿ ತಿಳಿದಿಲ್ಲ. ಆದರೆ ರಾಜರ ಆಳ್ವಿಕೆ ಕಾಲದಲ್ಲಿ ಚನ್ನಪಟ್ಟಣದಲ್ಲಿ ಕಾಮನಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ ಎನ್ನುವ ಪ್ರತೀತಿ ಇದೆ. ಚನ್ನಪಟ್ಟಣದಲ್ಲಿ ಕಾಮನ ಹಬ್ಬ ಆಚರಣೆಯೇ ಒಂದು ವಿಭಿನ್ನ ಹಾಗೂ ವಿಶಿಷ್ಟವಾಗಿದೆ. ಧಾರ್ಮಿಕವಾಗಿ ಆಚರಣೆ ಮಾಡುವುದರಿಂದ ಮಳೆ ಬೆಳೆ ಉತ್ತಮವಾಗಿ ನಾಡು ಸುಭಿಕ್ಷವಾಗಿರುತ್ತದೆ ಎನ್ನುವುದು ನಮ್ಮ ನಂಬಿಕೆ ಎಂದರು.












Click it and Unblock the Notifications