ನಿಖಿಲ್-ರೇವತಿ ವಿವಾಹ ಸಿದ್ಧತಾ ಕಾರ್ಯ; ಎಚ್ ಡಿಕೆ ದಂಪತಿ ವಿಶೇಷ ಪೂಜೆ
ರಾಮನಗರ, ಫೆಬ್ರವರಿ 21: ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ - ರೇವತಿ ವಿವಾಹ ಏಪ್ರಿಲ್ 17ಕ್ಕೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಶಿವರಾತ್ರಿಯ ಶುಭ ದಿನವಾದ ಇಂದು ವಾಸ್ತು, ಶಾಸ್ತ್ರ, ಹೋಮ-ಹವನದ ಮೂಲಕ ವಿವಾಹ ಸಿದ್ಧತೆಗೆ ಚಾಲನೆ ನೀಡಿದರು. ಎಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ವಧು ರೇವತಿಯ ತಂದೆ ಮಂಜುನಾಥ್ ಹಾಗೂ ತಾಯಿ ಶ್ರೀದೇವಿ ವಿವಾಹ ಕಾರ್ಯಕ್ಕೆ ಚಾಲನೆ ನೀಡಿದರು.
ಜ್ಯೋತಿಷಿ ಹರಿಶಾಸ್ತ್ರಿ ಹಾಗೂ ರಾಮನಗರದ ಬಲಮುರಿ ಗಣಪತಿ ದೇವಾಲಯದ ಗಣೇಶ್ ಭಟ್ ನೇತೃತ್ವದಲ್ಲಿ ವಿಶೇಷ ಹೋಮ-ಹವನ ನಡೆಸುವ ಮೂಲಕ ಭೂಮಿಗೆ ಶಕ್ತಿ ತುಂಬುವ ವಿಶೇಷ ಪೂಜೆಯನ್ನು ನಡೆಸಲಾಯಿತು. ಮದುವೆಗೆ ಯಾವುದೇ ವಿಘ್ನಗಳು ಎದುರಾಗದಿರಲೆಂದು ಗಣಪತಿ ಹೋಮ, ಭೂವರಹಾ ಸ್ವಾಮಿ ಪೂಜೆ, ಸಪ್ತಪದಿ ಮಂಟಪ ನಿರ್ಮಾಣಕ್ಕಾಗಿ ವಾಸ್ತುಹೋಮ ಸೇರಿದಂತೆ ನವಗ್ರಹ ಹೋಮ, ಮೃತ್ಯುಂಜಯ ಹೋಮಗಳನ್ನು ನಡೆಸಲಾಯಿತು. ಹೋಮ-ಹವನದ ಬಳಿಕ ಗುದ್ದಲಿ ಪೂಜೆ ನಡೆಸಿ ವಿವಾಹ ಕಾರ್ಯದ ಸಿದ್ಧತೆಗೆ ಚಾಲನೆ ನೀಡಿದರು.
ತಮ್ಮ ಪುತ್ರನ ಮದುವೆಗೆ ರಾಮನಗರ- ಚನ್ನಪಟ್ಟಣದ ನಡುವಿನ ಜಾನಪದ ಲೋಕದ ಪಕ್ಕದಲ್ಲಿರುವ ಸುಮಾರು 80 ಎಕರೆ ಪ್ರದೇಶವನ್ನು ನಿಗದಿ ಮಾಡಿದ್ದು, ಈಗಾಗಲೇ ಜಮೀನು ಸಮತಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ. ಮದುವೆ ಸಮಾರಂಭದ ನೀರಿನ ವ್ಯವಸ್ಥೆಗಾಗಿ 5 ರಿಂದ 6 ಬೋರ್ ವೆಲ್ ಕೊರೆಸಲು ತಿರ್ಮಾನಿಸಿದ್ದು, ಇಂದು ಸಾಂಕೇತಿಕವಾಗಿ ಬೋರ್ವೆಲ್ ಲಾರಿಗೆ ಪೂಜೆ ಸಲ್ಲಿಸಿದರು.

ಇದೇ ಸಂದರ್ಭ ಮಾತನಾಡಿದ ಎಚ್ಡಿಕೆ ದಂಪತಿ, "ಸಾಕಷ್ಟು ಮಂದಿ ಬೆಂಗಳೂರು ಅರಮನೆಯಲ್ಲಿ ಮದುವೆ ಮಾಡ್ತಾರೆ. ಆದರೆ ನಮ್ಮ ಮಗನ ಮದುವೆಯನ್ನು ಜನರ ನಡುವೆಯೇ ಮಾಡಬೇಕೆಂದುಕೊಂಡಿದ್ದೆವು. ವಿವಾಹ ಕಾರ್ಯಕ್ಕೆ ಆರಂಭಿಕವಾಗಿ ಪೂಜಾ ಕಾರ್ಯ ನಡೆಸಲಾಗಿದೆ. ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸುವ ಆಲೋಚನೆಯಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲಿ ನಡೆಯಲಿದೆ ಎಂಬುದು ಅಂತಿಮವಾಗಲಿದೆ ಎಂದು ತಿಳಿಸಿದರು.












Click it and Unblock the Notifications