ಅಣ್ಣನ ವಿರುದ್ಧ ಹವಾಲ ಎಂಬ ಮಸಲತ್ತಿನ ಕತ್ತಿ ಎಂದ ಡಿಕೆ ಸುರೇಶ್
ರಾಮನಗರ, ಜೂನ್ 22 : ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಕೆಡಿಸಬೇಕು ಅಂತ ಈ ಹವಾಲ ಹೆಸರನ್ನು ತಳಕು ಹಾಕುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರಾಗಲಿ ಅಥವಾ ಅವರ ಕುಟುಂಬದವರಾಗಲೀ ಭಾಗಿಯಾಗಿಲ್ಲ. ಇವೆಲ್ಲವೂ ರಾಜಕೀಯ ಷಡ್ಯಂತ್ರ ಮತ್ತು ಊಹಾಪೋಹ ಎಂದು ಸಂಸದ ಹಾಗೂ ಡಿ.ಕೆ.ಶಿವಕುಮಾರ್ ಸೋದರ ಸುರೇಶ್ ಸಮರ್ಥಿಸಿಕೊಂಡರು.
ದ್ವೇಷದ ರಾಜಕೀಯಕ್ಕಾಗಿ ಕೇಂದ್ರ ಸರಕಾರವು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಡಿ.ಕೆ.ಶಿವಕುಮಾರ್ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ರಾಮನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ರಾಜಕೀಯದಲ್ಲಿ ಬಲಿಷ್ಠರಾಗಿರುತ್ತಾರೆ ಅಂಥವರನ್ನು ಮಾತ್ರ ಟಾರ್ಗೆಟ್ ಮಾಡುತ್ತಾರೆ. ಬಲಿಷ್ಠರನ್ನು ಬಿಟ್ಟು ಬೇರೆಯವರನ್ನು ಟಾರ್ಗೆಟ್ ಮಾಡಿದರೆ ಏನು ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಎಲ್ಲ ಆರೋಪಗಳನ್ನು ನಾವು ಎದುರಿಸುತ್ತೇವೆ. ಹವಾಲ ಹಣ ಎಂದು ಆದಾಯ ಇಲಾಖೆಯವರು ಹೇಳುತ್ತಿದ್ದಾರೆ, ಅಷ್ಟೆ. ಹವಾಲ ಹಣದ ಬಗ್ಗೆ ಸಾಕ್ಷಿ ಬೇಕು, ಹವಾಲ ಕೊಟ್ಟವರು ಯಾರು, ಯಾರಿಗೆ ಕೊಟ್ಟರು ಎಂಬ ಮಾಹಿತಿ ಇಲ್ಲಾ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಈ ವಿಚಾರದಲ್ಲಿ ನಾನು ನೂರು ಸಲ ಹೇಳಿದ್ದೇನೆ, ಯಾವುದೇ ಆತಂಕ ಇಲ್ಲ. ನಾವು ಪಾರದರ್ಶಕವಾಗಿ ಇದ್ದೇವೆ ಎಂದು ಸುರೇಶ್ ಸಮರ್ಥನೆ ನೀಡಿದರು.












Click it and Unblock the Notifications