Gruhajyothi scheme: ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ "ಗೃಹಜ್ಯೋತಿ" ವರದಾನ: ರಾಮಲಿಂಗಾ ರೆಡ್ಡಿ
ರಾಮನಗರ, ಆಗಸ್ಟ್, 06: ಗೃಹಜ್ಯೋತಿ ಯೋಜನೆಯಿಂದ ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ಪ್ರಗತಿ ಹೊಂದಲು ಸಹಕಾರಿಯಾಗುತ್ತದೆ ಎಂದು ಸಾರಿಗೆ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದರು.
ರಾಮನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ರಾಮನಗರ ಜಿಲ್ಲೆ, ರಾಮನಗರ ವತಿಯಿಂದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗೃಹ ಜ್ಯೋತಿ ಯೋಜನೆಯಡಿ 1 ಕೋಟಿ 40 ಲಕ್ಷಕ್ಕೂ ಹೆಚ್ಚು ಜನ ನೋಂದಾಯಿಸಿಕೊಂಡಿರುತ್ತಾರೆ. ಕೆಲ ಗ್ರಾಹಕರು 40-50-100 ಯೂನಿಟ್‌ಗಳನ್ನು ಉಪಯೋಗಿಸಿರುತ್ತಾರೆ. ಇನ್ನೂ ಕೆಲವರು 200ಕ್ಕೂ ಹೆಚ್ಚು ಯೂನಿಟಿಗಳನ್ನು ಉಪಯೋಗಿಸಿರುತ್ತಾರೆ ಎಂದರು.
ಶಕ್ತಿ ಯೋಜನೆ ಜಾರಿಯಾಗಿ ಇಲ್ಲಿಯವರೆಗೆ ಸುಮಾರು 32 ಕೋಟಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿರುತ್ತಾರೆ. ಈ ಹಿಂದ ಪ್ರತಿ ದಿನ 83 ಲಕ್ಷ ಜನ ಮಾತ್ರ ಪ್ರಯಾಣಿಸುತ್ತಿದ್ದರು ಎಂದರು. ಹಾಗೆಯೇ ಅನ್ನ ಭಾಗ್ಯ ಯೋಜನೆಯಡಿ ಮೊದಲು 7 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ನಂತರ ಬಂದ ಬಿಜೆಪಿ ಸರ್ಕಾರ 5 ಕೆ.ಜಿಗೆ ಇಳಿಸಿತ್ತು. ಇದನ್ನೇ ನಾವು ಈಗ 10 ಕೆ.ಜಿ ಅಕ್ಕಿ ಕೊಡಲು ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಕೇಂದ್ರದ ಬಳಿ 130 ಲಕ್ಷ ಮೆಟ್ರಿಕ್ ಟನ್ ಅಕ್ಕಿಯಿದ್ದು, ಅದನ್ನು ರಾಜ್ಯಕ್ಕೆ ನೀಡುತ್ತಿಲ್ಲ. ಆದ್ದರಿಂದ 5 ಕೆ.ಜಿ ಅಕ್ಕಿ ಹಾಗೂ ಪ್ರತಿ 1 ಕೆ.ಜಿ.ಗೆ 34 ರೂಪಾಯಿಗಳಂತೆ 5 ಕೆ.ಜಿ.ಗೆ ತಗಲುವ ಮೊತ್ತವನ್ನು ಡಿ.ಬಿ.ಟಿ ಮೂಲಕ ವರ್ಗಾಹಿಸಲಾಗುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಿ.ಕೆ.ಸುರೇಶ್ ಅವರು ಮಾತನಾಡಿ, ಕರ್ನಾಟಕದಲ್ಲಿ ವಾಸಿಸುತ್ತಿರುವ ಪ್ರತಿ ಮನೆಗಳಲ್ಲೂ ಸಹ ಗೃಹಜ್ಯೋತಿ ಯೋಜನೆ ಪ್ರಾರಂಭವಾಗಿದೆ. ಕಲಬುರಗಿಯಲ್ಲಿ ಮುಖ್ಯಮಂತ್ರಿಗಳು ವಿದ್ಯುಕ್ತವಾಗಿ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಹ ಇಂದೇ ಚಾಲನೆ ನೀಡಲಾಗಿದೆ. ಈ ಯೋಜನೆಯಿಂದ ಬಡವರು, ದೀನ ದಲಿತರಿಗೆ ಅನುಕೂಲವಾಗಲಿದೆ ಎಂದರು.
ವಿವಿಧ ಸಾರಿಗೆ ನಿಗಮದಿಂದ 258 ಕೋಟಿ ರೂಪಾಯಗಳ ಬಿಲ್ ಪಾವತಿಸುವಂತೆ ಸರ್ಕಾರವನ್ನು ಕೋರಿರುತ್ತಾರೆ. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ದೇವಾಲಯ ಹಾಗೂ ಬೇರೆ ರೀತಿಯಿಂದ 2 ಸಾವಿರ ಕೋಟಿ ರೂಪಾಯಿ ಆದಾಯ ಬಂದಿರುತ್ತದೆ. ಅಲ್ಲದೆ ಜಿಲ್ಲೆಯಲ್ಲಿ ಶೇಕಡಾ 95ರಷ್ಟು ಜನರಿಗೆ ಗೃಹಜ್ಯೋತಿ ಯೋಜನೆ ತಲುಪಲಿದೆ. ಈಗಾಗಲೇ ಶೇಕಡಾ 79ರಷ್ಟು ಜನ ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಿಂದ ನಿಮ್ಮೆಲ್ಲರ ಬಾಳಿನಲ್ಲಿ ಜ್ಯೋತಿ ಬೆಳಗಲಿದ್ದು, ಹಾಗೆಯೇ ಜನರ ಆರ್ಥಿಕ ಸುಧಾರಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications