ಸಂಪುಟ ವಿಸ್ತರಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ
ರಾಮನಗರ, ಫೆಬ್ರವರಿ 3: ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಹಾದಿಬೀದಿಯಲ್ಲಿ ಲಘುವಾಗಿ ಮಾತನಾಡುವುದು, ಮಂತ್ರಿಗಳ ಬಗ್ಗೆ ಹೇಳಿಕೆಗಳನ್ನು ನೀಡುವುದು ಉತ್ತಮ ನಡವಳಿಕೆ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸಮಸ್ಯೆಗಳಿದ್ದರೆ ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬೇಕು. ಆದು ಬಿಟ್ಟು ಶಿಸ್ತಿನ ಪಕ್ಷ ಎಂದು ಟ್ಯಾಗ್‌ಲೈನ್ ಹಾಕಿಕೊಂಡ ಪಕ್ಷದಲ್ಲಿ ದಿನನಿತ್ಯ ಶಾಸಕರು, ಸರ್ಕಾರ ಹಾಗೂ ಮಂತ್ರಿಗಳ ಬಗ್ಗೆ ಮಾತನಾಡುವುದು ಉತ್ತಮ ಬೆಳವಣಿಗೆ ಅಲ್ಲ. ಇವತ್ತು ಅವರ ಪರಿಸ್ಥಿತಿ ನೋಡಿದರೆ ಮುಂದಿನ ದಿನಗಳಲ್ಲಿ ಅವರ ಭವಿಷ್ಯ ಏನು ಎಂದು ಯಾರು ಬೇಕಿದ್ದರೂ ಅರ್ಥೈಸಿಕೊಳ್ಳುತ್ತಾರೆ ಎಂದರು.
ಇನ್ನು ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಜೆಡಿಎಸ್ ಪಕ್ಷ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಫೆ.14ರಂದು ಅವರೇ ನಿರ್ಧರಿಸುತ್ತಾರೆ. ಅಲ್ಲಿಯವರೆಗೂ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಕಾಯೋಣ ಎಂದು ಹೇಳಿದರು.

ರಾಮನಗರ ಪ್ರಾಧಿಕಾರದ ಹಗರಣ ಬಗ್ಗೆ ಸದನದಲ್ಲಿ ಚರ್ಚೆ
2013ರಲ್ಲಿ ನಡೆದ ರಾಮನಗರ ಪ್ರಾಧಿಕಾರದ ಹಗರಣ ನಡೆದು 10 ವರ್ಷ ಕಳೆದಿದೆ. ಹಗರಣದಲ್ಲಿ 16 ಕೋಟಿ ರೂ. ಹಣ ಲೂಟಿ ಮಾಡಿದ್ದಾರೆ. ಆದರೆ ಸರ್ಕಾರ ಹಗರಣವನ್ನು ಸಿಬಿಐಗೆ ವಹಿಸಿತ್ತು. ಅದರ ಹಗರಣ ನಡೆಸಿದ ಅಧಿಕಾರಿಗೆ ದೊಡ್ಡ ಹುದ್ದೆಗಳನ್ನು ನೀಡಿದ್ದಾರೆ. ಬಿಡಿಎ, ಕಾರ್ಪೊರೇಷನ್ ಹುದ್ದೆಯನ್ನು ನೀಡಿದ್ದಾರೆ. ಸಿಬಿಐಗೆ ವಹಿಸಿದ್ದರೂ ಸರಿಯಾದ ತನಿಖೆ ನಡೆಸಲಿಲ್ಲ. ರಾಜ್ಯ ಸರ್ಕಾರದಲ್ಲಿ ಇರುವವರೇ ರಕ್ಷಣೆ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆರೋಪಿಸಿದರು.
ರಾಮನಗರ ಅಭಿವೃದ್ಧಿ ಪ್ರಾಧಿಕಾರ ಹಗರಣ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಮಾಡುತ್ತೇನೆ. ಪ್ರಾಧಿಕಾರದ ಇಂದಿನ ಪರಿಸ್ಥಿತಿ ಬಗ್ಗೆ ಮಾಹಿತಿ ತರಿಸಿಕೊಂಡುದ್ದೇನೆ. ಉಳಿದಿರುವ 40- 50 ಸೈಟ್‌ಗಳನ್ನು ಮಾರಾಟ ಮಾಡಲು ಆಗುತ್ತಿಲ್ಲ. ಮಾರಾಟ ಮಾಡಲು ಟೆಕ್ನಿಕಲ್ ಸಮಸ್ಯೆಗಳಿವೆ. ಪ್ರಾಧಿಕಾರದಲ್ಲಿ ಹಣದ ಕೊರತೆಯು ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಾದೇಶಿಕ ಶಕ್ತಿಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳೊಂದಿಗೆ ಸಭೆ
ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ರಾಜ್ಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಜತೆ ಮಹತ್ವದ ಸಭೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ರಾಮನಗರ ಜಿಲ್ಲೆಯ ಬಿಡದಿಯ ತಮ್ಮ ತೋಟದಲ್ಲಿ ತಮ್ಮನ್ನು ಭೇಟಿಯಾದ ಕನ್ನಡ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, "ರಾಜ್ಯವು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ನಾವು ಅನೇಕ ಕಠಿಣ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇವುಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ ಎಲ್ಲ ಸಂಘಟನೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಚರ್ಚೆ ಮಾಡಲು ಸಭೆ ಕರೆದಿದ್ದೇನೆ," ಎಂದರು.

ರಾಜ್ಯದಲ್ಲಿ ಕನ್ನಡ ಸಂಘಟನೆಗಳ ಜತೆಗೆ ರೈತಪರ, ನೀರಾವರಿ ವಿಷಯಗಳನ್ನಿಟ್ಟುಕೊಂಡು ಹೋರಾಟ ನಡೆಸುತ್ತಿರುವ ಅನೇಕ ಸಂಘಟನೆಗಳದ್ದು, ಅವೆಲ್ಲವನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದ ಎಚ್‌ಡಿಕೆ, ನಮ್ಮ ಸಮಸ್ಯೆಗಳ ಬಗ್ಗೆ ನಾವೇ ಹೋರಾಟ ನಡೆಸಿ ಸಾಧಿಸಿಕೊಳ್ಳಬೇಕಿದೆ. ಆ ಗುರಿ ಸಾಧನೆಗಾಗಿ ಪ್ರಾದೇಶಿಕ ರಾಜಕೀಯ ಶಕ್ತಿಯ ಅಗತ್ಯವಿದೆ. ಆ ದಿಕ್ಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇಂಥ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ಕಾರ್ಯತಂತ್ರ ರೂಪಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ವಿವರಿಸಿದರು.
ಮತ್ತೆ ಬೆಂಗಳೂರಿನಲ್ಲಿ ಸಭೆ
ಇಂದು ಸುಮಾರು ನೂರೈವತ್ತಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳ ಮುಖಂಡರ ಜತೆ ಚರ್ಚೆ ನಡೆಸಿದ್ದೇನೆ. ಮುಂದಿನ ವಾರ ಬೆಂಗಳೂರಿನಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಇವರೆಲ್ಲರ ಜತೆ ಮುಕ್ತವಾಗಿ ಮಾತುಕತೆ ನಡೆಸಲಿದ್ದೇನೆ. ಕನ್ನಡಿಗರ ನಿರುದ್ಯೋಗ ಸಮಸ್ಯೆ, ಖಾಸಗಿ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಇತ್ಯಾದಿ ವಿಷಯಗಳ ಬಗ್ಗೆ ಮುಖಂಡರಿಂದ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ರಾಜ್ಯವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರ ರಚಿಸುವ ದಿಸೆಯಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ರಾಷ್ಟ್ರೀಯ ಪಕ್ಷಗಳು ತಿರಸ್ಕೃತ
ಇಡೀ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಜನರು ತಿರಸ್ಕರಿಸುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚೆಚ್ಚು ಮಣೆ ಹಾಕುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕಳೆದ 75 ವರ್ಷಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನೀರಾವರಿ ಸೇರಿದಂತೆ ವಿವಿಧ ವಲಯಗಳಲ್ಲಿ ಭಾರೀ ಅನ್ಯಾಯ ಮಾಡಿವೆ. ಆದರೆ, ಅಧಿಕಾರದಲ್ಲಿದ್ದ ಅಲ್ಪಸ್ವಲ್ಪ ಅವಧಿಯಲ್ಲೇ ಜೆಡಿಎಸ್ ಪಕ್ಷವು ಜನರ ಆಶೋತ್ತರಗಳನ್ನು ಈಡೇರಿಸಿದೆ. ಈ ಬಗ್ಗೆ ಸರಕಾರದ ಬಳಿ ನೈಜ ದಾಖಲೆಗಳೇ ಇವೆ. ಹಾಗೆಯೇ, ಭಾಷೆಗೆ ಸಂಬಂಧಿಸಿದಂತೆ ಕನ್ನಡವು ದೆಹಲಿಯಿಂದ ನಾನಾ ರೀತಿಯ ಕಿರುಕುಳ ಅನುಭವಿಸುತ್ತಿದೆ. ಇದನ್ನು ತಪ್ಪಿಸಬೇಕಿದೆ ಎಂದರು.
Recommended Video
ಇದೇ ವೇಳೆ ರೈತ ಮುಖಂಡರನ್ನೂ ಒಗ್ಗೂಡಿಲಾಗುವುದು. ಜಾತಿ, ಮತ ಮತ್ತು ಧರ್ಮವನ್ನು ಮೀರಿ ಎಲ್ಲರನ್ನೂ ಒಂದು ವೇದಿಕೆಗೆ ತಂದು ಕಾರ್ಯಕ್ರಮ ರೂಪಿಸಲಾಗುವುದು. ಎಲ್ಲ ಮುಖಂಡರ ಜತೆ ಮುಕ್ತವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ಎರಡನೇ ಬಾರಿ ನಾನು ಮುಖ್ಯಮಂತ್ರಿಯಾದಾಗ ನನ್ನ 14 ತಿಂಗಳ ಆಡಳಿತಾವಧಿಯಲ್ಲಿ ನಾಲ್ಕೈದು ಬಾರಿ ವಿಧಾನಸಭೆಯಲ್ಲೇ ರೈತರ ಸಭೆ ಮಾಡಿದ್ದೇನೆ. ಆದರೆ, ಈ ಸರಕಾರ ಅಂಥ ಒಂದು ಸಭೆಯನ್ನೂ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.












Click it and Unblock the Notifications