ಕಾವೇರಿ ಹೋರಾಟ: ಸ್ಟಾಲಿನ್‌ಗೆ ಅಣುಕು ತಿಥಿ ಮಾಡಿದವರ ವಿರುದ್ಧ ಪ್ರಕರಣ ದಾಖಲು
ರಾಮನಗರ, ಸೆಪ್ಟೆಂಬರ್ 28: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಜಲ ಸಂರಕ್ಷಣಾ ಹೋರಾಟ ಸಮಿತಿ ರಾಮನಗರ ಬಂದ್‌ಗೆ ಕರೆ ನೀಡಿದ್ದರು. ಈ ಬಂದ್‌ಗೆ ಬೆಂಬಲಿಸಿ ರಸ್ತೆಗಿಳಿದು ಸರ್ಕಾರ, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಅಸ್ತ್ರ ಪ್ರಯೋಗಿಸಿದೆ.
ಕಳೆದ ಮಂಗಳವಾರ ಸೆಪ್ಟೆಂಬರ್26ರಂದು ಜಲ ಸಂರಕ್ಷಣಾ ಸಮಿತಿ ಕರೆ ನೀಡಿದ್ದ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಜಿಲ್ಲೆಯ ಹಲವು ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ವಕೀಲರು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ವಿರುದ್ಧ ಪೊಲೀಸ್ ಇಲಾಖೆ ಸೆಕ್ಷನ್ 143,147,153,290,341, 504,505, IPC 149 ಅಡಿ ಪ್ರಕರಣ ದಾಖಲು ಮಾಡುವ ಮೂಲಕ ಕಾನೂನು ಅಸ್ತ್ರ ಉಪಯೋಗಿಸಿದೆ.

ರಾಮನಗರ ಬಂದ್ ವೇಳೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ರಾಜ್ಯಾಧ್ಯಕ್ಷ ಎಲ್.ರಮೇಶ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾವೇರಿ ಸಂಘರ್ಷಕ್ಕೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಹಠಮಾರಿ ಧೋರಣೆ ಕಾರಣ ಎಂದು ಆರೋಪಿಸಿ ಸ್ಟಾಲಿನ್ ಅವರ ಅಣುಕು ತಿಥಿ ಮಾಡಿದ್ದ ಹೋರಾಟಗಾರರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಗರದ ಹಳೆ ಬೆಂಗಳೂರು ಮೈಸೂರು ಹೆದ್ದಾರಿಯ ಐಜೂರು ವೃತ್ತದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಹೋರಾಟಗಾರರು ಮೃತಪಟ್ಟ ವ್ಯಕ್ತಿಗೆ ಮಾಡುವ ತಿಥಿ ರೀತಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರದ ಮುಂದೆ ವಿವಿಧ ಆಹಾರ ಪದಾರ್ಥಗಳನ್ನು ಇಟ್ಟು ಹಾಲು ತುಪ್ಪ ಬಿಟ್ಟು, ರಾಜ್ಯದ ಕಾವೇರಿ ಸಂಕಷ್ಟಕ್ಕೆ ಕಾರಣನಾದ ಸ್ಟಾಲಿನ್ ಮತ್ತೆ ಹುಟ್ಟಿ ಬರಬೇಡ ಎಂಬ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅಣಕು ತಿಥಿ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದ, ಪ್ರತಿಭಟನಕಾರರ ವಿರುದ್ದ ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರ ಹಾಗೂ ಸಂಘಟನೆಯ ರಾಜ್ಯಾಧ್ಯಕ್ಷ ಎಲ್.ರಮೇಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರತಿಭಟನೆ ವೇಳೆ ಎರಡು ಭಾಷಿಕರ ನುಡುವೆ ದ್ವೇಷ ಹಾಗೂ ವೈಷಮ್ಯ ಉಂಟುಮಾಡುವ ರೀತಿ ಪ್ರಚೋಧನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಪೊಲೀಸರು, ಸೆಕ್ಷನ್ 143,147,153,290,341, 504,505, IPC 149 ಅಡಿ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.












Click it and Unblock the Notifications