ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹವಿರುವ ಗೌಡಗೆರೆ ಕ್ಷೇತ್ರದಲ್ಲಿ ಅದ್ಧೂರಿಯಾಗಿ ನೆರವೇರಿದ ಶತಚಂಡಿಕಾ ಯಾಗ
ರಾಮನಗರ, ಜುಲೈ, 18: ಭೀಮನ ಅಮಾವಾಸ್ಯೆ ಪ್ರಯುಕ್ತ ನಾಡಿನ ಅಧಿದೇವತೆ ಐತಿಹಾಸಿಕ ಚಾಮುಂಡೇಶ್ವರಿ ಅಮ್ಮನವರ ವಿಶ್ವದಲ್ಲೇ ಅತಿ ಎತ್ತರದ ಬೃಹತ್ ಪಂಚಲೋಹದ ಪ್ರತಿಮೆಯಿರುವ ಗೌಡಗೆರೆ ಕ್ಷೇತ್ರಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಭಕ್ತರು ಆಗಮಿಸಿ ಆಶೀರ್ವಾದ ಪಡೆದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಪರೂಪದ ಮಹಾಯಾಗದಲ್ಲಿ ಪಾಲ್ಗೊಂಡು ಸಾವಿರಾರು ಮಂದಿ ಭಕ್ತರು ಅಮ್ಮನ ಆಶೀರ್ವಾದ ಪಡೆದರು.
ಜಿಲ್ಲೆಯ ಚನ್ನಪಟ್ಟಣದ ಗೌಡಗೆರೆ ಗ್ರಾಮದಲ್ಲಿ 68 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಶ್ರೀ ಚಾಮುಂಡೇಶ್ವರಿ ವಿಗ್ರಹ ದಿಂದ ರಾಜ್ಯದ ಭಕ್ತರನ್ನು ತನ್ನ ಸೆಳೆಯುತ್ತಿರುವ ಶ್ರೀ ಕ್ಷೇತ್ರದಲ್ಲಿ ವಿಶ್ವಶಾಂತಿ, ಲೋಕಕಲ್ಯಾಣ ಹಾಗೂ ಸಮಸ್ತ ಭಕ್ತರ ಸಕಲ ಸಂಕಷ್ಟ ನಿವಾರಣೆಯ ಉದ್ದೇಶದಿಂದ 7 ದಿನಗಳ ತಂತ್ರಭಾಗ-ಶತಚಂಡಿಕಾ ಮಹಾಯಾಗ ಯಶಸ್ವಿಯಾಗಿ ನಡೆಯಿತು.

ಶತಚಂಡಿಕಾ ಮಹಾಯಾಗದ ವಿಶೇಷತೆ
ಶತಚಂಡಿಕಾ ಮಹಾಯಾಗವೂ ಕಳೆದ 7 ದಿನಗಳಿಂದ ಬೆಳಗಿನ ಜಾವದಿಂದ ರಾತ್ರಿಯವರೆಗೆ ನೂರಾರು ಆಗಮಿಕರು ಪ್ರಧಾನ ಅರ್ಚಕ ನವೀಶ್ ಶಾಸ್ತ್ರಿ, ನೇತೃತ್ವದಲ್ಲಿ ನಿರಂತರವಾಗಿ ನಡೆಯಿತು. ಅಂತಿಮ ದಿನವಾದ ಸೋಮವಾರ ದಶ ಮಹಾವಿದ್ಯಾ ಚಕ್ರ, ವಿಶ್ವಭೂಮಂಡಲ ಚಕ್ರ, ನಾಗಮಂಡಲ ಪೂಜೆ ಸೇರಿದಂತೆ ವಿಶೇಷ ಪೂಜೆಗಳು ನಡೆದವು. 11 ಹೋಮ ಕುಂಡಗಳಲ್ಲಿ 108 ಹೋಮ, 7 ಲಕ್ಷ ಬೀಜಾಕ್ಷರ, 7ಲಕ್ಷ ಮಂತ್ರಗಳನ್ನು ಪಠಿಸಲಾಯಿತು.
ಶತಚಂಡಿಕಾ ಮಹಾಯಾಗದ ಪೂರ್ಣಾಹುತಿಗೂ ಮುನ್ನ ಪೂರ್ಣಕುಂಭ, ವಾಸ್ತುಹೋಮ, ರಾಕ್ಷಯಜ್ಞ ಯಾಗಾಶಾಲ ಪ್ರವೇಶ ಸೇರಿದಂತೆ ನಾನಾ ವಿಧಿವಿಧಾನಗಳು ಜರುಗಿದವು. ನವಗ್ರಹ ಪೂಜೆ, ಬಲಿಪ್ರಧಾನ, ಸಂಕಲ್ಪಹೋಮ ಸೇರಿದಂತೆ 108 ಪ್ರಕಾರದ ಹೋಮಗಳು ಶ್ರದ್ಧಾಭಕ್ತಿಯಿಂದ ನಡೆದವು. ಯಾಗದ ಪ್ರಯುಕ್ತ ಬೀಜಾಕ್ಷರ, ಮಂತ್ರಗಳನ್ನು ಪಠಣ ಕಾರ್ಯವೂ ನಡೆಯಿತು.
ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹಾಲರವಿ ಸೇವೆ, ರಥೋತ್ಸವ ಹಾಗೂ ಪೂರ್ಣಾಹುತಿ ಕಾರ್ಯಕ್ರಮ ನಡೆಯಿತು. ಅಘೋರಿಗಳು ಹಾಗೂ ನಾಗಸಾಧುಗಳ ನೇತೃತ್ವದಲ್ಲಿ ಯಾಗದ ಪೂರ್ಣಾಹುತಿ ನಡೆಯಿತು. ಯಾಗದ ಪ್ರಯುಕ್ತ ಕ್ಷೇತ್ರದಲ್ಲಿ ನೆಲೆಸಿರುವ ಪವಾಡ ಬಸವಪ್ಪನಿಗೆ ಪಾದಪೂಜೆ ಸೇರಿದಂತೆ ಯಾಗಸ್ಥಳದ ಪ್ರದಕ್ಷಿಣೆಯೂ ಜರುಗಿತು. ಪೂರ್ಣಾಹುತಿಯಲ್ಲಿ ನೂರಾರು ಮಹಿಳೆಯರು ಬಾಗಿನದದೊಂದಿಗೆ ದೇವಾಲಯದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಗಮನ ಸೆಳೆದರು.
ಹೀಗೆ ವಿವಿಧ ಜಿಲ್ಲೆಗಳಿಂದ ಬಂದ ಭಕ್ತರು ತಂತ್ರಭಾಗ-ಶತಚಂಡಿಕಾ ಯಾಗವನ್ನು ಕಣ್ತುಂಬಿಕೊಂಡರು. ಅಲ್ಲದೆ ಈ ವೇಳೆ ಭಕ್ತರು ಸಹ ವಿವಿಧ ಗಿಡಮೂಲಿಕೆ ಹಾಗೂ ಸೌದೆಗಳನ್ನು ತಂದುಹಾಕುವ ಮೂಲಕ ಯಾಗದ ಪುಣ್ಯಕ್ಕೆ ಪಾತ್ರರಾದರು.
ಯಾಗದ ಅಂತಿಮ ದಿನ ಹಾಗೂ ಭೀಮನ ಅಮಾವಾಸ್ಯೆ ಪ್ರಯುಕ್ತ ಗೌಡಗೆರೆ ಕ್ಷೇತ್ರಕ್ಕೆ ಭಕ್ತಸಾಗರ ಹರಿದುಬಂದಿತ್ತು. ಸೋಮವಾರ ಮುಂಜಾನೆಯಿಂದ ರಾತ್ರಿವರೆಗೂ ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ತಾಯಿ ಚಾಮುಂಡೇಶ್ವರಿ ದೇವಿಯ ಪಂಚಲೋಹ ವಿಗ್ರಹಕ್ಕೆ ಪೂಜೆ ನೆರವೇರಿಸಿದರು. ಕೇವಲ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಮಹಾಯಾಗದಲ್ಲಿ ಭಾಗವಹಿಸಿ ಪುನೀತರಾದರು.
ದೂರದ ಊರುಗಳಿಂದ ಬಂತಹಹ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕ್ಷೇತ್ರದಲ್ಲಿ ಏಳುದಿನಗಳ ಕಾಲ ನಡೆದ ತಂತ್ರಭಾಗ ಶತಚಂಡಿಕಾ ಮಹಾಯಾಗದಲ್ಲಿ ವಿವಿಧ ಮಠಾಧೀಶರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಭಕ್ತಾಧಿಗಳಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಶ್ರೀ ಕ್ಷೇತ್ರದ ವತಿಯಿಂದ ಕ್ರಮಕೈಗೊಳ್ಳಲಾಗಿತ್ತು.
ಸರ್ವರ ಹಿತಕ್ಕಾಗಿ ಪ್ರಾರ್ಥನೆ
ಕೊನೆಯ ದಿನ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಯಾಗಕ್ಕೆ ಪೂರ್ಣಾಹುತಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜೀ, ಲೋಕಾಕಲ್ಯಾಣಾರ್ಥವಾಗಿ ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಪ್ತಯುಕ್ತ ಏಳುದಿನಗಳ ಮಹಾಯಾಗ ಹಮ್ಮಿಕೊಳ್ಳಲಾಗಿತ್ತು. ಯಾಗವನ್ನು ವಿಧಿವತ್ತಾಗಿ ನಡೆಸಿದ್ದು, ಸಾವಿರಾರು ಭಕ್ತರು ಯಾಗದಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ ಎಂದರು.
ಹಾಗೆಯೇ ಸಕಲ ಜೀವರಾಶಿಗಳ ಒಳಿತಿಗಾಗಿ ಶ್ರೀ ಕ್ಷೇತ್ರದ ವತಿಯಿಂದ ಬಹುಅಪರೂಪವಾದ ತಂತ್ರಭಾಗ-ಶತಚಂಡಿಕಾ ಹಮ್ಮಿಕೊಳ್ಳಲಾಗಿತ್ತು. ಈ ಯಾಗ ತಂತ್ರಭಾಗವಾಗಿದ್ದು, ಇದು ಬಹಳ ವಿಶೇಷವಾಗಿದೆ. ಯಾಗವನ್ನು ಕಣ್ತುಂಬಿಕೊಂಡ ಎಲ್ಲರಿಗೂ ಸನ್ಮಂಗಳ ಪ್ರಾಪ್ತಿಯಾಗಲಿದೆ. ಈ ಯಾಗಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದ ಸಲ್ಲಿಸಿದರು.












Click it and Unblock the Notifications