ಹೈನು ಉದ್ಯಮ ಸಂಕಷ್ಟದಲ್ಲಿದೆ, ಹಾಲಿನ ದರ ಹೆಚ್ಚಳಕ್ಕೆ ಬಮುಲ್ ಅಧ್ಯಕ್ಷರ ಆಗ್ರಹ
ರಾಮನಗರ, ಡಿಸೆಂಬರ್ 20: ಹಾಲಿನ ದರ ಏರಿಕೆಯಾಗದೆ ಹಾಲು ಒಕ್ಕೂಟ ಹಾಗೂ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಹೆಚ್ಚಿನ ನಷ್ಟವುಂಟಾಗುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ (ಬಮುಲ್) ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ರಾಮನಗರ ಜಿಲ್ಲೆ ಕನಕಪುರದ ಶಿವನಹಳ್ಳಿ ಮೆಗಾ ಡೈರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೂಡಲೇ ರಾಜ್ಯ ಸರ್ಕಾರ ಹಾಲಿನ ದರ ಏರಿಸಿ ಹಾಲು ಒಕ್ಕೂಟ ಹಾಗೂ ರೈತರಿಗೆ ಅನುಕೂಲ ಮಾಡಿಕೊಡದಿದ್ದರೆ, ಮುಂದಿನ ದಿನಗಳಲ್ಲಿ ಹಾಲು ಒಕ್ಕೂಟ ಹಾಗೂ ರೈತರಿಂದ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಪ್ರಸ್ತುತ ವಿಧಾನಸಭೆಯ ಕಲಾಪದಲ್ಲಿ ಚರ್ಚೆ ನಡೆಸಿ ಹಾಲಿನ ದರವನ್ನು ಕನಿಷ್ಠ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಬೇಕು. ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳಲ್ಲಿ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಅದರೆ ಸರ್ಕಾರ ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿಲ್ಲ ಎಂದು ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ಆರೋಪಿಸಿದರು.

ಹೊರ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ. ಆದರೆ, ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಿಂದ ಹಾಲಿನ ದರ ಏರಿಕೆಯಾಗದೇ ಹಾಲು ಒಕ್ಕೂಟ ಹಾಗೂ ರೈತರು ಹೆಚ್ಚಿನ ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತು ಹಾಲಿಗೆ ವೈಜ್ಞಾನಿಕ ದರವನ್ನು ನಿಗದಿ ಮಾಡುವುದರ ಮೂಲಕ ಒಕ್ಕೂಟಕ್ಕಾಗುತ್ತಿರುವ ನಷ್ಟದ ಜೊತೆಗೆ ಹೈನುಗಾರರ ನೆರವಿಗೆ ಬರುವಂತೆ ಆಗ್ರಹಿಸಿದರು.

ನಕಲಿ ನಂದಿನಿ ಉತ್ಪನ್ನಕ್ಕೆ ಕಡಿವಾಣ :
ನಂದಿನಿ ಹಾಲಿನ ಉತ್ಪನ್ನಗಳ ಹೆಸರು ಕೆಡಿಸಲು ಕೆಲವರು ನಂದಿನಿ ಬ್ರಾಂಡ್ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಕಾಳಸಂತೆಯಲ್ಲಿ ಗ್ರಾಹಕರಿಗೆ ನೀಡುತ್ತಾ ನಂದಿನಿ ಬ್ರಾಂಡ್‌ನ ಹೆಸರು ಕೆಡಿಸಲು ಮುಂದಾಗಿದ್ದಾರೆ. ಇದಕ್ಕೆ ತಾಜಾ ನಿದರ್ಶನ ಮೈಸೂರಿನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎಂದರು.
ಸಾರ್ವಜನಿಕರು, ಸಂಘಟನೆಗಳು ಹಾಗೂ ಮಾಧ್ಯಮಗಳು ಈ ನಕಲಿ ನಂದಿನಿ ಉತ್ಪನ್ನಗಳ ಬಗ್ಗೆ ಬೆಳಕು ಚೆಲ್ಲಿವೆ. ಕೆಎಂಎಫ್ ಮತ್ತು ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳ ಅಧಿಕಾರಿಗಳು ಇದನ್ನು ತಡೆಗಟ್ಟಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಈ ಹಿಂದೆಯೂ ರಾಜ್ಯದ ನಾನಾ ಕಡೆ ಇಂತಹ ಪ್ರಕರಣಗಳು ವರದಿಯಾಗಿದ್ದವು. ಇದನ್ನು ತಡೆಗಟ್ಟಲು ಕೆಎಂಎಫ್ ಮುಂದಾಗಿದೆ. ನಕಲಿ ಉತ್ಪನ್ನ ತಯಾರಿಕೆ ಮತ್ತು ಮಾರಾಟದ ಬಗ್ಗೆ ಈಗಾಗಲೇ ಹಾಲು ಒಕ್ಕೂಟದ ಸಭೆಯಲ್ಲಿ ಚರ್ಚೆ ನಡೆಸಿ, ಇದನ್ನು ತಡೆಗಟ್ಟಲು ಮತ್ತು ಈ ದಂಧೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬಮುಲ್ ನಿರ್ದೇಶಕ ಎಚ್.ಪಿ. ರಾಜ್‌ಕುಮಾರ್ ಮಾತನಾಡಿ, ರೈತ ಹಾಗೂ ಹಾಲು ಒಕ್ಕೂಟಕ್ಕೆ ಸಹಕಾರಿಯಾಗಲು ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಸಮಸ್ಯೆ ಬಿಗಡಾಯಿಸದಂತೆ ಎಚ್ಚರಿಕೆವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.












Click it and Unblock the Notifications