ಎಸ್‌ಪಿಗೆ ಫ್ರೆಂಡ್‌ಗೆ ರಿಕ್ವೆಸ್ಟ್ ಕಳಿಸಿ 75 ಸಾವಿರ ಕಳೆದುಕೊಂಡ 'ಡಿ' ಗ್ರೂಪ್ ನೌಕರ!
ರಾಮನಗರ, ನವೆಂಬರ್ 17; ಉನ್ನತ ಅಧಿಕಾರಿಯ ಸ್ನೇಹ ಸಂಪಾದನೆ ಆಸೆಗೆ ಬಿದ್ದು ನಕಲಿ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳಸಿದ ನೌಕರೊಬ್ಬರು ಸುಮಾರು75 ಸಾವಿರ ರೂ. ಹಣ ಕಳೆದುಕೊಂಡಿದ್ದಾರೆ. 'ಡಿ' ಗ್ರೂಪ್ ನೌಕರ ತನಗಾದ ವಂಚನೆಯ ವಿರುದ್ಧ ಸೈಬರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಮನಗರ ಜಿಲ್ಲಾ ಪಂಚಾಯತಿಯ 'ಡಿ' ಗ್ರೂಪ್ ನೌಕರ ಅನಿಲ್ ಎಂಬಾತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೆಸರಿನಲ್ಲಿದ್ದ ನಕಲಿ ಫೇಸ್ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದದರು. ಅದರ ಮೂಲಕ ಪರಿಚಯವಾದ ವಂಚಕರ ಮಾತು ನಂಬಿದ ಅನಿಲ್ ಸುಮಾರು 75 ಸಾವಿರ ಹಣ ಕಳೆದು ಕೊಂಡಿದ್ದಾರೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಫೋಟೋ ಇದ್ದ ನಕಲಿ ಖಾತೆಗೆ ಅನಿಲ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಅನಿಲ್ ಕಳಿಸಿದ ರಿಕ್ವೆಸ್ಟ್ ಸ್ವೀಕಾರವಾದ ನಂತರದಲ್ಲಿ, ಅನಿಲ್ ಗುಡ್ನೈಟ್ ಸರ್ ಎಂದು ಸಂದೇಶ ಕಳಿಸಿದ್ದಾರೆ. ಆ ಕಡೆಯಿಂದ ಹೇಗಿದ್ದೀರಿ? ಎಂದು ಮರು ಸಂದೇಶ ಬಂದಿತ್ತು. ಹೀಗೆ ಕುಶಲೋಕಪರಿ ನಡೆದಿದೆ.
ಹಣ ಕಳೆದುಕೊಂಡರು; ಮತ್ತೊಂದು ದಿನ ನನ್ನ ಸ್ನೇಹಿತ ಸಿಆರ್ಪಿಎಫ್ನಲ್ಲಿದ್ದು, ಅವನಿಗೆ ವರ್ಗಾವಣೆ ಆಗಿದೆ, ಅವನ ಬಳಿ ಇರುವ ಟಿವಿ, ಸೋಫಾ, ಫ್ರಿಡ್ಜ್ ಸೇರಿ ಎಲ್ಲವನ್ನೂ 75 ಸಾವಿರ ರೂ.ಗಳಿಗೆ ನೀಡುತ್ತಾನೆ ಎಂಬ ಸಂದೇಶ ಕಾರ್ತಿಕ್ ರೆಡ್ಡಿ ಅವರ ನಕಲಿ ಖಾತೆಯಿಂದ ಅನಿಲ್ಗೆ ಬಂದಿತ್ತು.
ಇಷ್ಟೇ ಅಲ್ಲದೆ, ಸಂತೋಷ್ ಎಂಬುವರ ಮೊಬೈಲ್ ನಂಬರ್ ಅನ್ನು ಅನಿಲ್ಗೆ ಶೇರ್ ಮಾಡಲಾಗಿತ್ತು. ಈ ಮೆಸೇಜ್ ಆಧರಿಸಿ ಅನಿಲ್, ಆತ ನೀಡಿದ ನಂಬರ್‌ಗೆ 75 ಸಾವಿರ ರೂ.ಗಳನ್ನು ಯುಪಿಐ ಆ್ಯಪ್ ಮೂಲಕ ವರ್ಗಾವಣೆ ಮಾಡಿದ್ದರು.
ಆದರೆ, ನಿಗದಿತ ಸಮಯಕ್ಕೆ ಯಾವುದೇ ವಸ್ತುಗಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡು ಎಸ್ಪಿ ಕಾರ್ತಿಕ್ ರೆಡ್ಡಿ ಅವರ ಫೋಟೋ ಇರುವ ಫೇಸ್ಬುಕ್ ನಕಲಿ ಖಾತೆಯ ಮೆಸೆಂಜರ್ನಲ್ಲಿ ಆಗಿರುವ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಆದರೆ, ಅಲ್ಲಿಂದಲೂ ಯಾವುದೇ ಉತ್ತರ ಬಾರದಿದ್ದಾಗ ಅದು ಕಾರ್ತಿಕ್ ರೆಡ್ಡಿ ಅವರ ನಕಲಿ ಫೇಸ್ಬುಕ್ ಅಕೌಂಟ್ ಎಂಬುದು ಅವರಿಗೆ ಗೊತ್ತಾಗಿದೆ. ಮೋಸ ಹೋಗಿರುವುದು ತಿಳಿದು ಠಾಣೆಗೆ ಗುರುವಾರ ಸಂಜೆ ದೂರು ನೀಡಿದ್ದಾರೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಉನ್ನತ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ತೆರೆದು ಹಲವು ಅಮಾಯಕರನ್ನು ವಂಚಿಸುತ್ತಿರವ ಹೊರ ರಾಜ್ಯದ ಒಂದು ತಂಡ ಸಕ್ರಿಯವಾಗಿದೆ. ಅರೆ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಮಾಡುತ್ತಿದ್ದಾರೆ ಎಂದು ನಂಬಿಸಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಾರ್ವಜನಿಕರು ಇತಂಹ ಮೋಸ ಜಾಲ ನಂಬಿ ಮೋಸ ಹೋಗಬಾರದು, ಈ ರೀತಿ ಮೋಸ ಜಾಲ ಕಂಡುಬಂದರೆ ತಕ್ಷಣ ಸೈಬರ್ ಪೋಲಿಸ್ ಠಾಣೆಗೆ ದೂರು ದಾಖಲಿಸಬೇಕು. ಒಂದು ವೇಳೆ ಮೋಸ ಹೋಗಿ ಹಣ ಪಾವತಿ ಮಾಡಿದ್ದರೆ ತಕ್ಷಣವೇ 1930 ಟೂಲ್ ಫ್ರೀ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದರೆ ಅತಂಹ ನಂಬರ್ ಬ್ಲಾಕ್ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಎಂದು ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications