ಚನ್ನಪಟ್ಟಣ ಉಪ ಚುನಾವಣೆ ಅಭ್ಯರ್ಥಿ ಯಾರು?, ಸುಳಿವು ಕೊಟ್ಟ ಎಚ್‌ಡಿಕೆ
ರಾಮನಗರ, ಜೂನ್ 24: ಲೋಕಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ಕರ್ನಾಟಕದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಮೂರು ಕ್ಷೇತ್ರಗಳ ಪೈಕಿ ಚನ್ನಪಟ್ಟಣದ ಉಪ ಚುನಾವಣೆ ವಿವಿಧ ಕಾರಣಕ್ಕೆ ಕುತೂಹಲ ಮೂಡಿಸಿದೆ. ಈ ಕ್ಷೇತ್ರದ ಶಾಸಕರಾಗಿದ್ದವರು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ.
ಮಂಡ್ಯ ಸಂಸದ, ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ಭಾನುವಾರ ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಕ್ಷೇತ್ರದ ಉಪ ಚುನಾವಣೆ ಬಗ್ಗೆ ಮಾತನಾಡಿದ್ದು, ಅಭ್ಯರ್ಥಿ ಯಾರು? ಎಂಬ ಸುಳಿವು ನೀಡಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಎಸ್. ಕೇವಲ 15,374 ಮತ ಪಡೆದಿದ್ದರು.
ಈ ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಗೆಲ್ಲಬೇಕು ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಂತ್ರ ರೂಪಿಸುತ್ತಿದ್ದಾರೆ. ಕ್ಷೇತ್ರಕ್ಕೆ ಪದೇ-ಪದೇ ಭೇಟಿ ನೀಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಕಂಡ ಡಿ. ಕೆ. ಸುರೇಶ್ ಚನ್ನಪಟ್ಟಣದಿಂದ ಕಣಕ್ಕಿಳಿಯಬಹುದು ಎಂಬ ಸುದ್ದಿಗಳು ಹಬ್ಬಿವೆ.
ಕುಮಾರಸ್ವಾಮಿ ಸುಳಿವು ಏನು?: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲಿದೆಯೇ?. ಹಾಗಾದರೆ ಮೈತ್ರಿಕೂಟದ ಅಭ್ಯರ್ಥಿ ಯಾರು?, ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದಿಲ್ಲವೇ? ಎಂಬ ಹಲವಾರು ಪ್ರಶ್ನೆಗಳಿವೆ.
ಎಚ್. ಡಿ. ಕುಮಾರಸ್ವಾಮಿ ಮಾತನಾಡಿ, "ಕೆಲವು ಮಾಧ್ಯಮಗಳು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಬಹುದು ಎಂದು ಅಂದಾಜಿಸಿವೆ. ಎರಡು ಚುನಾವಣೆಯಲ್ಲಿ ಸೋತಿರುವ ಅವರು ಸ್ಪರ್ಧೆ ಮಾಡುವುದಿಲ್ಲ. ಜೆಡಿಎಸ್ ಪಕ್ಷದ ಬಗ್ಗೆ, ಜನರ ಬಗ್ಗೆ ಕಾಳಜಿ ಹೊಂದಿರುವ ಸಿ. ಪಿ. ಯೋಗೀಶ್ವರ್ ಅಂತಹ ಅಭ್ಯರ್ಥಿ ಸ್ಪರ್ಧಿಸಬಹುದು. ಬಿಜೆಪಿ-ಜೆಡಿಎಸ್ ನಡುವೆ ಯಾವುದೇ ಗೊಂದಲವಾಗದಂತೆ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ" ಎಂದರು.
ಡಿ. ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, "ಗಣಿಗಾರಿಕೆ ನಡೆಸಿ, ಕಲ್ಲು ಸಾಗಿಸಿದ್ದು ಬಿಟ್ಟರೆ ಅವರ ಕೊಡುಗೆ ಕ್ಷೇತ್ರಕ್ಕೆ ಏನಿದೆ. ಎಚ್. ಡಿ. ದೇವೇಗೌಡರು ಮತ್ತು ನಾನು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ರೇಷ್ಮೆ ಮಾರುಕಟ್ಟೆ, ಟೊಯೋಟಾ ಘಟಕ ತಂದಿದ್ದೇವೆ" ಎಂದು ಹೇಳಿದರು.
ಚನ್ನಪಟ್ಟಣದ ಚುನಾವಣೆ ಎಂದರೆ ಮಾಜಿ ಸಚಿವ ಸಿ. ಪಿ. ಯೋಗೀಶ್ವರ್ ಮತ್ತು ಎಚ್. ಡಿ. ಕುಮಾರಸ್ವಾಮಿ ನಡುವಿನ ಪೈಪೋಟಿಯಾಗಿತ್ತು. ಆದರೆ ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಕಾರಣ ಜೆಡಿಎಸ್ ತನ್ನ ಪ್ರಭಾವ ಇರುವ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡಬೇಕಿದೆ. ಸಿ. ಪಿ. ಯೋಗೀಶ್ವರ್ ಅಭ್ಯರ್ಥಿಯಾದರೆ ಬೆಂಬಲಿಸಬೇಕಿದೆ.
ಸೋಮವಾರ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತೆ ಚನ್ನಪಟ್ಟಣದ ಪ್ರವಾಸ ಕೈಗೊಂಡಿದ್ದಾರೆ. ಜೂನ್ 18ರಂದು ಅವರು ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ವಿವಿಧ ದೇವಾಲಯಗಳಿಗೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ರಾಮನಗರ ಜಿಲ್ಲೆ ಡಿ. ಕೆ. ಶಿವಕುಮಾರ್ ತವರು ಜಿಲ್ಲೆ. ಆದ್ದರಿಂದ ಚನ್ನಪಟ್ಟಣ ಉಪ ಚುನಾವಣೆ ಗೆಲ್ಲಬೇಕು ಎಂದು ಅವರು ತಂತ್ರ ರೂಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.












Click it and Unblock the Notifications